Headlines

ಈತ ಜನಮೆಚ್ಚಿದ ಸಿನಿಮಾ ಹೀರೋ, ರಿಯಲ್ ಲೈಫಲ್ಲಿ ಜೀರೋ; ಬ್ಯಾಂಕ್‌ನಲ್ಲಿ ಬ್ಯಾಲೆನ್ಸೂ ಇಲ್ಲ, ಕೈಯಲ್ಲಿ ಕಾಸೂ ಇಲ್ಲ! | National Award Winning Hero Still Daily Wage Laborer Heartbreaking Story Of Thithi Movie Actor Abhishek Sat

ಈತ ಜನಮೆಚ್ಚಿದ ಸಿನಿಮಾ ಹೀರೋ, ರಿಯಲ್ ಲೈಫಲ್ಲಿ ಜೀರೋ; ಬ್ಯಾಂಕ್‌ನಲ್ಲಿ ಬ್ಯಾಲೆನ್ಸೂ ಇಲ್ಲ, ಕೈಯಲ್ಲಿ ಕಾಸೂ ಇಲ್ಲ! | National Award Winning Hero Still Daily Wage Laborer Heartbreaking Story Of Thithi Movie Actor Abhishek Sat


ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟ, ಇದೀಗ ಸಿನಿಮಾ ಅವಕಾಶಗಳಿಲ್ಲದೆ ಜೀವನೋಪಾಯಕ್ಕಾಗಿ ಪರದಾಡುತ್ತಿದ್ದಾರೆ. ಅವರ ಈ ಸ್ಥಿತಿಯನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿತ್ರರಂಗದ ಕರಾಳ ವಾಸ್ತವವನ್ನು ಮತ್ತು ಪ್ರತಿಭಾವಂತ ಕಲಾವಿದರ ಸಂಕಷ್ಟವನ್ನು ಇದು ತೆರೆದಿಟ್ಟಿದೆ.

ಚಿತ್ರರಂಗ ಎಂಬುದು ಬಣ್ಣದ ಲೋಕ. ಇಲ್ಲಿ ಇಂದು ಸ್ಟಾರ್ ಆಗಿದ್ದವರು ನಾಳೆ ಬೀದಿಗೆ ಬರಬಹುದು, ಬೀದಿಯಲ್ಲಿದ್ದವರು ರಾತ್ರೋರಾತ್ರಿ ಸ್ಟಾರ್ ಆಗಬಹುದು. ಇದಕ್ಕೆ ತಾಜಾ ಉದಾಹರಣೆ ರಾಷ್ಟ್ರಪ್ರಶಸ್ತಿ ವಿಜೇತ ‘ತಿಥಿ’ (Thithi) ಸಿನಿಮಾದ ನಾಯಕ ನಟ ಅಭಿಷೇಕ್. ಒಂದು ಕಾಲದಲ್ಲಿ ಬೆಳ್ಳಿಪರದೆಯ ಮೇಲೆ ಮಿಂಚಿದ್ದ ಈ ನಟ, ಇಂದು ಜೀವನೋಪಾಯಕ್ಕಾಗಿ ಹೊಲಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಿರುವುದು ಕನ್ನಡಿಗರ ಕಣ್ಣಾಲಿಗಳನ್ನು ತೇವಗೊಳಿಸಿದೆ.

ವೈರಲ್ ವಿಡಿಯೋ ಮತ್ತು ಇಂದಿನ ಸ್ಥಿತಿ:

ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಕೆಂಪರಾಜ್ ಗೌಡ ಎಂಬವರು ಇತ್ತೀಚೆಗೆ ಹಂಚಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲಿ ‘ತಿಥಿ’ ಚಿತ್ರದ ನಾಯಕ ಅಭಿಷೇಕ್ ಅವರು ಕೃಷಿ ಭೂಮಿಯಲ್ಲಿ ಮರದ ದಿಮ್ಮಿಗಳನ್ನು ಹೊರುವ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. “ಒಂದು ಕಾಲದ ಸ್ಟಾರ್ ನಟ ಇಂದು ನಮ್ಮ ಗದ್ದೆಯ ಬಳಿ ಮರದ ದಿಮ್ಮಿಗಳನ್ನು ತುಂಬಲು ಬಂದಿದ್ದಾರೆ” ಎಂದು ಕೆಂಪರಾಜ್ ನೋವಿನಿಂದಲೇ ಈ ವಿಷಯ ಹಂಚಿಕೊಂಡಿದ್ದಾರೆ.

ಸಿನಿಮಾ ಅವಕಾಶಗಳ ಕೊರತೆ:

ಈ ಬಗ್ಗೆ ಸ್ವತಃ ಅಭಿಷೇಕ್ ಅವರನ್ನೇ ಮಾತನಾಡಿಸಿದಾಗ, ಅವರ ಮಾತುಗಳಲ್ಲಿ ಹತಾಶೆ ಮತ್ತು ಅಸಹಾಯಕತೆ ಎದ್ದು ಕಾಣುತ್ತಿತ್ತು. ‘ಸಿನಿಮಾದಲ್ಲಿ ನಟಿಸಿದ ನಂತರ ಸಾಕಷ್ಟು ಹೆಸರು ಬಂದಿತು ನಿಜ. ಆದರೆ, ಹೊಟ್ಟೆಪಾಡಿಗೆ ಬರಿ ಹೆಸರು ಸಾಕಾಗುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ಯಾವುದೇ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ. ಮನೆಯಲ್ಲಿ ಸುಮ್ಮನೆ ಕೂರುವ ಬದಲು, ಸ್ವಾಭಿಮಾನದಿಂದ ಸಿಕ್ಕ ಕೆಲಸವನ್ನು ಮಾಡುತ್ತಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

‘ತಿಥಿ’ ತಂದುಕೊಟ್ಟಿದ್ದ ಕೀರ್ತಿ:

2015ರಲ್ಲಿ ರಾಮ್ ರೆಡ್ಡಿ ನಿರ್ದೇಶನದಲ್ಲಿ ತೆರೆಕಂಡ ‘ತಿಥಿ’ ಸಿನಿಮಾ ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು. ಹಳ್ಳಿ ಸೊಗಡಿನ ನೈಜ ಕಥೆ ಹೊಂದಿದ್ದ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಚಿತ್ರದ ಪಾತ್ರಧಾರಿಗಳಾದ ಸೆಂಚೂರಿ ಗೌಡ, ಗಡ್ಡಪ್ಪ ಮತ್ತು ಅಭಿಯ ಪಾತ್ರಗಳು ಮನೆಮಾತಾಗಿದ್ದವು. ಈ ಚಿತ್ರದ ನಂತರ ಅಭಿಷೇಕ್ ಅವರು ‘ತರ್ಲೆ ವಿಲೇಜ್’ ಮತ್ತು ‘ಹಳ್ಳಿ ಪಂಚಾಯ್ತಿ’ ಎಂಬ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಆ ಚಿತ್ರಗಳು ನಿರೀಕ್ಷಿತ ಯಶಸ್ಸು ನೀಡದ ಕಾರಣ ಅಭಿಷೇಕ್ ತೆರೆಯಿಂದ ಮರೆಯಾದರು.

ಸಿನಿಮಾ ಕಲಾವಿದರ ಸಂಕಷ್ಟ:

‘ತಿಥಿ’ ಚಿತ್ರದ ಮತ್ತೊಬ್ಬ ಪ್ರಮುಖ ಆಕರ್ಷಣೆಯಾಗಿದ್ದ ಗಡ್ಡಪ್ಪ ಅವರು ಇತ್ತೀಚೆಗಷ್ಟೇ ವಯೋಸಹಜ ಕಾಯಿಲೆಯಿಂದ ನಿಧನರಾದರು. ಚಿತ್ರದ ನಾಯಕಿ ಪೂಜಾ ಅವರು ಮದುವೆಯಾಗಿ ಸಂಸಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಪ್ರತಿಭಾವಂತ ನಟ ಅಭಿಷೇಕ್ ಅವರಿಗೆ ಸರಿಯಾದ ವೇದಿಕೆ ಸಿಗದೆ ಕೂಲಿ ಕೆಲಸಕ್ಕೆ ಇಳಿದಿರುವುದು ಚಿತ್ರರಂಗದ ಕರಾಳ ಮುಖವನ್ನು ದರ್ಶಿಸುತ್ತದೆ.

ಕೇವಲ ಗ್ಲಾಮರ್ ಬೆನ್ನತ್ತಿ ಹೋಗುವ ಚಿತ್ರರಂಗ, ಇಂತಹ ಮಣ್ಣಿನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳೆಸಬೇಕಿದೆ. ಸದ್ಯ ಅಭಿಷೇಕ್ ಅವರ ಈ ವಿಡಿಯೋ ನೋಡಿರುವ ಅಭಿಮಾನಿಗಳು, ‘ಅಭಿಷೇಕ್ ಅವರಲ್ಲಿ ಉತ್ತಮ ನಟನಾ ಕೌಶಲವಿದೆ, ಯಾರಾದರೂ ಅವರಿಗೆ ಮತ್ತೆ ಸಿನಿಮಾದಲ್ಲಿ ಅವಕಾಶ ನೀಡಿ ಕೈ ಹಿಡಿಯಲಿ’ ಎಂದು ಆಶಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *