ವರ್ಷ ಆರು, ಕನಸು ನೂರು, ಅನುಷ್ಠಾನ ಹಲವಾರು-ಸೋನಿಯಾ,ರಾಹುಲ್‌,ಖರ್ಗೆ, ಪ್ರಿಯಾಂಕಾಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ | Six Years Hundred Dreams Many Achievements Dk Shivakumar

ವರ್ಷ ಆರು, ಕನಸು ನೂರು, ಅನುಷ್ಠಾನ ಹಲವಾರು-ಸೋನಿಯಾ,ರಾಹುಲ್‌,ಖರ್ಗೆ, ಪ್ರಿಯಾಂಕಾಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ | Six Years Hundred Dreams Many Achievements Dk Shivakumar



ವರ್ಷ ಆರು, ಕನಸು ನೂರು, ಅನುಷ್ಠಾನ ಹಲವಾರು-ಸೋನಿಯಾ,ರಾಹುಲ್‌,ಖರ್ಗೆ, ಪ್ರಿಯಾಂಕಾಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ | Six Years Hundred Dreams Many Achievements Dk Shivakumar

ವೀರ ಪರಂಪರೆಯ ಕನ್ನಡ ನಾಡಿನ ಜನರ ಸೇವೆ ಮಾಡುವ ಸೌಭಾಗ್ಯ ಪಡೆದ ನಾನೇ ಧನ್ಯ. ರಾಜಕೀಯ ಅಂದರೆ ಅದು ಜನರ ಬದುಕಿನ ಸುತ್ತ ಗಿರಕಿ ಹೊಡೆಯಬೇಕಾದ ಒಂದು ಪವಿತ್ರ ಕಾರ್ಯ. ಆದರೆ ಕಳೆದ ಕೆಲವು ವರ್ಷಗಳಿಂದ ರಾಜಕೀಯ ಅಂದರೆ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವ ಒಂದು ಪಗಡೆಯಾಟ ಎನ್ನುವ ಸಂಪ್ರದಾಯ ಹುಟ್ಟಿಕೊಂಡಿದೆ

ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ

‘ಹನುಮನು ಉದಿಸಿದ ನಾಡು

ಬಸವನು ಆಳಿದ ಬೀಡು

ಆಚಾರ್ಯರು ಬೆಳಗಿದ ಶ್ರೀ ನಾಡು

ವೀರ ಪರಂಪರೆಯ ನೆಲೆಬೀಡು

ಧರ್ಮ, ದಕ್ಷತೆಗಳ ಕನ್ನಡ ನಾಡು’

– ಹೀಗೆಂದು ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಹೇಳಿದ್ದಾರೆ. ಇಂತಹ ವೀರ ಪರಂಪರೆಯ ಕನ್ನಡ ನಾಡಿನ ಜನರ ಸೇವೆ ಮಾಡುವ ಸೌಭಾಗ್ಯ ಪಡೆದ ನಾನೇ ಧನ್ಯ. ರಾಜಕೀಯ ಅಂದರೆ ಅದು ಜನರ ಬದುಕಿನ ಸುತ್ತ ಗಿರಕಿ ಹೊಡೆಯಬೇಕಾದ ಒಂದು ಪವಿತ್ರ ಕಾರ್ಯ. ಆದರೆ ಕಳೆದ ಕೆಲವು ವರ್ಷಗಳಿಂದ ರಾಜಕೀಯ ಅಂದರೆ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವ ಒಂದು ಪಗಡೆಯಾಟ ಎನ್ನುವ ಸಂಪ್ರದಾಯ ಹುಟ್ಟಿಕೊಂಡಿದೆ. ಆದರೆ ರಾಷ್ಟ್ರ, ರಾಜ್ಯದಲ್ಲೀಗ ಒಂದು ವಿಭಿನ್ನ ರಾಜಕೀಯ ಅಲೆ ಇದೆ. ಅದು ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವ ಅಲೆಯಲ್ಲ. ಬದಲಾಗಿ ಜನರ ಬದುಕಿಗೆ ನೆಮ್ಮದಿಯ ಗ್ಯಾರಂಟಿ ತಂದುಕೊಟ್ಟಿರುವ ಅಲೆ. ಈ ಅಲೆಯನ್ನು ಹುಟ್ಟುಹಾಕಿದ ಕೀರ್ತಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಸಲ್ಲುತ್ತದೆ.

ಭಾವನೆಗಳ ಜೊತೆ ಚೆಲ್ಲಾಟವಾಡುವ ರಾಜಕೀಯಕ್ಕೆ ಸಡ್ಡು ಹೊಡೆದು ಜನರ ಬದುಕಿಗೆ ಗ್ಯಾರಂಟಿ ನೀಡುವ ರಾಜಕೀಯವನ್ನು ಮುನ್ನೆಲೆಗೆ ತಂದಿದ್ದು ಕೆಪಿಸಿಸಿಯ ಬಹುದೊಡ್ಡ ಸಾಧನೆ. 2023ರಲ್ಲಿ ರಾಷ್ಟ್ರ ರಾಜಕಾರಣಕ್ಕೆ ಹೊಸ ದಿಕ್ಸೂಚಿ ತೋರಿದ ಕೆಪಿಸಿಸಿ ಕುಟುಂಬದ ಮುಖ್ಯಸ್ಥನಾಗಿ ನಾನು ಆರು ವರ್ಷಗಳನ್ನು ಪೂರೈಸಿದ್ದೇನೆ. ಈ ಆರು ವರ್ಷಗಳು ನನ್ನ ರಾಜಕೀಯ ಬದುಕಿನಲ್ಲಿ ಸಾಲು ಸಾಲು ಸಾಧನೆಗಳನ್ನು ತಂದುಕೊಟ್ಟ ಸಾರ್ಥಕ ವರ್ಷಗಳು. ಈ ಪಯಣದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಸಾರ್ಥಕತೆಯ ಆರು ವರ್ಷಗಳು

ತಳಮಟ್ಟದಿಂದ ಬೆಳೆದು ರಾಜಕಾರಣ ಮಾಡುವುದಕ್ಕೆ ಹೆಚ್ಚಿನ ತಾಳ್ಮೆ ಬೇಡುತ್ತದೆ. 2020ರ ಮಾರ್ಚ್ 11ರಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಾಗಿನಿಂದ ಈವರೆಗೆ ನಾನು ನಡೆದ ಹಾದಿ ಹಾಗೂ ಪಕ್ಷದ ಕಾರ್ಯಕರ್ತರು ನನ್ನನ್ನು ಬೆಳೆಸಿದ ರೀತಿ ಅಭೂತಪೂರ್ವವಾದುದು. ರಾಜಕೀಯ ಎಂಬುದು ಕೇವಲ ಅಧಿಕಾರ ಹಿಡಿಯುವ ಮಾರ್ಗವಲ್ಲ, ಅದು ಜನಸೇವೆಯ ಪವಿತ್ರ ವೇದಿಕೆ. 2020ರಲ್ಲಿ ಕೆಪಿಸಿಸಿ ಜವಾಬ್ದಾರಿ ವಹಿಸಿಕೊಂಡಾಗ, ನನ್ನ ಮುಂದಿದ್ದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಸವಾಲುಗಳ ಸರಮಾಲೆಯೇ ಎದುರಿಗಿತ್ತು. ಆ ಸವಾಲುಗಳೇ ನನ್ನ ಶಕ್ತಿಯಾಗಿ ಮಾರ್ಪಟ್ಟು, ಕಾಂಗ್ರೆಸ್ಸನ್ನು ಮರಳಿ ಅಧಿಕಾರಕ್ಕೆ ತಂದ ಸಾರ್ಥಕತೆ ನನ್ನಲ್ಲಿ ಹಾಗೂ ಕಾರ್ಯಕರ್ತರಲ್ಲಿದೆ. ಈ ಪಯಣ ಕೇವಲ ಹೋರಾಟದ್ದಲ್ಲ, ಅದು ಆತ್ಮವಿಶ್ವಾಸವನ್ನು ಮರಳಿ ಗಳಿಸಿದ ಪಯಣ ಎಂಬ ಸಾರ್ಥಕತೆ ಉಂಟಾಗುತ್ತದೆ.

ಸಂಕಷ್ಟದ ನಡುವೆ ಸಾರಥ್ಯ- ಪರೀಕ್ಷೆಯ ಕಾಲ

ನಾನು ಅಧಿಕಾರ ವಹಿಸಿಕೊಂಡಾಗ ಕಾರ್ಯಕರ್ತರಲ್ಲಿ ಉತ್ಸಾಹ ಸ್ವಲ್ಪ ಕಡಿಮೆ ಕಾಣುತ್ತಿತ್ತು. ಭ್ರಷ್ಟ ಬಿಜೆಪಿಯ ಆಡಳಿತದಿಂದ ಜನ ರೋಸಿ ಹೋಗಿದ್ದರು. ಬಿಜೆಪಿಯ ದ್ವೇಷದ ರಾಜಕಾರಣ, ಐಟಿ ಮತ್ತು ಇಡಿಯಂತಹ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ, ನಮ್ಮವರ ಮನೋಬಲ ಕುಗ್ಗಿಸುತ್ತಿತ್ತು. ಆದರೆ ನಮ್ಮ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ನನ್ನ ಮೇಲೆ ಅಚಲ ವಿಶ್ವಾಸವಿಟ್ಟಿದ್ದರು. ಆ ದಿನ ನಾನು ಅವರಿಗೆ ಒಂದು ಮಾತು ಕೊಟ್ಟಿದ್ದೆ: ‘ವೈಯಕ್ತಿಕವಾಗಿ ನನಗೆ ಎಷ್ಟೇ ಕಿರುಕುಳ ನೀಡಲಿ, ಎಂತಹ ಕಷ್ಟಗಳೇ ಎದುರಾಗಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಬಾವುಟವನ್ನು ಹಾರಿಸಿಯೇ ತೀರುತ್ತೇನೆ!’ ಆ ಇಚ್ಛಾಶಕ್ತಿಯೇ ನನ್ನ ಪರಿಶ್ರಮಕ್ಕೆ ಇಂಧನವಾಯಿತು. ಆ ಒಂದು ಮಾತು ನನ್ನ ಹೋರಾಟಕ್ಕೆ ಶಕ್ತಿಯಾಯಿತು.

ಟೀಕೆಗಳು ಸಾಯುತ್ತವೆ, ಕೆಲಸಗಳು ಮಾತ್ರ ಉಳಿಯುತ್ತವೆ ಎನ್ನುವುದು ನನ್ನ ನಂಬಿಕೆ. ಕೆಪಿಸಿಸಿ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಪ್ರವಾಸ ಮಾಡಿದೆ. ಹಳ್ಳಿ ಹಳ್ಳಿಗೆ ಹೋಗಿ ಸಂಭಾವ್ಯ ಅಭ್ಯರ್ಥಿಗಳಿಗೆ ಮತ್ತು ಕಾರ್ಯಕರ್ತರಿಗೆ ಶಕ್ತಿ ತುಂಬಿದೆ. ತನು-ಮನ-ಧನವನ್ನು ಪಕ್ಷಕ್ಕಾಗಿ ಧಾರೆ ಎರೆದೆ. ‘ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ’ ಎಂಬ ವಿಶ್ವಾಸವನ್ನು ಪ್ರತಿ ಕಾರ್ಯಕರ್ತನ ಮನಸ್ಸಲ್ಲಿ ಮೂಡಿಸುವುದು ನನ್ನ ಮೊದಲ ಗುರಿಯಾಗಿತ್ತು. ‘ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷ ಇದ್ದರೆ ಮಾತ್ರ ನಮಗೆ ಅಸ್ತಿತ್ವ’ ಎಂದು ನಾನು ಯಾವಾಗಲೂ ಹೇಳುತ್ತೇನೆ. ಇದೇ ಶಿಸ್ತನ್ನು ಸಂಘಟನೆಯಲ್ಲಿ ಅಳವಡಿಸಿಕೊಂಡೆ.

ಸವೆದ ಕಾಲು, ಒಂದಾದ ಮನಸ್ಸುಗಳು

ಕಚೇರಿಯಲ್ಲಿ ಕುಳಿತು ಪಕ್ಷ ಸಂಘಟಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಜನರ ಬಳಿಗೆ ಹೋದೆವು. ಕೊರೋನಾ ಸಂಕಷ್ಟದ ನಡುವೆ ಅನ್ನದಾತರ ಕಷ್ಟ ಆಲಿಸಿದೆ. ರೈತರ ಬೆಳೆ ಖರೀದಿ ಮಾಡಿದೆ. 100 ಕೋಟಿ ರು. ಮೊತ್ತದ ಹಣ್ಣು, ತರಕಾರಿ ಖರೀದಿಸಿ ಬಡವರಿಗೆ ಹಂಚಿಕೆ ಮಾಡಿದೆ. ಆರೋಗ್ಯ ಹಸ್ತ, ಉಚಿತ ವ್ಯಾಕ್ಸಿನ್‌ಗೆ ಆಗ್ರಹಿಸಿ ಯಶಸ್ವಿಯಾದೆ. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮಡಿದವರಿಗೆ 1 ಲಕ್ಷ ರು. ಪರಿಹಾರ ನೀಡಲಾಯಿತು. ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಯಿತು.

ನಮ್ಮ ಪಾಲಿನ ನೀರಿಗಾಗಿ ನಾವು ನಡೆಸಿದ ‘ಮೇಕೆದಾಟು ಪಾದಯಾತ್ರೆ’ ಕೇವಲ ಪ್ರತಿಭಟನೆಯಾಗಿರಲಿಲ್ಲ. ಅದು ಕನ್ನಡಿಗರ ಹಕ್ಕಿನ ಧ್ವನಿಯಾಗಿತ್ತು. ಕೋವಿಡ್ ನಿರ್ಬಂಧದ ನಡುವೆಯೂ ಆ ನಡಿಗೆ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿತು. ‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷಣೆ ಎಲ್ಲೆಡೆ ಮೊಳಗಿತು. ಅದಾದ ನಂತರ, ನಾಯಕರಾದ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ಯಾತ್ರೆ’ ಕರ್ನಾಟಕಕ್ಕೆ ಬಂದಾಗ ಇತಿಹಾಸ ಬದಲಾಯಿತು. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಹೊರಟ ರಾಹುಲ್ ಅವರೊಂದಿಗೆ ಹೆಜ್ಜೆ ಹಾಕಿದ ಲಕ್ಷಾಂತರ ಕನ್ನಡಿಗರು, ಬದಲಾವಣೆಯ ಗಾಳಿ ಬೀಸುತ್ತಿರುವುದನ್ನು ಸಾಬೀತುಪಡಿಸಿದರು. ಈ ಎರಡೂ ಮೈಲಿಗಲ್ಲುಗಳು ಪಕ್ಷದ ಸಂಘಟನೆಗೆ ಭದ್ರ ಬುನಾದಿ ಹಾಕಿದವು.

ಆ ಸಂದರ್ಭದಲ್ಲಿ ಬಿಜೆಪಿಯ ದುರಾಡಳಿತ ಎಲ್ಲೆ ಮೀರಿತ್ತು. 40 ಪರ್ಸೆಂಟ್ ಭ್ರಷ್ಟಾಚಾರವನ್ನು ಜನರ ಮುಂದೆ ತಂದು ಸರ್ಕಾರದ ಬಣ್ಣ ಬಯಲು ಮಾಡಿದ್ದೆವು. ಇನ್ನೆಂದೂ ಬಿಜೆಪಿಗೆ ಮತ ಹಾಕಬಾರದು ಎಂದು ಮತದಾರ ಆಗಲೇ ನಿರ್ಧಾರ ಮಾಡಿಯಾಗಿತ್ತು.

136 ಸೀಟು ಗೆಲ್ತೀವಿ ಎಂದರೆ ಅಚ್ಚರಿಪಟ್ಟರು!ಹಲವಾರು ಘಟಾನುಘಟಿ ನಾಯಕರು ಪಕ್ಷ ಸೇರ್ಪಡೆಯಾದರು. ಪ್ರತಿಯೊಂದು ಸಣ್ಣ ಸಮುದಾಯದ ಜನರೊಟ್ಟಿಗೆ ಸಂವಾದ ಏರ್ಪಡಿಸಿ ಅವರ ಸಮಸ್ಯೆಗಳನ್ನು ಆಲಿಸಿದೆ. 75 ಲಕ್ಷ ಕಾಂಗ್ರೆಸ್ ಸದಸ್ಯತ್ವ, ವಿಭಾಗ ಮಟ್ಟದ ಸಂಕಲ್ಪ ಸಮಾವೇಶ, ಗಾಂಧಿ ಭಾರತ, ನಮ್ಮ ಮತ ನಮ್ಮ ಹಕ್ಕು ಹೋರಾಟ, ಮನರೇಗಾ ಮರು ಜಾರಿಗೆ ಆಗ್ರಹ, ನೂರು ಕಾಂಗ್ರೆಸ್ ಕಚೇರಿಗಳ ನಿರ್ಮಾಣಕ್ಕೆ ಸಿದ್ಧತೆ ಹೀಗೆ ಹಲವಾರು ವಿಚಾರಗಳು ಪಕ್ಷದ ಸಂಘಟನೆಗೆ ಶಕ್ತಿ ನೀಡಿದವು.

ಚುನಾವಣೆಗೆ ಮುನ್ನ 136 ಸ್ಥಾನ ಬರಲಿದೆ ಎಂದಾಗ, ಅನೇಕರು ಆಶ್ಚರ್ಯಪಟ್ಟಿದ್ದರು. ಇದು ಅಹಂಕಾರವಾಗಿರಲಿಲ್ಲ. ಬದಲಾಗಿ ನಮ್ಮ ತಂತ್ರಗಾರಿಕೆ. ಈ ನನ್ನ ಮಾತು ನಿಜವಾಯಿತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನನ್ನ ಮೇಲಿಟ್ಟಿದ್ದ ವಿಶ್ವಾಸಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬ ಸಮಾಧಾನ ನನಗಿದೆ. ಕೊಟ್ಟ ಮಾತು ಉಳಿಸಿಕೊಂಡಾಗ ಸಿಗುವ ಸಾರ್ಥಕತೆ ಬೆಲೆ ಕಟ್ಟಲಾಗದ್ದು.

ಗ್ಯಾರಂಟಿ ಯೋಜನೆ- ನುಡಿದಂತೆ ನಡೆದ ಆಡಳಿತ

ಅಂದು ಕೇಂದ್ರ ಬಿಜೆಪಿ ಸರ್ಕಾರದಿಂದಾಗಿ ಬೆಲೆ ಏರಿಕೆಯ ಬಿಸಿ ಜನರಿಗೆ ಸರಿಯಾಗಿ ತಟ್ಟಿತ್ತು. ಇದೇ ಸಮಯದಲ್ಲೇ, ಜನರ ಕೈಗೆ ನೇರ ಹಣ ನೀಡುವ ಯೋಜನೆಗಳನ್ನು ನಾವು ಘೋಷಿಸಿದ್ದೆವು. ಅದರಂತೆ ಜಾರಿಗೆ ತಂದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಪ್ರತಿ ಮನೆಯ ಆರ್ಥಿಕ ಸ್ಥಿತಿ ಸುಧಾರಿಸುತ್ತಿವೆ. ‘ನುಡಿದಂತೆ ನಡೆಯುವುದು’ ನಮ್ಮ ಸಂಸ್ಕೃತಿ ಎಂಬ ನಂಬಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ನಾನು ಉಳಿಸಿಕೊಂಡಿದ್ದೇವೆ.

ಕಾಂಗ್ರೆಸ್ ಪಕ್ಷದ ಇತಿಹಾಸವೇ ತ್ಯಾಗದ್ದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈ ಪಕ್ಷ, ಅಧಿಕಾರಕ್ಕಾಗಿ ಎಂದೂ ಹಪಾಹಪಿಸಿಲ್ಲ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರು ದೇಶಕ್ಕಾಗಿ ಪ್ರಾಣ ನೀಡಿದರು. ಪ್ರಧಾನಿ ಹುದ್ದೆ ಒಲಿದು ಬಂದರೂ ಸೋನಿಯಾ ಗಾಂಧಿ ದೇಶದ ಹಿತಕ್ಕಾಗಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್‌ ಅವರಿಗೆ ಅವಕಾಶ ಬಿಟ್ಟುಕೊಟ್ಟರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮನಸ್ಸು ಮಾಡಿದ್ದರೆ ಎಂದೋ ಕೇಂದ್ರದಲ್ಲಿ ಮಂತ್ರಿಗಳಾಗಬಹುದಿತ್ತು. ಆದರೆ ನಮ್ಮ ನಾಯಕರು ಹೋರಾಡುತ್ತಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವುದಕ್ಕೇ ಹೊರತು ಅಧಿಕಾರಕ್ಕಾಗಿ ಅಲ್ಲ. ನಾನು ಕಾರ್ಯಕರ್ತರಿಗೆ ಯಾವಾಗಲೂ ಹೇಳುವಂತೆ- ‘ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷ ಶಕ್ತಿಯುತವಾಗಿದ್ದರೆ ಮಾತ್ರ ನಾವು ಶಕ್ತಿಯುತವಾಗಲು ಸಾಧ್ಯ. ಅಧಿಕಾರಕ್ಕಿಂತ ತ್ಯಾಗ ಮತ್ತು ಪಕ್ಷದ ಮೇಲಿನ ನಿಷ್ಠೆ ದೊಡ್ಡದು.’

ಈ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಿದ ಏಳು ಕೋಟಿ ಕನ್ನಡಿಗರಿಗೆ ಸದಾ ಋಣಿ. ಕೆಪಿಸಿಸಿ ಅಧ್ಯಕ್ಷನಾಗಿ ಇಷ್ಟು ದುಡಿಯಲು, ಸಂಕಷ್ಟದ ನಡುವೆಯೂ ಸವಾಲುಗಳನ್ನು ಮೆಟ್ಟಿ ಕರ್ನಾಟಕದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಅವಕಾಶ ಮಾಡಿಕೊಟ್ಟ ನಾಯಕರಿಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸುತ್ತೇನೆ. ಸಂಕಷ್ಟದ ಪರಿಸ್ಥಿತಿಯಲ್ಲೂ ಬೆನ್ನೆಲುಬಾಗಿ ನಿಂತ ನಾಯಕರಿಗೆ ಮತ್ತು ದಿನದ 24 ಗಂಟೆಯೂ ಪಕ್ಷಕ್ಕಾಗಿ ದುಡಿಯುವ ಲಕ್ಷಾಂತರ ಕಾರ್ಯಕರ್ತರಿಗೆ ಮನಃಪೂರ್ವಕ ಧನ್ಯವಾದ ಅರ್ಪಿಸುತ್ತೇನೆ.

ಹೋರಾಟ ನಿರಂತರ, ಗುರಿ ಸ್ಪಷ್ಟ

ಅಧಿಕಾರ ಸಿಕ್ಕಾಕ್ಷಣ ನಮ್ಮ ಹೋರಾಟ ಮುಗಿಯುವುದಿಲ್ಲ. ಕರ್ನಾಟಕವನ್ನು ದೇಶದ ನಂಬರ್ 1 ರಾಜ್ಯವಾಗಿ ಮಾಡುವುದು ಮತ್ತು ಪ್ರತಿ ಕನ್ನಡಿಗನ ಮನೆಯಲ್ಲಿ ನೆಮ್ಮದಿ ಮೂಡಿಸುವುದು ನಮ್ಮ ಗುರಿ. ಕಾಂಗ್ರೆಸ್ ಎಂಬ ಶಕ್ತಿಗೆ ಎಂದಿಗೂ ಚ್ಯುತಿ ಬರುವುದಿಲ್ಲ, ಕಾಂಗ್ರೆಸ್ ಸಿದ್ಧಾಂತಕ್ಕೆ ಎಂದಿಗೂ ಸಾವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಜನಮಾನಸದಲ್ಲಿ ಶಾಶ್ವತ ಸ್ಥಾನವಿದೆ. ಕಾಂಗ್ರೆಸ್ ಪಕ್ಷದ ಹೃದಯ ಜನರ ಸೇವೆಗೆ ಸದಾ ಮಿಡಿಯುತ್ತಿರುತ್ತದೆ.



Source link

Leave a Reply

Your email address will not be published. Required fields are marked *