
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ರಿಯಲ್ ಎಸ್ಟೇಟ್ ಏಜೆಂಟ್ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಈ ಕೃತ್ಯದ ಸಂಚನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಯೊಬ್ಬ ಪೆರೋಲ್ ಮೇಲೆ ಹೊರಬಂದಾಗ ರೂಪಿಸಿದ್ದಾರೆ.
ಬೆಂಗಳೂರು: ನಗರದ ಬ್ಯಾಡರಹಳ್ಳಿ ಸಮೀಪ ಇತ್ತೀಚೆಗೆ ನಡೆದಿದ್ದ ಪೊಲೀಸ್ ಸಮವಸ್ತ್ರ ಧರಿಸಿದ ಕಿಡಿಗೇಡಿಗಳ ದರೋಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಈ ಕೃತ್ಯದ ಹಿಂದೆ ಕಾರಾಗೃಹದಲ್ಲಿರುವ ಕೈದಿಯೊಬ್ಬನ ಕೈವಾಡವಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದ ಶಂಕಿತ ಕೈದಿಯನ್ನು ಬಾಡಿ ವಾರೆಂಟ್ ಪಡೆದು ಬ್ಯಾಡರಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ರಿಯಲ್ ಎಸ್ಟೇಟ್ ಏಜೆಂಟ್ ಮನೆಗೆ ತೆರಳಿದ್ದ ಆರೋಪಿಗಳು, ತಾವು ಯಲಹಂಕ ಸಬ್ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡು ಬೆದರಿಕೆ ಹಾಕಿದ್ದರು. ಬಳಿಕ ಮನೆಮಾಲೀಕರನ್ನು ಭಯಪಡಿಸಿ ಸುಮಾರು ₹20 ಲಕ್ಷ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಪ್ರಕರಣವು ನಗರದಲ್ಲಿ ಭಾರೀ ಆತಂಕ ಮೂಡಿಸಿತ್ತು.
ಘಟನೆಯ ತನಿಖೆಗೆ ಇಳಿದಿದ್ದ ಪೊಲೀಸರು, ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಘಟನಾ ಸ್ಥಳದಲ್ಲಿ ಲಭ್ಯವಾದ ಸಾಂದರ್ಭಿಕ ಪುರಾವೆಗಳ ಸೂಕ್ಷ್ಮ ವಿಶ್ಲೇಷಣೆ ನಡೆಸಿದರು. ಈ ಪರಿಶೀಲನೆಯ ವೇಳೆ ಕಾರಾಗೃಹದಲ್ಲಿರುವ ಕೈದಿಯೊಬ್ಬನ ಸುಳಿವು ದೊರೆತಿದ್ದು, ತನಿಖೆ ಆ ದಿಕ್ಕಿನಲ್ಲಿ ಮುಂದುವರಿದಿದೆ.
ಪೋಲೀಸ್ ಯೂನಿಫಾರ್ಮ್ ಖರೀದಿ ಮಾಡಿ ವಂಚನೆ
ಪೊಲೀಸರು ನಡೆಸಿದ ತನಿಖೆಯಲ್ಲಿ, ಆರೋಪಿಯು ಕೃತ್ಯಕ್ಕೆ ಬಳಸಿದ್ದ ಪೊಲೀಸ್ ಸಮವಸ್ತ್ರವನ್ನು ಶಿವಾಜಿನಗರದ ಅಂಗಡಿಯೊಂದರಲ್ಲಿ ಖರೀದಿಸಿದ್ದಾನೆ. ಅಂಗಡಿಯವರ ಮುಂದೆ “ಸಿನಿಮಾ ಶೂಟಿಂಗ್‌ಗಾಗಿ ಯೂನಿಫಾರ್ಮ್ ಬೇಕು” ಎಂದು ಹೇಳಿ ಖರೀದಿ ಮಾಡಿದ್ದಾನೆ. ಪರಿಚಯವಿಲ್ಲದವರಿಗೆ ಸಮವಸ್ತ್ರ ಮಾರಾಟ ಮಾಡುವುದಿಲ್ಲ ಎಂದು ಮೊದಲಿಗೆ ಅಂಗಡಿಯವರು ನಿರಾಕರಿಸಿದ್ದರೂ, ಶೂಟಿಂಗ್ ಕಾರಣ ನೀಡಿ ನಂಬಿಸಿ ಯೂನಿಫಾರ್ಮ್ ಪಡೆದುಕೊಂಡಿದ್ದಾನೆ. ಈ ಸಂಬಂಧ ಅಂಗಡಿ ಮಾಲೀಕನನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕೃತ್ಯದ ಬಳಿಕ ದಾವಣಗೆರೆಗೆ ತೆರಳಿದ್ದ ಆರೋಪಿ
ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿಯು ದರೋಡೆ ಕೃತ್ಯ ಎಸಗಿದ ಬಳಿಕ ದಾವಣಗೆರೆಗೆ ತೆರಳಿದ್ದಾನೆ. ಆರೋಪಿ ಪೆರೋಲ್ ಮೇಲೆ ಹೊರಬಂದಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಕದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ಎಲ್ಲಿಟ್ಟಿದ್ದಾನೆ ಎಂಬುದರ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಆರೋಪಿ ನಾಗೇಂದ್ರನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಈ ದರೋಡೆಗೆ ಇನ್ನು ಯಾರ ಸಹಕಾರ ನೀಡಿದ್ದಾರೆ ಎಂಬುದರ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಒಟ್ಟಾರೆ, ಪೊಲೀಸ್ ಸಮವಸ್ತ್ರದ ದುರುಪಯೋಗ ಮಾಡಿ ನಡೆದ ಈ ದರೋಡೆ ಪ್ರಕರಣವು ನಗರದ ಭದ್ರತೆ ಕುರಿತು ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.