
ಧಾರವಾಡದಲ್ಲಿ ಪ್ರತಿಭಟಿಸುತ್ತಿರುವ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ನೇಮಕಾತಿ ವಿಳಂಬದಿಂದ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗಾಗಿ, ಮುಂಬರುವ ನೇಮಕಾತಿಗಳಲ್ಲಿ ಗರಿಷ್ಠ ವಯೋಮಿತಿಯನ್ನು 5 ವರ್ಷಗಳವರೆಗೆ ಸಡಿಲಿಸುವುದಾಗಿ ಘೋಷಿಸಿದ್ದಾರೆ.
ಬೆಂಗಳೂರು/ಧಾರವಾಡ (ಫೆ.24): ಕಳೆದ ಕೆಲವು ದಿನಗಳಿಂದ ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಸರಣಿ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಭ್ಯರ್ಥಿಗಳಿಗೆ ದೊಡ್ಡ ಸಮಾಧಾನಕರ ಸುದ್ದಿಯೊಂದನ್ನು ನೀಡಿದ್ದಾರೆ. ನೇಮಕಾತಿ ವಿಳಂಬದಿಂದಾಗಿ ವಯೋಮಿತಿ ಮೀರುತ್ತಿರುವ ಆತಂಕದಲ್ಲಿರುವ ಯುವಜನತೆಗಾಗಿ ಮುಂಬರುವ ನೇಮಕಾತಿಗಳಲ್ಲಿ ವಯೋಮಿತಿಯನ್ನು 5 ವರ್ಷಗಳವರೆಗೆ ಸಡಿಲಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ನಿಮ್ಮ ಕಳಕಳಿ ನಮಗೆ ಕೇಳಿಸಿದೆ:
ಈ ಕುರಿತು ಸುದೀರ್ಘ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ, ‘ಪ್ರತಿಯೊಂದು ಅರ್ಜಿಯ ಹಿಂದೆ ಒಂದು ಕುಟುಂಬದ ಭರವಸೆ ಮತ್ತು ವರ್ಷಗಳ ಪರಿಶ್ರಮವಿರುತ್ತದೆ ಎಂಬುದು ನನಗೆ ತಿಳಿದಿದೆ. ಉದ್ಯೋಗಾಕಾಂಕ್ಷಿಗಳು ಅನುಭವಿಸುತ್ತಿರುವ ಆತಂಕ ಮತ್ತು ಹತಾಶೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಿಮ್ಮ ಭವಿಷ್ಯ ನಮಗೆ ಅತ್ಯಂತ ಮುಖ್ಯವಾಗಿದೆ’ ಎಂದು ಭರವಸೆ ನೀಡಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ:
ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಬೃಹತ್ ಪ್ರಮಾಣದಲ್ಲಿ ಖಾಲಿ ಇರುವುದಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಸಿದ್ದರಾಮಯ್ಯ ನೇರ ವಾಗ್ದಾಳಿ ನಡೆಸಿದ್ದಾರೆ. ‘ನಾವು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ 2.64 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದವು. ಇದು ಹಿಂದಿನ ಸರ್ಕಾರದ ನಿಷ್ಕ್ರಿಯತೆಯ ಫಲ. 2019 ರಿಂದ 2023ರ ನಡುವೆ ನಡೆದ ನೇಮಕಾತಿ ಅಕ್ರಮಗಳು ಮತ್ತು ಭ್ರಷ್ಟಾಚಾರದ ಹಗರಣಗಳು ಇಡೀ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕುಂದಿಸಿದವು. ಈಗ ವಿರೋಧ ಪಕ್ಷದ ನಾಯಕರು ರಾಜಕೀಯ ಹಿತಾಸಕ್ತಿಗಾಗಿ ಮುಗ್ಧ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ’ ಎಂದು ಕಿಡಿಕಾರಿದ್ದಾರೆ.
ಒಳ ಮೀಸಲಾತಿ ಮತ್ತು ಕಾನೂನು ಸವಾಲು:
ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳ್ಳಲು ಇರುವ ತಾಂತ್ರಿಕ ಕಾರಣಗಳನ್ನು ವಿವರಿಸಿದ ಮುಖ್ಯಮಂತ್ರಿಗಳು, ಒಳ ಮೀಸಲಾತಿಗೆ ಸಂಬಂಧಿಸಿದ ಕಾನೂನು ಸವಾಲುಗಳು ನ್ಯಾಯಾಲಯದ ಮುಂದೆ ಇದ್ದಿದ್ದರಿಂದ ಕೆಲವು ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಆತುರದ ನಿರ್ಧಾರ ತೆಗೆದುಕೊಂಡು ಅಭ್ಯರ್ಥಿಗಳ ವೃತ್ತಿಜೀವನಕ್ಕೆ ಧಕ್ಕೆ ತರುವ ಬದಲು, ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಲು ಸರ್ಕಾರ ನಿರ್ಧರಿಸಿತು ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಸಾಧನೆ ಮತ್ತು ಮುಂದಿನ ಗುರಿ:
ಸಂಕಷ್ಟಗಳ ನಡುವೆಯೂ ಕಳೆದ 2.5 ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ 40,000 ಕ್ಕೂ ಹೆಚ್ಚು ನೇಮಕಾತಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ. ವಯೋಮಿತಿ ಸಡಿಲಿಕೆಯ ನಿರ್ಧಾರದಿಂದಾಗಿ ಸಾವಿರಾರು ಅರ್ಹ ಅಭ್ಯರ್ಥಿಗಳಿಗೆ ಮತ್ತೆ ಅವಕಾಶ ಸಿಗಲಿದೆ. ಇನ್ನು ಮುಂದೆ ಕಾಲಮಿತಿಯಲ್ಲಿ, ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ವೇಗಗೊಳಿಸಲು ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಮನವಿ:
‘ಕರ್ನಾಟಕದ ಯುವಜನತೆಯೇ ನಮ್ಮ ಭವಿಷ್ಯದ ಶಿಲ್ಪಿಗಳು. ದಯವಿಟ್ಟು ಆತ್ಮವಿಶ್ವಾಸ ಮತ್ತು ತಾಳ್ಮೆಯಿಂದ ನಿಮ್ಮ ಸಿದ್ಧತೆಯ ಮೇಲೆ ಗಮನ ಕೇಂದ್ರೀಕರಿಸಿ. ನಮ್ಮ ಸರ್ಕಾರವು ಕೃತಿಯಲ್ಲಿ ನಿಮ್ಮೊಂದಿಗೆ ದೃಢವಾಗಿ ನಿಲ್ಲುತ್ತದೆ’ ಎಂದು ಉದ್ಯೋಗಾಕಾಂಕ್ಷಿಗಳಲ್ಲಿ ಸಿಎಂ ಮನವಿ ಮಾಡಿದ್ದಾರೆ.