Karnataka High Court WhatsApp notice: ಪೊಲೀಸರ ವಾಟ್ಸ್ಆ್ಯಪ್ ನೋಟಿಸ್‌ಗೆ ಬ್ರೇಕ್: ಹೈಕೋರ್ಟ್ ಮಹತ್ವದ ಆದೇಶ! | Karnataka High Court Police Cannot Issue Official Notices To Accused Via Whatsapp Rav

Karnataka High Court WhatsApp notice: ಪೊಲೀಸರ ವಾಟ್ಸ್ಆ್ಯಪ್ ನೋಟಿಸ್‌ಗೆ ಬ್ರೇಕ್: ಹೈಕೋರ್ಟ್ ಮಹತ್ವದ ಆದೇಶ! | Karnataka High Court Police Cannot Issue Official Notices To Accused Via Whatsapp Rav



Karnataka High Court WhatsApp notice: ಪೊಲೀಸರ ವಾಟ್ಸ್ಆ್ಯಪ್ ನೋಟಿಸ್‌ಗೆ ಬ್ರೇಕ್: ಹೈಕೋರ್ಟ್ ಮಹತ್ವದ ಆದೇಶ! | Karnataka High Court Police Cannot Issue Official Notices To Accused Via Whatsapp Rav

ಪೊಲೀಸರು ನೋಟಿಸ್ ಅಥವಾ ಎಫ್‌ಐಆರ್ ಪ್ರತಿಯನ್ನು ವಾಟ್ಸ್ಆ್ಯಪ್‌ ಅಥವಾ ಇತರೆ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ನೀಡುವಂತಿಲ್ಲ, ಬದಲಾಗಿ ಭೌತಿಕವಾಗಿಯೇ ನೀಡಬೇಕು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಆದರೆ ಈ ಕೇಳಗಿನ ಸಂದರ್ಭದಲ್ಲಿ ಆರೋಪಿಗೆ ವಾಟ್ಸಪ್ ನೋಟಿಸ್ ನೀಡಬಹುದು ಎಂದಿದೆ.

ಬೆಂಗಳೂರು (ಏ.1): ನೋಟಿಸ್ ಅಥವಾ ಪ್ರಥಮ ಮಾಹಿತಿ ವರದಿಯ (ಎಫ್‌ಐಆರ್) ಪ್ರತಿಯನ್ನು ವಿದ್ಯುನ್ಮಾನ ಅಥವಾ ವಾಟ್ಸ್ಆ್ಯಪ್‌ ಮೂಲಕ ನೀಡುವ ಅಧಿಕಾರ ಪೊಲೀಸರಿಗೆ ಇಲ್ಲ, ಬದಲಾಗಿ ಭೌತಿಕವಾಗಿಯೇ ನೀಡಬೇಕು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸುವ ಮುನ್ನ ನೋಟಿಸ್ ನೀಡುವುದು ಕಡ್ಡಾಯವಿದ್ದರೂ ಆರೋಪಿ ಉದ್ದೇಶಪೂರ್ವಕವಾಗಿ ಪೊಲೀಸ್ ನೋಟಿಸ್ ಸ್ವೀಕರಿಸದೆ ತಲೆಮರೆಸಿಕೊಂಡು ತನಿಖೆಗೆ ಅಸಹಕಾರ ತೋರಿದ ಸಂದರ್ಭದಲ್ಲಿ ನೇರವಾಗಿ ಬಂಧಿಸಬಹುದಾಗಿದೆ ಎಂದು ಹೇಳಿದೆ.

ಹೂಡಿಕೆದಾರರಿಗೆ ಲಕ್ಷಾಂತರ ಹಣ ವಂಚಿಸಿದ ಪ್ರಕರಣದಲ್ಲಿ ತನಿಖೆಗೆ ಸಹಕರಿಸದೆ 40 ದಿನಗಳ ಕಾಲ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಕಡಲೂರು ನಿವಾಸಿ ಯೋಗ ಶಿಕ್ಷಕ ಆರ್‌.ಯುಗದೇವ್‌ (34) ಎಂಬುವರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ತನ್ನ ವಿರುದ್ಧ ಹೊರಡಿಸಿದ ಬಂಧನ ಆದೇಶವನ್ನು ರದ್ದುಪಡಿಸಬೇಕು. ತನ್ನ ಬಂಧನವನ್ನು ಕಾನೂನು ಬಾಹಿರವೆಂದು ಘೋಷಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 35(3)ರ ಪ್ರಕಾರ ಪೊಲೀಸರು ತನಗೆ ವಿದ್ಯುನ್ಮಾನ ಅಥವಾ ಭೌತಿಕವಾಗಿ ನೋಟಿಸ್‌ ನೀಡಿಲ್ಲ. ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಆರೋಪಿ ಸಹಕರಿಸದ ಸಂದರ್ಭದಲ್ಲಿ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಪೊಲೀಸರು ಮಹಜರ್ ಬರೆಯಬೇಕು. ಆ ವಿಚಾರವನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿ ನಂತರ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು. ಪೊಲೀಸರು ಈ ನಿಯಮಗಳನ್ನು ಪಾಲಿಸದ ಕಾರಣಕ್ಕೆ ತನ್ನ ಬಂಧನವನ್ನು ಕಾನೂನು ಬಾಹಿರವೆಂದು ಘೋಷಿಸಬೇಕು ಎಂದು ಆರೋಪಿ ವಾದಿಸಿದ್ದ.

ಈ ವಾದವನ್ನು ಸಾರಸಗಟಾಗಿ ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಬಿಎನ್ಎಸ್ಎಸ್ ಸೆಕ್ಷನ್ 35(3) ರ ಅಡಿಯಲ್ಲಿ ನೋಟಿಸ್ ಅಥವಾ ಎಫ್ಐಆರ್ ಪ್ರತಿಯನ್ನು ವಾಟ್ಸ್ಆ್ಯಪ್‌ ಅಥವಾ ವಿದ್ಯುನ್ಮಾನ ವಿಧಾನದಲ್ಲಿ ತಲುಪಿಸಲು ಪೊಲೀಸರಿಗೆ ಅಧಿಕಾರವಿಲ್ಲ. ನೋಟಿಸ್ ಅನ್ನು ಭೌತಿಕವಾಗಿ ಆರೋಪಿಗೆ ತಲುಪಿಸುವುದು ಅನಿವಾರ್ಯ. ಈ ಕುರಿತು ಸುಪ್ರೀಂ ಕೋರ್ಟ್‌ ಆದೇಶಿಸಿದೆ ಎಂದು ಅಭಿಪ್ರಾಯಪಟ್ಟಿದೆ.

ಜೊತೆಗೆ, ಪೊಲೀಸ್‌ ತನಿಖಾಧಿಕಾರಿಗಳು ನೋಟಿಸ್ ನೀಡಲು ಪ್ರಯತ್ನಿಸಿದಾಗ ಅರ್ಜಿದಾರ ಆರೋಪಿ, 40 ದಿನಗಳ ಕಾಲ ತಮಿಳುನಾಡಿನ ಕಡಲೂರು ಸೇರಿ ವಿವಿಧೆಡೆ ಸಂಚರಿಸುವ ಮೂಲಕ ಸ್ಥಳ ಬದಲಿಸುತ್ತಿದ್ದರು. ಪೊಲೀಸರಿಗೆ ಸಿಗದಂತೆ ಓಡಾಡುತ್ತಿದ್ದರು. ಕರೆ ವಿವರಗಳ ಮೂಲಕ ಈ ವಿಚಾರ ಸಾಬೀತಾಗಿದೆ. ಇದು ತನಿಖೆಗೆ ಅಸಹಕಾರ ನೀಡುವುದು ಹಾಗೂ ತನಿಖೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಎಂಬುದಾಗಿ ಪರಿಗಣಿಸಲ್ಪಡುತ್ತದೆ. ಇಂತಹ ಸಂದರ್ಭದಲ್ಲಿ ನೋಟಿಸ್ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೂ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದು ನ್ಯಾಯಪೀಠ ಆದೇಶಿಸಿದೆ.

ಆರೋಪಿಯು ನೋಟಿಸ್ ಸ್ವೀಕರಿಸಲು ನಿರಾಕರಿಸಿದಾಗ ಅಥವಾ ತನಿಖೆಗೆ ಸಹಕರಿಸದಿದ್ದಾಗ, ಪೊಲೀಸರು ಅವರನ್ನು ಬಂಧಿಸುವ ಅಧಿಕಾರ ಹೊಂದಿರುತ್ತಾರೆ. ಪ್ರಕರಣದಲ್ಲಿ ಅರ್ಜಿದಾರರು 40 ದಿನಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಇದು ಬಂಧನಕ್ಕೆ ಪೂರಕವಾದ ಸನ್ನಿವೇಶ. ಆದ್ದರಿಂದ ಅರ್ಜಿದಾರರನ್ನು ಬಂಧಿಸಿರುವಲ್ಲಿ ಯಾವುದೇ ಕಾನೂನು ಲೋಪಗಳು ಕಾಣುತ್ತಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ವಿವರ:

ಯುಗದೇವ್ ಮತ್ತವರ ಪತ್ನಿ ಇಬ್ಬರೂ ಸೇರಿ ಜೈ ಭೈರವಿ ದೇವಿ ಫೈನಾನ್ಶಿಯಲ್ ಸಲ್ಯೂಷನ್ಸ್ ಎಂಬ ಸಂಸ್ಥೆ ಪ್ರಾರಂಭಿಸಿ, ಆನ್‌ಲೈನ್‌ ​ಮೂಲಕ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದ್ದರು. ಅರ್ಜಿದಾರರು ಮತ್ತವರ ಪತ್ನಿಯ ಖಾತೆಗೆ ಸುಮಾರು 98 ಲಕ್ಷ ರು. ಪಾವತಿಸಲಾಗಿತ್ತು. ಪ್ರಕರಣ ಸಂಬಂಧ ದೂರು ದಾಖಲಿಸಿರುವ ಮೂವರಿಂದ 39 ಲಕ್ಷ ಬಂಡವಾಳ ಹೂಡಿಕೆಯಾಗಿತ್ತು. ನಂತರ ಆ ಹಣ ಹಿಂದಿರುಗಿಸದ ಕಾರಣ ಯುಗದೇವ್‌ ವಿರುದ್ಧ ದೂರು ನೀಡಿದ್ದರು.

ಎಫ್‌ಐಆರ್‌ ದಾಖಲಿಸಿದ್ದ ಆಡುಗೋಡಿ ಠಾಣಾ ಪೊಲೀಸರು, ಅರ್ಜಿದಾರರ ವಿರುದ್ಧ ನೋಟಿಸ್​ ಜಾರಿಗೊಳಿಸಲು ಮುಂದಾಗಿದ್ದರು. ಆದರೆ, ಅರ್ಜಿದಾರ ಆರೋಪಿ 40 ದಿನಗಳ ಕಾಲ ನೋಟಸ್ ಪಡೆಯದೆ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದರು. 40 ದಿನಗಳ ಬಳಿಕ ತಮಿಳುನಾಡಿನ ಕಡಲೂರಿನಲ್ಲಿರುವುದು ಗೊತ್ತಾಗಿ ಆರೋಪಿಗೆ ಪೊಲೀಸರು ನೋಟಿಸ್​ ಜಾರಿಗೊಳಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಸಹಕರಿಸದ್ದಕ್ಕೆ ವಶಕ್ಕೆ ಪಡೆದು ಮ್ಯಾಜಿಸ್ಟ್ರೇಟ್​ ಮುಂದೆ ಹಾಜರುಪಡಿಸಿದ್ದರು. ಬಳಿಕ, ಮ್ಯಾಜಿಸ್ಟ್ರೇಟ್ ಬಂಧನ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್​ ಮೆಟ್ಟಿಲೇರಿದ್ದರು.



Source link

Leave a Reply

Your email address will not be published. Required fields are marked *