ಆಳಂದ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿಯಂದು ಪೂಜೆ ಸಲ್ಲಿಸಲು 15 ಜನರಿಗೆ ಅನುಮತಿ ಕೋರಿ ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸರ್ಕಾರ, ಜಿಲ್ಲಾಡಳಿತವು ವಕ್ಫ್ ಸಮಿತಿಯೊಂದಿಗೆ ಸೇರಿ ಪೂಜೆಗೆ ಅಡ್ಡಿಪಡಿಸಲು ಷಡ್ಯಂತ್ರ ರೂಪಿಸುತ್ತಿದೆ ಎಂದು ಆರೋಪಿಸಿದರು.
ಕಲಬುರಗಿ (ಫೆ.11): ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಪೂಜೆ ಸಲ್ಲಿಸಲು ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಆಂದೋಲ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಈ ಬಾರಿ 15 ಜನರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಸ್ಪಷ್ಟಪಡಿಸಿದರು.
ದರ್ಗಾದಲ್ಲಿರುವ ಶಿವಲಿಂಗಕ್ಕೆ ಅಪಚಾರ: ಸ್ವಾಮೀಜಿ ಆಕ್ರೋಶ
ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯ ಶಿವಲಿಂಗವಿದ್ದು, 2020ರಲ್ಲಿ ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಲಾಗಿತ್ತು. ಅಲ್ಲಿ ಮಜರ್ ಇದೆ ಎಂದು ಹೇಳಿ ಶಿವಲಿಂಗದ ಮೇಲೆ ಚಾದರ್ ಹೊದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶಿವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸಲು ನಿರ್ಧರಿಸಲಾಗಿದೆ. ಕಳೆದ 2022ರಲ್ಲಿ ಪೂಜೆ ಮುಗಿಸಿ ಬರುವಾಗ ಮುಸ್ಲಿಂ ಸಮುದಾಯದ ಕೆಲವರಿಂದ ಭಾರಿ ಕಲ್ಲು ತೂರಾಟ ನಡೆದಿತ್ತು. ಅಂದಿನ ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕ ಸುಭಾಷ್ ಗುತ್ತೇದಾರ್ ಹಾಗೂ ಡಿಸಿ, ಎಸ್ಪಿಯವರ ಕಾರುಗಳ ಮೇಲೆ ದಾಳಿ ನಡೆದಿತ್ತು ಎಂದು ಸ್ವಾಮೀಜಿ ಘಟನೆಯನ್ನು ಸ್ಮರಿಸಿದರು.
ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಷಡ್ಯಂತ್ರದ ಆರೋಪ
ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಬಾರದು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಷಡ್ಯಂತ್ರ ರೂಪಿಸುತ್ತಿದೆ ಎಂದು ಸಿದ್ದಲಿಂಗ ಸ್ವಾಮೀಜಿ ಗಂಭೀರ ಆರೋಪ ಮಾಡಿದರು. ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ಅವರು ವಕ್ಫ್ ಕಮಿಟಿ ಜೊತೆ ಕೈಜೋಡಿಸಿದ್ದಾರೆ. ಆದರೂ ನ್ಯಾಯಾಲಯದ ಮೇಲೆ ನಮಗೆ ನಂಬಿಕೆಯಿದ್ದು, ಈ ಬಾರಿಯೂ ನಮಗೆ ಪೂಜೆ ಸಲ್ಲಿಸಲು ಅವಕಾಶ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು. ಪೂಜೆಗೂ ಮುನ್ನ ನಗರದ ರಾಮ ಮಂದಿರದಲ್ಲಿ 15ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರಿಗೆ ಸ್ವಾಮೀಜಿ ಶಿವಮಾಲೆ ಧಾರಣೆ ಮಾಡಿಸಿದರು.
ಗನ್ ಹಿಡಿದು ಡ್ಯಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡನ ಬಂಧಿಸಲು ತಾಕತ್ತಿಲ್ಲವೇ?
ಇದೇ ವೇಳೆ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಗನ್ ಹಿಡಿದು ಡ್ಯಾನ್ಸ್ ಮಾಡಿದ ವಿಚಾರವಾಗಿ ಮಾತನಾಡಿದ ಶ್ರೀಗಳು, ‘ಸರ್ಕಾರಕ್ಕೆ ಮತೀನ್ ಪಟೇಲ್‌ನನ್ನು ಅರೆಸ್ಟ್ ಮಾಡುವ ತಾಕತ್ತಿಲ್ಲವೇ? ಎಂದು ಪ್ರಶ್ನಿಸಿದರು. ಒಬ್ಬ ಸ್ವಾಮೀಜಿ ಗನ್ ಪ್ರದರ್ಶನ ಮಾಡಿದರೆ ಕೂಡಲೇ ಬಂಧಿಸುವ ಪೊಲೀಸರು, ಕಾಂಗ್ರೆಸ್ ಮುಖಂಡನ ವಿಷಯದಲ್ಲಿ ಯಾಕೆ ಮೌನವಾಗಿದ್ದಾರೆ? ಕೂಡಲೇ ಮತೀನ್ ಪಟೇಲ್‌ನನ್ನು ಬಂಧಿಸಿ, ಆತನ ಗನ್ ಲೈಸೆನ್ಸ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಿಯಾಂಕ್ ಖರ್ಗೆ ವಿರುದ್ಧ ‘ಸೂಪರ್ ಸಿಎಂ’ ವಾಗ್ದಾಳಿ
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ ಸಿದ್ದಲಿಂಗ ಸ್ವಾಮೀಜಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು. ಪ್ರಿಯಾಂಕ್ ಖರ್ಗೆ ಅವರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರು ನಗರಕ್ಕೆ ಬಂದರೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಅವರು ‘ಸೂಪರ್ ಸಿಎಂ’ ರೀತಿ ವರ್ತಿಸುತ್ತಿದ್ದಾರೆ ಎಂದು ಸ್ವಾಮೀಜಿ ವಾಗ್ದಾಳಿ ನಡೆಸಿದರು.
