Guru Vaibhavotsava 2026 ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ, ಶ್ರೀ ಗುರುರಾಯರ 405ನೇ ಪಟ್ಟಾಭಿಷೇಕ ಹಾಗೂ 431ನೇ ವರ್ಧಂತೋತ್ಸವದ ಅಂಗವಾಗಿ ‘ಶ್ರೀ ರಾಘವೇಂದ್ರ ಗುರು ವೈಭವೋತ್ಸವ’ಕ್ಕೆ ಚಾಲನೆ ನೀಡಲಾಗಿದೆ.
ರಾಯಚೂರು (ಫೆ.19): ಮಂತ್ರಾಲಯದ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಮ್ಮಿಕೊಂಡಿರುವ ಶ್ರೀ ರಾಘವೇಂದ್ರ ಗುರು ವೈಭವೋತ್ಸವಕ್ಕೆ ವಿಧ್ಯುಕ್ತವಾಗಿ ಬುಧವಾರ ಚಾಲನೆ ದೊರಕಿತು.
ಶ್ರೀಗುರುರಾಯರ 405ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 431ನೇ ವರ್ಧಂತೋತ್ಸವ (ಜನ್ಮದಿನ)ದ ಪ್ರಯುಕ್ತ ಶ್ರೀಮಠದಿಂದ ಆಯೋಜಿಸಿರುವ ಶ್ರೀರಾಘವೇಂದ್ರ ಗುರು ವೈಭವೋತ್ಸವದಲ್ಲಿ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಏಳು ದಿನಗಳ ಕಾಲ (ಫೆ.18 ರಿಂದ 24 ವರೆಗೆ) ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು, ಧಾರ್ಮಿಕ ಪ್ರವಚನ, ಹಲವು ಭಾಷೆಗಳಲ್ಲಿ ಬರೆದ ಧಾರ್ಮಿಕ, ಆಧ್ಯಾತ್ಮಿಕ ಗ್ರಂಥಗಳ ಲೋಕಾರ್ಪಣೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಸ್ವಾಮೀಜಿಗಳು ಉದ್ಘಾಟಿಸಿದರು.
ಫೆ.19 ರ ಗುರುವಾರ ಶ್ರೀಮಠದ ಪ್ರಾಕಾರದಲ್ಲಿನ ಡೋಲೋತ್ಸವ ಮಂಟಪದಲ್ಲಿ ಶ್ರೀಗುರುರಾಯರ 405ನೇ ಪಾದುಕಾ ಪಟ್ಟಾಭಿಷೇಕ, ಫೆ.19 ಮತ್ತು 22 ಕ್ಕೆ ಸಂಜೆ 6:30 ಕ್ಕೆ ಶ್ರೀಮಠದ ಸಮೀಪದಲ್ಲಿರುವ ಶ್ರೀ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ತೆಪೋತ್ಸವ, 23ಕ್ಕೆ ಟಿಟಿಡಿಯ ಶ್ರೀವಾರಿ ಶೇಷವಸ್ತ್ರ ಸಮರ್ಪಣೆ, ಫೆ.24 ಕ್ಕೆ ವರ್ಧಂತಿ ಉತ್ಸವದ ಪ್ರಯುಕ್ತ ಚನ್ನೈನ ನಾದಹಾರ ಟ್ರಸ್ಟ್ನಿಂದ 21ನೇ ವರ್ಷದ ನಾದಹಾರ ಸೇವೆ ಸೇರಿ ಮೊದಲಾದ ಕಾರ್ಯಕ್ರಮಗಳು ಜರುಗಲಿವೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ನಟ ರಿಷಬ್ ಶೆಟ್ಟಿ, ಸಾಯಿಕುಮಾರ ಸೇರಿ ವಿವಿಧ ರಾಜ್ಯಗಳ ಸಚಿವರು, ಶಾಸಕರು, ಸಂಸದರು, ನ್ಯಾಯಾಧೀಶರು, ಪ್ರಮುಖ ದೇವಸ್ಥಾನಗಳ ಪ್ರದಾನ ಅರ್ಚಕರು ಸೇರಿದಂತೆ ಅನೇಕ ಗಣ್ಯಮಾನ್ಯರು ಏಳು ದಿನಗಳ ಗುರುವೈಭವೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
