ಚಿಕ್ಕಮಗಳೂರು (ಜ.23): ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸರಣಿ ಲಾರಿ ಅಪಘಾತಗಳು ಸಂಭವಿಸಿದ್ದು, ವಾಹನ ಸವಾರರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಘಾಟ್‌ನ ತಿರುವಿನಲ್ಲಿ ಲಾರಿಗಳು ಪಲ್ಟಿಯಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಘಾಟ್‌ನಲ್ಲಿ ಸರಣಿ ಅಪಘಾತಗಳ ಆತಂಕ

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮಧ್ಯಾಹ್ನವಷ್ಟೇ ಗ್ಯಾಸ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಈ ಘಟನೆಯ ಬಳಿಕ ಸಂಜೆ ಮತ್ತೆರಡು ಲಾರಿಗಳು ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಪಲ್ಟಿಯಾಗಿವೆ. ಮಧ್ಯಾಹ್ನದಿಂದ ಸಂಜೆಯವರೆಗೆ ಸರಣಿ ಅಪಘಾತಗಳು ಸಂಭವಿಸಿರುವುದು ಘಾಟ್ ರಸ್ತೆಯ ಅಪಾಯಕಾರಿ ರಸ್ತೆಯಲ್ಲಿ ಪ್ರಯಾಣಿಸಲು ಹೆದರುವಂತಾಗಿದೆ.

ಐದು ಕಿಲೋಮೀಟರ್ ಟ್ರಾಫಿಕ್ ಜಾಮ್

ಲಾರಿಗಳು ರಸ್ತೆಯ ಮಧ್ಯೆಯೇ ಪಲ್ಟಿಯಾಗಿರುವುದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ರಸ್ತೆಯ ಎರಡೂ ಬದಿಗಳಲ್ಲಿ ಐದು ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ಪ್ರವಾಸಿಗರು, ಸರಕು ಸಾಗಣೆ ವಾಹನಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಂಡು ಪರದಾಡುವಂತಾಗಿದೆ.

ರಸ್ತೆ ಬಂದ್ ಮಾಡಿದ ಬಣಕಲ್ ಪೊಲೀಸರು

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಬಣಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಕೂಡಲೇ ಕಾರ್ಯಾಚರಣೆಗೆ ಇಳಿದಿದ್ದಾರೆ. ಕೊಟ್ಟಿಗೆಹಾರದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ವಾಹನಗಳು ಘಾಟ್ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆಯಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಪರ್ಯಾಯ ಮಾರ್ಗದ ಮೊರೆ ಹೋಗಲು ಸೂಚನೆ

ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಲಾರಿಗಳನ್ನು ಕ್ರೇನ್ ಮೂಲಕ ತೆರವುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ ಲಾರಿಗಳ ತೆರವು ಕಾರ್ಯ ವಿಳಂಬವಾಗುವ ಸಾಧ್ಯತೆ ಇರುವುದರಿಂದ, ವಾಹನ ಸವಾರರು ಚಾರ್ಮಾಡಿ ಘಾಟ್ ರಸ್ತೆಯ ಬದಲಾಗಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

Source link
ಮೃತ್ಯುಪಾಶವಾದ ಚಾರ್ಮಾಡಿ ಘಾಟ್: ಒಂದೇ ದಿನ ಮೂರು ಲಾರಿಗಳು ಪಲ್ಟಿ, ಹೆದ್ದಾರಿಯಲ್ಲಿ ನೂರಾರು ವಾಹನಗಳು ಲಾಕ್!