ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ರೀಲ್ಸ್ ಹುಚ್ಚಿಗೆ ಬಿಜೆಪಿ ಮುಖಂಡ ವೀರೇಶ್‌ ಸಂಗಳದ ಪುತ್ರ ಬಲಿ! | Hubballi Accident Bjp Leader Veeresh Sangalad Son Namish Death Reels Craze San

ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ರೀಲ್ಸ್ ಹುಚ್ಚಿಗೆ ಬಿಜೆಪಿ ಮುಖಂಡ ವೀರೇಶ್‌ ಸಂಗಳದ ಪುತ್ರ ಬಲಿ! | Hubballi Accident Bjp Leader Veeresh Sangalad Son Namish Death Reels Craze San


ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣದ ರೀಲ್ಸ್ ಮಾಡುವಾಗ ನಡೆದ ಭೀಕರ ಅಪಘಾತದಲ್ಲಿ ಬಿಜೆಪಿ ಮುಖಂಡನ 15 ವರ್ಷದ ಪುತ್ರ ನಮೀಷ್ ಸಂಗಳದ ಮೃತಪಟ್ಟಿದ್ದಾನೆ. ಅತೀ ವೇಗವಾಗಿ ಬೈಕ್ ಮತ್ತು ಆಡಿ ಕಾರು ಚಲಾಯಿಸುವ ಸಾಹಸದ ವಿಡಿಯೋ ಚಿತ್ರೀಕರಿಸುವಾಗ ಈ ದುರಂತ ಸಂಭವಿಸಿದ್ದು, ಕಾರು ಚಲಾಯಿಸುತ್ತಿದ್ದವನೂ ಅಪ್ರಾಪ್ತನಾಗಿದ್ದ.

ಹುಬ್ಬಳ್ಳಿ (ಮಾ.19): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣದ ‘ರೀಲ್ಸ್’ ಕ್ರೇಜ್ ಮತ್ತೊಂದು ಬಲಿ ಪಡೆದಿದೆ. ಅತೀ ವೇಗವಾಗಿ ವಾಹನ ಚಲಾಯಿಸುವ ಸಾಹಸದ ವಿಡಿಯೋ ಮಾಡಲು ಹೋಗಿ, ಸ್ಥಳೀಯ ಬಿಜೆಪಿ ಮುಖಂಡ ವಿರೇಶ್ ಸಂಗಳದ ಅವರ ಪುತ್ರ ನಮೀಷ್ ಸಂಗಳದ (15) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ಘಟನೆ ಬರಸಿಡಿಲಿನಂತೆ ಎರಗಿದೆ.

ಮೈಸೂರಿನಲ್ಲಿ 9ನೇ ತರಗತಿ ಓದುತ್ತಿದ್ದ ನಮೀಷ್, ಯುಗಾದಿ ಹಬ್ಬದ ರಜೆಗಾಗಿ ಹುಬ್ಬಳ್ಳಿಯ ಮನೆಗೆ ಬಂದಿದ್ದ. ಗುರುವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಸೇರಿ ಶೇಜವಾಡಕ್ಕರ್ ಪ್ಲಾಟ್‌ಗೆ ರೀಲ್ಸ್ ಮಾಡಲು ತೆರಳಿದ್ದ. ಅಲ್ಲಿ ಅತೀ ವೇಗವಾಗಿ ಬೈಕ್ ಮತ್ತು ಆಡಿ (AUDI) ಕಾರು ಚಲಾಯಿಸುವ ‘ಸ್ಟಂಟ್ ಹಾಗೂ ಕ್ರ್ಯಾಶ್’ ರೀಲ್ಸ್ ಚಿತ್ರೀಕರಿಸಲು ಈ ಬಾಲಕರು ಮುಂದಾಗಿದ್ದರು.

ಆಘಾತಕಾರಿ ವಿಷಯವೆಂದರೆ, ಅಪಘಾತಕ್ಕೆ ಕಾರಣವಾದ ಆಡಿ ಕಾರನ್ನು ಚಲಾಯಿಸುತ್ತಿದ್ದವನು ಕೂಡ 15 ವರ್ಷದ ಅಪ್ರಾಪ್ತ ಬಾಲಕನೇ ಆಗಿದ್ದ. ರೀಲ್ಸ್ ಮಾಡುವ ಭರದಲ್ಲಿ ಅತೀ ವೇಗವಾಗಿ ಬಂದ ಕಾರು, ಬೈಕ್‌ನಲ್ಲಿದ್ದ ನಮೀಷ್‌ಗೆ ಬಲವಾಗಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ನಮೀಷ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ಸ್ಥಳಕ್ಕೆ ಕಮಿಷನರ್ ಭೇಟಿ

ಘಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಎಸಗಿದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಲೈಸೆನ್ಸ್ ಇಲ್ಲದಿದ್ದರೂ ಬಾಲಕನ ಕೈಗೆ ದುಬಾರಿ ಕಾರು ನೀಡಿದ್ದು ಯಾರು? ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ಪ್ರಾಣದ ಹಂಗು ತೊರೆದು ಅಪಾಯಕಾರಿ ಸಾಹಸಗಳನ್ನು ಮಾಡುತ್ತಿರುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗನನ್ನು ಕಳೆದುಕೊಂಡ ಸಂಗಳದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.



Source link

Leave a Reply

Your email address will not be published. Required fields are marked *