
ಮುಂಬೈ ಊಬರ್ ಪ್ರಯಾಣದ ವೇಳೆ ನಟಿ ನಿಮಿಷಾ ನಾಯರ್ ಅವರಿಗೆ ಕೆಟ್ಟ ಅನುಭವವಾಗಿದೆ. ಕುಡಿದಂತೆ ಕಾಣುತ್ತಿದ್ದ ಇಬ್ಬರು ಬೈಕ್ ಸವಾರರಿಂದ ಕಾರನ್ನು ಅಡ್ಡಗಟ್ಟಿ, ಡ್ರೈವರ್‌ಗೆ ಬೆದರಿಕೆ ಹಾಕಿ, ಡೋರ್ ತೆಗೆಯಲು ಯತ್ನ. ನಟಿ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮುಂಬೈ: ನಟಿ ನಿಮಿಷಾ ನಾಯರ್ ಅವರು ತಮಗಾದ ಒಂದು ಭಯಾನಕ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುಂಬೈನ ಬಾಂದ್ರಾ ನಗರದಲ್ಲಿ ಊಬರ್ ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ಇಬ್ಬರು ಬೈಕ್ ಸವಾರರು ದಾರಿ ಅಡ್ಡಗಟ್ಟಿ, ಕಾರಿನ ಡೋರ್ ತೆಗೆಯಲು ಯತ್ನಿಸಿ, ಡ್ರೈವರ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ಬಾಂದ್ರಾ ಪೂರ್ವದಲ್ಲಿ ಈ ಘಟನೆ ನಡೆದಿದೆ. ನಿಮಿಷಾ ಅವರು ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ, ಅವರ ಡ್ರೈವರ್ ಒಂದು ಸ್ಕೂಟರ್ ಅನ್ನು ಓವರ್‌ಟೇಕ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಸ್ಕೂಟರ್‌ನಲ್ಲಿದ್ದ ಇಬ್ಬರು, ನಿಮಿಷಾ ಅವರಿದ್ದ ಟ್ಯಾಕ್ಸಿಯನ್ನು ಹಿಂಬಾಲಿಸಲು ಶುರುಮಾಡಿದ್ದಾರೆ. ಆಗ ಸಮಯ ಮುಂಜಾನೆ ಸುಮಾರು 4:30 ಆಗಿತ್ತು ಎಂದು ನಿಮಿಷಾ ಹೇಳಿದ್ದಾರೆ.
ಖೇರ್ವಾಡಿ ಫ್ಲೈಓವರ್ ಬಳಿ ಈ ಘಟನೆ ನಡೆದಿದೆ. ‘ಕುಡಿದಂತೆ ಕಾಣುತ್ತಿದ್ದ ಇಬ್ಬರು ಪುಂಡರು, ನಮ್ಮ ಊಬರ್ ಡ್ರೈವರ್ ತಮ್ಮ ಗಾಡಿಯನ್ನು ಓವರ್‌ಟೇಕ್ ಮಾಡಿದ್ದಕ್ಕೆ ರೊಚ್ಚಿಗೆದ್ದಿದ್ದರು’ ಎಂದು ನಟಿ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ‘ಹೈವೇ ಮಧ್ಯದಲ್ಲೇ ನಮ್ಮ ಕಾರಿನ ಮುಂದೆ ಸ್ಕೂಟರ್ ನಿಲ್ಲಿಸಿ, ನನ್ನ ಡ್ರೈವರ್‌ಗೆ ಬೆದರಿಕೆ ಹಾಕಿದರು. ತುಂಬಾನೇ ಕೆಟ್ಟ ಭಾಷೆಯಲ್ಲಿ ಬೈದರು. ಬಲವಂತವಾಗಿ ಕಾರಿನ ಡೋರ್ ತೆಗೆಯಲು ಯತ್ನಿಸಿದರು ಮತ್ತು ನನ್ನನ್ನು ವಿಂಡೋ ಗ್ಲಾಸ್ ಕೆಳಗೆ ಇಳಿಸುವಂತೆ ಕೇಳಿದರು’ ಎಂದು ನಿಮಿಷಾ ದೂರಿದ್ದಾರೆ.
‘ನಾನು ವಿಡಿಯೋ ಮಾಡುತ್ತಿರುವುದನ್ನು ನೋಡಿದ ಮೇಲೆ ಅವರು ಅಲ್ಲಿಂದ ಹೋದರು. ಹೋಗುವ ಮುನ್ನ ನಮ್ಮ ಕಾರಿನ ಫೋಟೋ ತೆಗೆದುಕೊಂಡರು’ ಎಂಬುದಾಗಿಯೂ ನಿಮಿಷಾ ಸ್ಪಷ್ಟಪಡಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೈಬರ್ ಲೋಕದಲ್ಲೂ ಒತ್ತಾಯ ಹೆಚ್ಚಾಗುತ್ತಿದೆ.