
ದಕ್ಷಿಣ ಭಾರತದ ಖ್ಯಾತ ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದ ಉದಯಪುರದಲ್ಲಿ ಗುಟ್ಟಾಗಿ ವಿವಾಹವಾಗಿದ್ದಾರೆ. ಫೆ.26ರಂದು ನಡೆದ ಈ ವಿವಾಹದ ಚಿತ್ರಗಳನ್ನು ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿವೆ.
ಬೆಂಗಳೂರು (ಫೆ.26): ದಕ್ಷಿಣ ಭಾರತದ ಖ್ಯಾತ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅಧಿಕೃತವಾಗಿ ಸತಿಪತಿಗಳಾಗಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿರುವ ಬೆಟ್ಟದ ಮೇಲಿನ ಐಟಿಸಿ ಮೊಮೆಂಟೋಸ್ ಹೋಟೆಲ್ನಲ್ಲಿ ಐಷಾರಾಮಿ ವಿವಾಹ ಜರುಗಿದೆ. ಕೇವಲ 100 ಮಂದಿ ಆಪ್ತರಿಗಷ್ಟೇ ಆಹ್ವಾನವಿದ್ದ ವಿವಾಹ ಸಮಾರಂಭದ ಗುಟ್ಟಾಗಿ ನಡೆದಿತ್ತು. ವಿವಾಹ ಇಂದು ನಡೆಯುತ್ತಿದೆ ಅನ್ನೋ ಸುದ್ದಿಯ ಹೊರತಾಗಿ ಮತ್ತೆ ಯಾವುದೇ ಸಮಾಚಾರವನ್ನು ಜೋಡಿ ಹಂಚಿಕೊಂಡಿರಲಿಲ್ಲ. ಇದರ ನಡುವೆ ಫೆ. 26ರ ಸಂಜೆ 6.50ಕ್ಕೆ ಸರಿಯಾಗಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಏಕಕಾಲದಲ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ಫೋಟೋ ಹಂಚಿಕೊಂಡ ಕೆಲವೇ ನಿಮಿಷದಲ್ಲಿ ಸಖತ್ ವೈರಲ್ ಆಗಿತ್ತು. 20 ನಿಮಿಷಗಳ ಒಳಗಾಗಿ ಇಬ್ಬರ ಅಕೌಂಟ್ನಲ್ಲಿ ಹಂಚಿಕೊಂಡಿದ್ದ ಈ ಮದುವೆಯ ಚಿತ್ರಗಳು ಸಿಕ್ಕಾಪಟ್ಟೆ ವೈರಲ್ ಆಗಿ ಒಂದು ಮಿಲಿಯನ್ ಲೈಕ್ಸ್ ಗಿಟ್ಟಿಸಿಬಿಟ್ಟಿದ್ದವು. ರಶ್ಮಿಕಾ ತಮ್ಮ ಪೇಜ್ನಲ್ಲಿ ಒಟ್ಟು 8 ಚಿತ್ರಗಳನ್ನು ಹಂಚಿಕೊಂಡಿದ್ದರೆ, ವಿಜಯ್ ದೇವರಕೊಂಡ ಒಟ್ಟು 11 ಫೋಟೋಗಳನ್ನು ಹಂಚಿಕೊಂಡಿದ್ದರು. ಇಬ್ಬರೂ ಕೂಡ ತಮ್ಮ ಅಕೌಂಟ್ನಲ್ಲಿ ಒಂದೊಂದು ಬ್ಲ್ಯಾಕ್ & ವೈಟ್ ಫೋಟೋ ಹಂಚಿಕೊಂಡಿರುವುದು ವಿಶೇಷವಾಗಿತ್ತು.
ಇನ್ನು ಅತಿವೇಗವಾಗಿ 1 ಮಿಲಿಯನ್ ಲೈಕ್ಸ್ ಪಡೆದ ಅಕೌಂಟ್ ನೋಡೋದಾದರೆ, ರಶ್ಮಿಕಾ ಮಂದಣ್ಣ ಮದುವೆ ಫೋಟೋ ಪೋಸ್ಟ್ಮಾಡಿದ 19 ನಿಮಿಷಕ್ಕೆ 1 ಮಿಲಿಯನ್ ಲೈಕ್ಸ್ ಪಡೆದಿದ್ದರು. ಇನ್ನು ವಿಜಯ್ ದೇವರಕೊಂಡ ಒಂದು ನಿಮಿಷ ತಡವಾಗಿ ಅಂದರೆ 20 ನಿಮಿಷಕ್ಕೆ 1 ಮಿಲಿಯನ್ಸ್ ಲೈಕ್ಸ್ ಪಡೆದುಕೊಂಡಿದ್ದಾರೆ.
ಇನ್ನು ಅಭಿಮಾನಿಗಳು ಕೂಡ ಮದುವೆಯ ಫೋಟೋಗೆ ಮೆಚ್ಚುಗೆಯ ಮಾಹಾಪೂರವನ್ನೇ ಹರಿಸಿದ್ದು, ಇಬ್ಬರೂ ಆನಂದದಾಯಕ ಜೀವನ ನಡೆಸಿ, ಮದುವೆ ಶುಭಾಶಯಗಳು ಅನ್ನೋ ಅಭಿನಂದನೆಗಳಿಂದ ತುಂಬಿ ಹೋಗಿದೆ. ‘ನಾವು ಅಂದುಕೊಂಡಿದ್ದ ಕನಸನ್ನು ನೀವು ಪೂರೈಸಿದ್ದಕ್ಕಾಗಿ, ಇಬ್ಬರೂ ಒಂದಾಗಿದ್ದಕ್ಕಾಗಿ ಶುಭಾಷಯಗಳು’ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.
ಭಿನ್ನ ಶೀರ್ಷಿಕೆ ನೀಡಿದ ರಶ್ಮಿಕಾ-ವಿಜಯ್
ಇಬ್ಬರೂ ಕೂಡ ತಮ್ಮ ಪೋಟೋಗೆ ಭಿನ್ನ ಭಿನ್ನ ಶೀರ್ಷಿಕೆಗಳನ್ನು ನೀಡಿದ್ದಾರೆ. ‘ನಾವೆಲ್ಲರೂ ಒಟ್ಟಿಗೆ ಅತ್ಯುತ್ತಮ ಜೀವನವನ್ನು ನಡೆಸೋಣ!ಐ ಲವ್ ಯು!’ ಎಂದು ರಶ್ಮಿಕಾ ತಮ್ಮ ಪೋಸ್ಟ್ ಕೊನೆ ಮಾಡಿದ್ದರೆ, ‘ನಾನು ನನ್ನ ಬೆಸ್ಟ್ ಫ್ರೆಂಡ್ಅನ್ನು ಹೆಂಡತಿ ಮಾಡಿಕೊಂಡಿದ್ದೇನೆ..’ ಎನ್ನುವ ಸಾಲಿನೊಂದಿಗೆ ಮದುವೆಯ ದಿನಾಂಕವನ್ನು ಪೋಸ್ಟ್ ಮಾಡಿ ವಿಜಯ್ ದೇವರಕೊಂಡ ತಮ್ಮ ಪೋಸ್ಟ್ ಮುಗಿಸಿದ್ದಾರೆ.