ಸ್ಟಾರ್‌ ಗಿರಿಯ ಧರ್ಮ ಸಂಕಟಗಳು: Box Office vs Fan Following: ನಿಜವಾದ ಸ್ಟಾರ್‌ ಯಾರು? | What Makes A Star Actor Box Office Vs Fan Following Gvd

ಸ್ಟಾರ್‌ ಗಿರಿಯ ಧರ್ಮ ಸಂಕಟಗಳು: Box Office vs Fan Following: ನಿಜವಾದ ಸ್ಟಾರ್‌ ಯಾರು? | What Makes A Star Actor Box Office Vs Fan Following Gvd



ಸ್ಟಾರ್‌ ಗಿರಿಯ ಧರ್ಮ ಸಂಕಟಗಳು: Box Office vs Fan Following: ನಿಜವಾದ ಸ್ಟಾರ್‌ ಯಾರು? | What Makes A Star Actor Box Office Vs Fan Following Gvd

ಒಂದು ಚಿತ್ರರಂಗ ಉ‍ಳಿಯುವುದು ಕತೆಯಿಂದ, ಬೆಳೆಯುವುದು ಸ್ಟಾರ್‌ಗಳಿಂದ. ಆದರೆ ಸದ್ಯ ಕತೆಗಾರರಿಗೂ ಮರ್ಯಾದೆ ಇಲ್ಲ, ಸ್ಟಾರ್‌ಗಳಿಗೆ ಅಂಥಾ ದೊಡ್ಡ ಹುಮ್ಮಸ್ಸು ಇದ್ದಂತೆ ಕಾಣಿಸುತ್ತಿಲ್ಲ. ಅದಕ್ಕೆ ಯಾರು ಕಾರಣ, ಏನು ಕಾರಣ, ಪರಿಹಾರ ಏನು?

– ಇಂಟ್ರೋವರ್ಟ್‌ ರಿಪೋರ್ಟರ್‌

ಒಬ್ಬ ಸ್ಟಾರ್‌ ನಟರನ್ನು ಅವರು ಸ್ಟಾರ್‌ ಎಂದು ಹೇಳಲು ಮಾನದಂಡ ಯಾವುದು?

ಅವರನ್ನು ನೋಡಲು ಎಷ್ಟು ಜನ ಸೇರುತ್ತಾರೆ ಎಂಬುದೇ ಅಥವಾ ಅವರ ಸಿನಿಮಾ ಎಷ್ಟು ಹಣ ಸಂಗ್ರಹ ಮಾಡುತ್ತದೆ ಅನ್ನುವುದೇ?

ಈ ಪ್ರಶ್ನೆಯನ್ನು ಒಂಚೂರು ಕೂಲಂಕಷವಾಗಿ ನೋಡೋಣ. ಯಾಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿರುವುದು ಸ್ಟಾರ್‌ಗಳೇ. ಸ್ಟಾರ್‌ಗಳು ಇದ್ದರೆ ಬೆಳೆ, ಕಳೆ. ಆದರೆ ಈಗ ಬೆಳೆ ಕಡಿಮೆಯಾಗಿದೆ, ಕಳೆ ಕೊಂಚ ಮಸುಕಾಗಿದೆ.

ಒಂದು ಚಿತ್ರರಂಗ ಉ‍ಳಿಯುವುದು ಕತೆಯಿಂದ, ಬೆಳೆಯುವುದು ಸ್ಟಾರ್‌ಗಳಿಂದ. ಆದರೆ ಸದ್ಯ ಕತೆಗಾರರಿಗೂ ಮರ್ಯಾದೆ ಇಲ್ಲ, ಸ್ಟಾರ್‌ಗಳಿಗೆ ಅಂಥಾ ದೊಡ್ಡ ಹುಮ್ಮಸ್ಸು ಇದ್ದಂತೆ ಕಾಣಿಸುತ್ತಿಲ್ಲ. ಅದಕ್ಕೆ ಯಾರು ಕಾರಣ, ಏನು ಕಾರಣ, ಪರಿಹಾರ ಏನು?

ಪ್ರತಿಯೊಂದು ರಂಗಕ್ಕೂ ಹೀರೋಗಳು ಬೇಕು. ಕ್ರೀಡೆಗೂ, ಸಿನಿಮಾಗೂ. ಹೀರೋ ಇದ್ದಾಗಲೇ ಆ ರಂಗ ಬೆಳೆಯಲು ಸಾಧ್ಯ. ಬೇರೆ ಬೇರೆ ಭಾಷೆಯ ಚಿತ್ರರಂಗವನ್ನು ನೋಡಿದರೆ ಅಲ್ಲಿ ಕ್ರಿಯಾಶೀಲವಾಗಿ ಒಬ್ಬರಲ್ಲ ಒಬ್ಬರು ತೊಡಗಿಸಿಕೊಂಡಿರುವುದು ಕಂಡು ಬರುತ್ತದೆ. ನಿರಂತರವಾಗಿ ಸಿನಿಮಾ ಬರುತ್ತದೆ. ಒಂದು ಹೋದರೂ ಮತ್ತೊಂದರಲ್ಲಿ ಹಣ ಸಂಗ್ರಹ ಆಗುತ್ತದೆ. ಒಟ್ಟಾರೆ ಟರ್ನೋವರ್‌ ನಡೆಯುತ್ತಿರುತ್ತದೆ. ಆದರೆ ನಮ್ಮಲ್ಲಿ ಸ್ಟಾರ್‌ ಸಿನಿಮಾಗಳ ಲೆಕ್ಕವನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ.

ಖರ್ಚು ಬ್ರಹ್ಮಾಂಡ, ಗಳಿಕೆ ಗುಳಿಹೊಂಡ

ಇದಕ್ಕೆಲ್ಲಾ ಕಾರಣ, ಸ್ಟಾರ್‌ಗಳೆಲ್ಲಾ ದೊಡ್ಡ ಸಿನಿಮಾಗಳ ಬೆನ್ನಿಗೆ ಬಿದ್ದಿದ್ದು. ಬಹಳಷ್ಟು ದೊಡ್ಡ ಸಿನಿಮಾಗಳು ಹೀಗೆ ಬಂದು ಹಾಗೆ ಹೋಗಿದ್ದು. ಅದಕ್ಕೆ ಹೆದರಿ ಈಗ ನಿರ್ಮಾಪಕರು ಹಿಂದೆ ಮುಂದೆ ನೋಡುತ್ತಿರುವುದು. ಹೋದರೆ ಕೊಟ್ಟ 2 ಕೋಟಿ ಅಡ್ವಾನ್ಸ್‌ ಹೋಗಲಿ, ಉಳಿದರೆ 20 ಕೋಟಿ ಉಳಿಯುತ್ತದೆ ಅಂತ ಮಾತನಾಡುತ್ತಿರುವುದು. ಸ್ಟಾರ್‌ ನಿರ್ದೇಶಕರನ್ನೂ ಇಲ್ಲಿ ಸೇರಿಸಿಕೊಳ್ಳಬಹುದು, ಪಾಪ. ಅವರೂ ಅರ್ಜೆಂಟಿಗೆ ಬಿದ್ದು ಕೊಂಚ ಫೋಕಸ್‌ ಕಳೆದುಕೊಂಡರೇನೋ.

ಈಗ ಸುಮ್ಮನೆ ಆಲೋಚಿಸಿ, ಸಮೀಪದಲ್ಲಿ ಯಾವ ಸ್ಟಾರ್‌ ಸಿನಿಮಾ ಬರುತ್ತಿದೆ? ಬರುತ್ತಿದೆ ಎಂದರೂ ಅದರ ಮೇಲೆ ಭರವಸೆ ಇದೆಯೇ? ಉತ್ತರ ಕೊಡುವುದಕ್ಕೆ, ಕಷ್ಟ ಆಗುತ್ತದೆ. ಯಾಕೆ ಎಂದರೆ ಆ ಸಿನಿಮಾಗಳ ಸುದೀರ್ಘ ಪಯಣ. ದೊಡ್ಡ ಸಿನಿಮಾಗಳಿಂದ ಸಂಭಾವನೆ, ಖರ್ಚು, ಸಿನಿಮಾ ಶೂಟಿಂಗ್‌ ದಿನ ಎಲ್ಲವೂ ಹೆಚ್ಚಾದುವು. ಮೊದಲು 10 ಕೋಟಿ ಆಸುಪಾಸಿನಲ್ಲಿ ಮುಗಿಯುತ್ತಿದ್ದ ಸಿನಿಮಾಗಳು 20 ಕೋಟಿಗೂ ಜಾಸ್ತಿ ಬಜೆಟ್‌ ಆಗತೊಡಗಿದವು. ಅದರಿಂದ ಒಂದೆರಡು ಸಿನಿಮಾಗಳಿಗೆ ಲಾಭ ಆದರೆ ಬಹಳಷ್ಟು ಚಿತ್ರಕ್ಕೆ ಬಯಲು ಶೂನ್ಯವೇ ಗತಿಯಾಯಿತು.

ರೈಟರ್‌ಗಳಿಗೆ ಮರ್ಯಾದೆ ಕೊಡ್ರಪ್ಪಾ

ಒಬ್ಬರು ಸ್ಟಾರ್‌ ಅವರೇ ಚಿತ್ರಕತೆ, ಸಂಭಾಷಣೆ ಬರೆದರು ಅಂತ ಗೊತ್ತಾಗಿದ್ದೇ ಆಗಿದ್ದು, ಎಲ್ಲಾ ಸ್ಟಾರ್‌ಗಳೂ ತಮ್ಮ ಅನುಭವ ಇಟ್ಟುಕೊಂಡು ಶಕ್ತ್ಯಾನುಸಾರ ನಾನೇನು ಕಮ್ಮಿ ಎಂದುಕೊಂಡು ಚಿತ್ರಕತೆ ಬರೆಯಲು ಕುಳಿತುಬಿಟ್ಟರು. ರಾತ್ರೋರಾತ್ರಿ ಚಿನ್ನ ಒಂದು ಐಡಿಯಾ ಬಂದಿದೆ ಎಂದು ಬರಹಗಾರ, ನಿರ್ದೇಶಕರನ್ನು ಕರೆಸಿ ಚರ್ಚಿಸಿದರು. ರೈಟರು ಕನ್ಫ್ಯೂಸಾಗಿ ಕಂಗಾಲಾಗಿ ಹೋದ. ಸ್ಟಾರ್‌ ಹೇಳಿದ ಐಡಿಯಾ ತಿರಸ್ಕರಿಸುವುದು ಹೇಗೆ! ಅದರ ಫಲಶ್ರುತಿ ಕಣ್ಣೆದುರುಂಟು.

ಯಾರೋ ಹಣ ಹಾಕೋರೂ

ನಿರ್ಮಾಪಕರು ಮೊದಲು ನಿರ್ದೇಶಕರನ್ನು ನಂಬುತ್ತಿದ್ದರು. ನಂಗೆ ಕತೆ ಗೊತ್ತಾಗಲ್ಲಪ್ಪಾ ಅನ್ನುತ್ತಿದ್ದರು. ದೊಡ್ಡ ಸ್ಟಾರ್‌ ಎಂಬ ಖುಷಿಗೆ ಹಲವು ಮಂದಿ ಇದ್ದಿದ್ದೆಲ್ಲಾ ಸುರಿದರು. ಕತೆಯೇ ಕಣ್ಣೀರು ಹಾಕಿ ಬೇಡ ಅನ್ನದಾತರೇ, ಬೇಡ ಅಂತ ಹೇಳಿದರೂ ಅವರು ಕೇಳಿಸಿಕೊಳ್ಳಲಿಲ್ಲ. ಗೊತ್ತಿದ್ದವರನ್ನು ಕೇಳಲೂ ಇಲ್ಲ. ಹೊಸ ನಿರ್ದೇಶಕರು ಮಗ ಇದ್ದಂತೆ ಎಂದು ಚಿತ್ರೀಕರಣದಿಂದ ದೂರವೇ ನಿಂತುಬಿಟ್ಟರು. ಎಲ್ಲಿಗೆ ಬೇಕಾದರೂ ಹೋಗಪ್ಪಾ, ಯಾವ ವಿಎಫ್ಎಕ್ಸ್‌ ಬೇಕಾದರೂ ಮಾಡಪ್ಪಾ ಅಂದುಬಿಟ್ಟರು. ಕಿಸೆ ಖಾಲಿಯಾದಾಗಲೇ ವಾಸ್ತವ ಅರಿವಾಗಿದ್ದು. ಅಷ್ಟು ಹೊತ್ತಿಗೆ ತಡವಾಗಿತ್ತು, ಕೊನೆಯ ದೇಖಾವೆ ಮುಗಿದಿತ್ತು. ಕೊನೆಗೆ ಕೇಳಿದರೆ, ಹಣ ಹಾಕೋ ನಿರ್ಮಾಪಕರಿಗೆ ಏನೂ ಬುದ್ಧಿ ಇರಲ್ವಾ ಅನ್ನುತ್ತಾರೆ. ಹಾಗಾಗಿ ನಿರ್ಮಾಪಕರೂ ಈಗೀಗ ಸಹವಾಸ ಬೇಡ ಅಂತ ದೂರಾಗುತ್ತಿದ್ದಾರೆ.

ಖರ್ಚಿಗೆ ಹಿಡಿತವಿರಲಿ

ಒಬ್ಬರು ತಾನೇ ಬರೆದು, ತಾನೇ ನಟಿಸಿ, ತಾನೇ ನಿರ್ದೇಶಿಸಿದ ಸಿನಿಮಾದ ಬಜೆಟ್‌ 3 ಕೋಟಿ ದಾಟುವುದಿಲ್ಲ. ಆದರೆ ಅವರನ್ನು ಇಟ್ಟುಕೊಂಡು ಬೇರೆಯವರು ಸಿನಿಮಾ ಮಾಡಿದರೆ ಬಜೆಟ್‌ ಕನಿಷ್ಠ 10 ಕೋಟಿ ಆಗುತ್ತದೆ. ಯಾಕೆ? ಇದರ ಉತ್ತರ ಏನೆಂದರೆ, ಮನಸ್ಸು ಮಾಡಿದರೆ ಲಾಭವುಂಟು ಅನ್ನುವುದು. ಯೋಚಿಸಿದರೆ ಉತ್ತರ ಕೂಡ ಉಂಟು.

1. ಸ್ಟಾರ್‌ಗಳು ನಿರಂತರವಾಗಿ ಸಿನಿಮಾ ಮಾಡಲು ಸಾಧ್ಯವೇ ನೋಡಿ. ನೀವು ಕಂಟ್ರೋಲ್‌ ಮಾಡುವ ನಿರ್ದೇಶಕರಿಗಿಂತ ನಿಮ್ಮನ್ನು ಕಂಟ್ರೋಲ್‌ ಮಾಡುವ ಗಟ್ಟಿ ನಿರ್ದೇಶಕರು ಇದ್ದಾರೆಯೇ ಎಂದು ಗಮನಿಸಿ.

2. ಮೂರು ವರ್ಷಕ್ಕೊಂದು ಸಿನಿಮಾ ಮಾಡಿದರೆ ಸಮಯ, ಹಣ ಎಲ್ಲವೂ ವ್ಯರ್ಥ. ಬಂದರೆ ದೊಡ್ಡ ಮಟ್ಟದಲ್ಲಿ ಬರಬಹುದು, ಹೋದರೆ ಎದ್ದು ನಿಲ್ಲಲಾಗದಂತೆ ಕಷ್ಟವಾಗುವುದು. ಕನ್ಸಿಸ್ಟೆನ್ಸಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ.

3. ಇವೆಲ್ಲಕ್ಕೂ ಕಳಶಪ್ರಾಯವಾಗಿ, ಹೊಸ ಬರಹಗಾರರ ತಂಡವನ್ನು ಬೆಳೆಸುವುದು. ಹೊಸ ಆಲೋಚನೆಗಳಿಗೆ ಮರ್ಯಾದೆ ಕೊಡುವುದು.

4. ಸಾಧ್ಯವಾದರೆ ನಿರ್ಮಾಪಕರ ಜೊತೆ ಕೊಲ್ಯಾಬರೇಟ್ ಆಗುವುದು. ಎಲ್ಲವನ್ನೂ ಮೊದಲೇ ದುಡ್ಡು ತೆಗೆದುಕೊಳ್ಳುವ ಬದಲು ಲಾಭಾಂಶದಲ್ಲಿ ಪಾಲು ತೆಗೆದುಕೊಂಡರೆ ದುಡ್ಡು ಹಾಕುವವರಿಗೂ ಧೈರ್ಯ ಬರುತ್ತದೆ. ಕೆಲವು ನಿರ್ಮಾಪಕರು ಈ ಐಡಿಯಾ ಮಾಡಿದ್ದಾರೆ. ಆದರೆ ಒಪ್ಪುವವರು ಕಡಿಮೆ.

5. ಅದಕ್ಕೂ ಮೊದಲು ಚಿತ್ರರಂಗದ ಎಲ್ಲರೂ ಒಗ್ಗಟ್ಟಾಗಿ ಒಂದು ತೀರ್ಮಾನಕ್ಕೆ ಬರಬೇಕು. ಒಂದು ಸೌಹಾರ್ದಯುತ ಪರಿಸರ ವ್ಯವಸ್ಥೆ ಕಟ್ಟಬೇಕು. ಪರಸ್ಪರ ಮಾತನಾಡಿ ಒಂದೊಳ್ಳೆ ಚಿತ್ರರಂಗ ಕಟ್ಟಲು ಮುಂದಾಗಬೇಕು.

ಯಾಕೆಂದರೆ ಒಂದು ಸಿನಿಮಾದಿಂದ ಕನಿಷ್ಠ ರೂ.30 ಕೋಟಿ ಹಣ ಗಳಿಸಲು ಸಾಧ್ಯವಾಗದೇ ಇದ್ದರೆ ಸ್ಟಾರ್‌ ಸಿನಿಮಾ ಅಂತ ಹೇಳುವುದಾದರೆ ಹೇಗೆ, ಅಲ್ವೇ!



Source link

Leave a Reply

Your email address will not be published. Required fields are marked *