
ದೆಹಲಿ ಕರ್ನಾಟಕ ಸಂಘದ ಚುನಾವಣಾ ಕಾವು ಏರಿದೆ. ವಾರ್ಷಿಕ ಸಭೆಯಲ್ಲಿ ಜೂಮ್ ಮೀಟಿಂಗ್ ವಿಚಾರಕ್ಕೆ ಅಧ್ಯಕ್ಷ ಸಿ.ಎಂ.ನಾಗರಾಜ್ ಮತ್ತು ಸದಸ್ಯರ ನಡುವೆ ತೀವ್ರ ಜಟಾಪಟಿ ನಡೆದಿದೆ. ಏನಿದು ವಿವಾದ?
ನವದೆಹಲಿ (ಏ.12): ದೆಹಲಿ ಕರ್ನಾಟಕ ಸಂಘಕ್ಕೆ ಭಾನುವಾರ ಮತದಾನ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಸಿ.ಎಂ.ನಾಗರಾಜ್ ಮತ್ತು ರೇಣುಕುಮಾರ್ ತಂಡಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ವಾರ್ಷಿಕ ಸರ್ವ ಸದಸ್ಯರ ಸಭೆ ಕರೆಯಲಾಗಿತ್ತು. ಈ ವೇಳೆ, ಜೂಮ್ ಮೀಟಿಂಗ್ಗಾಗಿ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಸದಸ್ಯರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಜೂಮ್ ಮೀಟಿಂಗ್ ನಡೆಸಲು ಸದಸ್ಯರು ಒತ್ತಾಯಿಸಿದರು. ಆದರೆ, ಇದಕ್ಕೆ ಸಂಘದ ಅಧ್ಯಕ್ಷ ಸಿಎಂ ನಾಗರಾಜ್ ಆಕ್ಷೇಪಿಸಿ ನಮ್ಮ ಸಂಘದ ಬೈಲಾದಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದರು.
ಅಧ್ಯಕ್ಷರ ಆಕ್ಷೇಪದ ನಡುವೆಯೂ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ, ಹೊರಗಿರುವ ಸದಸ್ಯರಿಗಾಗಿ ಜೂಮ್ ಮೀಟಿಂಗ್ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಇದಕ್ಕೂ ಸಂಘದ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದರು. ಇದೇ ವಿಚಾರಕ್ಕೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಅಧ್ಯಕ್ಷರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಇದರಿಂದ ಕುಪಿತಗೊಂಡ ಕಾರ್ಯಕಾರಿ ಸದಸ್ಯರು ಸಭೆಯಿಂದ ಹೊರನಡೆದರು. ಪರಿಸ್ಥಿತಿ ತಿಳಿಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಮಧ್ಯಪ್ರವೇಶಿಸಿ ಸಭೆಯನ್ನು ಮುಂದೂಡಿದರು.