ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಆರ್ಎಸ್ಎಸ್ ನೋಂದಾಯಿತ ಸಂಸ್ಥೆಯಲ್ಲದ ಕಾರಣ ಅದೊಂದು ‘ದೆವ್ವ’ ಎಂದು ಹೇಳುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕರಾವಳಿ ಭಾಗದಲ್ಲಿ ಕೋಮುವಾದದಿಂದಾಗಿ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.
ಬೆಂಗಳೂರು (ಫೆ.17): ‘ಆರ್ಎಸ್ಎಸ್ ನೋಂದಾಯಿತ ಸಂಸ್ಥೆಯಲ್ಲ ಎಂದು ಸ್ವತಃ ಮೋಹನ್ ಭಾಗವತ್ ಅವರೇ ಹೇಳಿದ್ದಾರೆ. ನೋಂದಣಿಯಾಗದ ಸಂಸ್ಥೆಯನ್ನು ‘ಘೋಸ್ಟ್’ (ದೆವ್ವ) ಎನ್ನಬೇಕಾಗುತ್ತದೆ’ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಆ ಮೂಲಕ ಆರ್ಎಸ್ಎಸ್ ದೆವ್ವ ಇದ್ದಂತೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ಮೋಹನ್ ಭಾಗವತ್ ಅವರು ಆರ್ಎಸ್ಎಸ್ ಮುಖ್ಯಸ್ಥರು. ಅವರೇ ಆರ್ಎಸ್ಎಸ್ ನೋಂದಾಯಿತ ಸಂಸ್ಥೆಯಲ್ಲ ಎಂದಿದ್ದಾರೆ. ಹೀಗಾಗಿ ಅದನ್ನು ಘೋಸ್ಟ್ ಎನ್ನಬೇಕಾಗುತ್ತದೆ. ನಾವು ಕಾಲೇಜು ದಿನಗಳಿಂದಲೂ ಆರ್ಎಸ್ಎಸ್ ನೀತಿ, ಸಿದ್ಧಾಂತ ವಿರೋಧಿಸುತ್ತಲೇ ಬಂದಿದ್ದೇವೆ’ ಎಂದು ಹೇಳಿದರು.
ನಾವು ಜನಗಣಮನವನ್ನು ರಾಷ್ಟ್ರಗೀತೆ ಎಂದು ಒಪ್ಪಿಕೊಂಡಿದ್ದೇವೆ. ರಾಷ್ಟ್ರೀಯ ಶಿಷ್ಟಾಚಾರದ ಗೆಜೆಟ್ ನಿಯಮ 171ರ ಪ್ರಕಾರ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜಕ್ಕೆ ಅಗೌರವ ತೋರುವಂತಿಲ್ಲ. ಆದರೆ, ಆರ್ಎಸ್ಎಸ್ ಶಾಖೆಗಳಲ್ಲಿ ರಾಷ್ಟ್ರಗೀತೆ ಹಾಡುವುದಿಲ್ಲ. ಈಗ ಏಕಾಏಕಿ ವಂದೇ ಮಾತರಂ ಹಾಡಬೇಕು ಎಂಬ ಹೊಸ ಮಾರ್ಗಸೂಚಿ ಮೂಲಕ ದೇಶವನ್ನು ಮರುಳು ಮಾಡಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು.
ಆರ್ಎಸ್ಎಸ್ನಿಂದ ಕರಾವಳಿಯಲ್ಲಿ ಹೂಡಿಕೆಗೆ ಹಿನ್ನಡೆ:
ಕರಾವಳಿಯಲ್ಲಿ ಆರ್ಎಸ್ಎಸ್ ಮತ್ತು ಕೋಮುವಾದದ ಹಾವಳಿ ಇಲ್ಲದಿದ್ದರೆ ಐಟಿ ಸೇರಿ ಅನೇಕ ಬೃಹತ್ ಉದ್ಯಮಗಳು ಬಂಡವಾಳ ಹೂಡಲು ಬರುತ್ತಿದ್ದರು. ಕೋಮುವಾದಿ ವಾತಾವರಣವೇ ಅಲ್ಲಿನ ಅಭಿವೃದ್ಧಿಗೆ ಹಿನ್ನಡೆ ಉಂಟು ಮಾಡಿದೆ ಎಂದು ಹೇಳಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಹರಿಪ್ರಸಾದ್ ಸಮರ್ಥಿಸಿದರು.
ಹೈಕಮಾಂಡ್ ಅಹಸಾಯಕವಲ್ಲ:
ಅಧಿಕಾರ ಹಸ್ತಾಂತರ ಕುರಿತು ಚರ್ಚೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಹೈಕಮಾಂಡ್ ಅಸಹಾಯಕವಲ್ಲ. ಅವರು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಮಾಡುತ್ತಾರೆ ಎಂದು ಹರಿಪ್ರಸಾದ್ ಹೇಳಿದರು.
ಪಕ್ಷ ಸಂಘಟನೆಯಲ್ಲಿ ಡಿ.ಕೆ.ಶಿವಕುಮಾರ್ ಮುಂಚೂಣಿಯಲ್ಲಿದ್ದರೆ, ಆಡಳಿತಾತ್ಮಕ ವಿಷಯಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ವಹಿಸಿದ್ದಾರೆ. ಇವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಒಂದು ವೇಳೆ ಇದ್ದರೂ ಎಐಸಿಸಿ ಅಧ್ಯಕ್ಷರು ಬಗೆಹರಿಸುತ್ತಾರೆ ಎಂದರು.
