‘ನ್ಯಾಯ ಕೊಡಿಸಿ, ಇಲ್ಲವೇ ರಾಜೀನಾಮೆ ಕೊಡಿ’: ಸತೀಶ್ ಜಾರಕಿಹೊಳಿ ನಿವಾಸಕ್ಕೆ ವಾಲ್ಮೀಕಿ ನಾಯಕ ಸಮಾಜ ಮುತ್ತಿಗೆ! | North Karnataka Valmiki Community Protest In Front Of Minister Satish Jarkiholi House Belagavi

‘ನ್ಯಾಯ ಕೊಡಿಸಿ, ಇಲ್ಲವೇ ರಾಜೀನಾಮೆ ಕೊಡಿ’: ಸತೀಶ್ ಜಾರಕಿಹೊಳಿ ನಿವಾಸಕ್ಕೆ ವಾಲ್ಮೀಕಿ ನಾಯಕ ಸಮಾಜ ಮುತ್ತಿಗೆ! | North Karnataka Valmiki Community Protest In Front Of Minister Satish Jarkiholi House Belagavi



‘ನ್ಯಾಯ ಕೊಡಿಸಿ, ಇಲ್ಲವೇ ರಾಜೀನಾಮೆ ಕೊಡಿ’: ಸತೀಶ್ ಜಾರಕಿಹೊಳಿ ನಿವಾಸಕ್ಕೆ ವಾಲ್ಮೀಕಿ ನಾಯಕ ಸಮಾಜ ಮುತ್ತಿಗೆ! | North Karnataka Valmiki Community Protest In Front Of Minister Satish Jarkiholi House Belagavi

ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರ ನಿವಾಸದ ಮುಂದೆ ವಾಲ್ಮೀಕಿ ನಾಯಕ ಸಮಾಜ ಬೃಹತ್ ಪ್ರತಿಭಟನೆ ನಡೆಸಿತು. ಶೇ. 7ರ ಮೀಸಲಾತಿಗೆ ಶಾಸನಬದ್ಧ ಮಾನ್ಯತೆ, ನಕಲಿ ಜಾತಿ ಪ್ರಮಾಣ ಪತ್ರ ತಡೆ, ಹಾಗೂ 15,000 ಕೋಟಿ ರೂ. ವಿಶೇಷ ಅನುದಾನಕ್ಕೆ ಆಗ್ರಹಿಸಿ, ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.

ಬೆಳಗಾವಿ (ಮಾ. 5): ರಾಜ್ಯ ರಾಜಕಾರಣದ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರ ಬೆಳಗಾವಿ ನಿವಾಸದ ಮುಂದೆ ಇಂದು ಹೈಡ್ರಾಮಾ ನಡೆದಿದೆ. ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಮಾಜದ ನೂರಾರು ಕಾರ್ಯಕರ್ತರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ನ್ಯಾಯ ಕೊಡಿ ಇಲ್ಲವೇ ರಾಜೀನಾಮೆ ಕೊಡಿ

ಸಚಿವರ ಮನೆಯ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ವಾಲ್ಮೀಕಿ ಸಮಾಜಕ್ಕೆ ನ್ಯಾಯ ಕೊಡಿಸಿ, ಇಲ್ಲವಾದರೆ ಸ್ಥಾನಕ್ಕೆ ರಾಜೀನಾಮೆ ನೀಡಿ’ ಎಂದು ಸಚಿವರಿಗೆ ನೇರ ಎಚ್ಚರಿಕೆ ನೀಡಿದರು. ಸಮಾಜಕ್ಕೆ ಪ್ರಸ್ತುತ ಸಿಕ್ಕಿರುವ ಶೇ. 7 ರಷ್ಟು ಮೀಸಲಾತಿಗೆ ಯಾವುದೇ ತಳಬುಡವಿಲ್ಲದಂತಾಗಿದೆ. ಈ ಮೀಸಲಾತಿಗೆ ತಕ್ಷಣವೇ ಶಾಸನಬದ್ಧ ಮಾನ್ಯತೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ಸಮರ

ಕೋಲಿ ಮತ್ತು ಕಬ್ಬಲಿಗ ಜನಾಂಗದವರು ವಾಲ್ಮೀಕಿ ಸಮಾಜದ ಹೆಸರಿನಲ್ಲಿ ಸುಳ್ಳು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಕಲಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಸ್ವತಂತ್ರ ತನಿಖೆ ನಡೆಸಬೇಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯನ್ನು ಸಂವಿಧಾನದ ‘ಶೆಡ್ಯೂಲ್ 9’ಕ್ಕೆ ಸೇರಿಸುವ ಮೂಲಕ ಶಾಶ್ವತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ಅಭಿವೃದ್ಧಿಗೆ 15,000 ಕೋಟಿ ರೂ ವಿಶೇಷ ಅನುದಾನಕ್ಕೆ ಬೇಡಿಕೆ

ಸಮಾಜದ ಶೈಕ್ಷಣಿಕ ಅಭಿವೃದ್ಧಿಗಾಗಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಗೆ 15,000 ಕೋಟಿ ರೂಪಾಯಿಗಳ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಅಲ್ಲದೆ, ಕರ್ನಾಟಕದಲ್ಲಿ ಪ್ರತ್ಯೇಕ ‘ಬುಡಕಟ್ಟು ವಿಶ್ವವಿದ್ಯಾಲಯ’ ಸ್ಥಾಪಿಸಿ ಸಂಶೋಧನೆಗೆ ಅವಕಾಶ ಕಲ್ಪಿಸಬೇಕು ಎಂಬುದು ಸಮಾಜದ ಪ್ರಮುಖ ಬೇಡಿಕೆಯಾಗಿದೆ. ಸಂಶೋಧನಾ ವಿದ್ಯಾರ್ಥಿಗಳ ಮಾಸಿಕ ವೇತನ ಹಾಗೂ ಕಾಲೇಜು ವಿದ್ಯಾರ್ಥಿಗಳ ಪ್ರೋತ್ಸಾಹಧನ ವಿಳಂಬವಾಗುತ್ತಿರುವುದಕ್ಕೂ ಸಮಾಜ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸಚಿವರ ನಿವಾಸದದ ಮುಂದೆ ಪ್ರತಿಭಟನೆ

ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಮಾಜದ ನಾಯಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸರ್ಕಾರ ಕೂಡಲೇ ಎಚ್ಚೆತ್ತು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.



Source link

Leave a Reply

Your email address will not be published. Required fields are marked *