ಶ್ರೀಶೈಲ ಮಠದ

ಬೆಳಗಾವಿ (ಮಾ.5): ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡಿಸಲು ಅಣಿಯಾಗಿದ್ದಾನೆ. ಗಡಿ ಜಿಲ್ಲೆ ಬೆಳಗಾವಿ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಾರಿಯಾದರೂ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಜೀವ ಸಿಗಬಹುದೇ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ. ವಿಶೇಷವಾಗಿ ನೀರಾವರಿ, ಉದ್ಯೋಗ, ರಸ್ತೆ, ಕೈಗಾರಿಗೆಯ ಪ್ರಮುಖ ಯೋಜನೆಗಳಿಗೆ ಆದ್ಯತೆ ಸಿಗಬಹುದು ಎಂದು ಜನರು ಕಾತರದಿಂದ ಎದುರು ನೋಡುತ್ತಿದ್ದಾರೆ.

ಬೆಳಗಾವಿ ರಾಜ್ಯದಲ್ಲೇ ಅತಿದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಳಗಾವಿ ಶರವೇಗವಾಗಿ ಅಭಿವೃದ್ಧಿಯಾಗುತ್ತಿರುವ ನಗರವೂ ಹೌದು. ಆದರೆ ಆಡಳಿತದ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಚಿಕ್ಕೋಡಿ ಮತ್ತು ಗೋಕಾಕ ನೂತನ ಜಿಲ್ಲೆಗಳಾಗಿ ಘೋಷಿಸಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಕೇಳಿಬರುತ್ತಿದೆ.

ಬೆಳಗಾವಿ ನಗರದ ರಿಂಗ್ ರಸ್ತೆ ಮತ್ತು ಬೈಪಾಸ್ ಕಾಮಗಾರಿಗಳಿಗೆ ವೇಗ ನೀಡಬೇಕಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಭೂಮಿ ನೀಡಿದ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು ಎಂಬುದು ಜನರು ಮತ್ತು ರೈತರ ಆಗ್ರಹವಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ₹55 ಕೋಟಿ ವೆಚ್ಚದಲ್ಲಿ ಜಿಲ್ಲಾಡಳಿತದ ನೂತನ ಭವನದ ಕಟ್ಟಡ ಕಾಮಗಾರಿಗೆ ಚಾಲನೆ ನೀಡಬೇಕಿದೆ. ಅಲ್ಲದೇ, ಬೆಳಗಾವಿ ಪತ್ರಕರ್ತರ ಭವನ ಕಟ್ಟಟ ಕಾಮಗಾರಿಯೂ ನಡೆಯಬೇಕಿದೆ. ಬೆಳಗಾವಿ ಜಿಲ್ಲೆಯ ಸಪ್ತ ನದಿಗಳ ನೀರಿನ ಸಮರ್ಪಕ ಬಳಕೆ ಆಗಬೇಕಿದೆ. ಹನ್ನೊಂದು ಏತ ನೀರಾವರಿ ಯೋಜನೆಗಳಿಗೆ ಅನುದಾನ ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆ. ಜೊತೆಗೆ ಉತ್ತರ ಕರ್ನಾಟಕದ ಜನತೆಯ ಬಹುಕಾಲದ ಬೇಡಿಕೆಯಾದ ಮಹದಾಯಿ ನೀರಾವರಿ ಯೋಜನೆಯ ಕಾಮಗಾರಿಗಳ ಅಡಚಣೆಗಳನ್ನು ನಿವಾರಿಸಿ ಶೀಘ್ರ ಅನುಷ್ಠಾನಗೊಳಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೂ ಉತ್ತೇಜನ ನೀಡಬೇಕಿದೆ. ಬೆಳಗಾವಿಯಲ್ಲಿ ಐಟಿ ಪಾರ್ಕ್ ಆರಂಭಿಸುವುದು ಹಾಗೂ ನಿಪ್ಪಾಣಿಯ ಮಾಂಗೂರು ಬೆಳ್ಳಿ ಪಾರ್ಕ್ ಯೋಜನೆಯನ್ನು ಅನುಷ್ಠಾನಗೊಳಿಸುವ ಬೇಡಿಕೆಯೂ ಇದೆ. ಇದರ ಜತೆಗೆ ಗ್ರಾಮೀಣ ರಸ್ತೆ ಸಾರಿಗೆ ಇನ್ನಷ್ಟು ಬಲ ತುಂಬಬೇಕಿದೆ.

ಸುವರ್ಣ ವಿಧಾನಸೌಧವನ್ನು ಶಕ್ತಿಕೇಂದ್ರವನ್ನಾಗಿಸಲು ಕ್ರಮ ಕೈಗೊಳ್ಳುವುದರ ಜೊತೆಗೆ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಘೋಷಣೆ ಮಾಡಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

ಬೆಳಗಾವಿ ನಗರದಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಮೇಲ್ಸೇತುವೆಗಳು ಮತ್ತು ರಿಂಗ್ ರಸ್ತೆ ಯೋಜನೆಗಳು ಘೋಷಣೆಗೆ ಮಾತ್ರ ಸೀಮಿತವಾಗಿವೆ. ಅವುಗಳಿಗೆ ಸಮರ್ಪಕ ಅನುದಾನ ನೀಡಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವೂ ಆಗಿದೆ. ಜೊತೆಗೆ ಚಿಕ್ಕೋಡಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಬೇಡಿಕೆಯೂ ಜನರಿಂದ ಕೇಳಿಬರುತ್ತಿದೆ.

ಪ್ರವಾಹ ಪೀಡಿತ ನದಿತೀರದ ಗ್ರಾಮಗಳನ್ನು ಸ್ಥಳಾಂತರಿಸಿ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕಿದೆ. ಉದ್ಯೋಗ ಅರಸಿ ಜನರು ಬೇರೆ ನಗರಗಳಿಗೆ ವಲಸೆ ಹೋಗುತ್ತಿರುವುದನ್ನು ತಡೆಯಲು ಗಡಿಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಬಾರಿಯ ಬಜೆಟ್ನಲ್ಲಿ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಪ್ರಮುಖ ಯೋಜನೆಗಳಿಗೆ ಆದ್ಯತೆ ಸಿಗುತ್ತದೆಯೇ ಎಂಬುದನ್ನು ಜನರು ಆತುರದಿಂದ ಎದುರು ನೋಡುತ್ತಿದ್ದಾರೆ.

ಸಾರಿಗೆ ಕ್ಷೇತ್ರದಲ್ಲಿ ಸಾಕಷ್ಟು ನಿರೀಕ್ಷೆ:

ಬೆಳಗಾವಿ ಜಿಲ್ಲೆ ಗೋವಾ ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. ಹೀಗಾಗಿ ಮುಂಬೈ, ಪುಣೆ, ಕೊಲ್ಲಾಪುರ, ಇಚಲಕರಂಜಿ, ಸಾಂಗ್ಲಿ, ಸತಾರಾ, ಚಂದಗಡ, ಪಣಜಿ ಸೇರಿದಂತೆ ಹಲವಾರು ಪ್ರಮುಖ ನಗರಗಳಿಗೆ ಬಸ್ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಿದೆ. ಗೋವಾ ಮತ್ತು ಪುಣೆ, ಮುಂಬೈಗೆ ಸಾಕಷ್ಟು ಖಾಸಗಿ ಬಸ್ಗಳು ಈಗಾಗಲೇ ಸಂಚಾರ ನಡೆಸುತ್ತಿದ್ದು, ಲಾಭವನ್ನು ಪಡೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಇನ್ನಷ್ಟು ಉತ್ತಮ ಸಾರಿಗೆ ಬಸ್ಗಳ ಸೇವೆಯನ್ನು ನೀಡಿದರೆ ಸಾರಿಗೆ ಇಲಾಖೆಗೆ ಉತ್ತಮ ಲಾಭ ಕೂಡ ಆಗಲಿದೆ. ಇದಲ್ಲದೆ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿಯಂತಹ ಅಂತರ ಜಿಲ್ಲಾ ಸಾರಿಗೆಗೆ ಎಸಿ ಬಸ್ಗಳ ಕೊರತೆ ಎದ್ದು ಕಾಣುತ್ತಿದೆ. ಎಸಿ ಬಸ್ಸುಗಳಲ್ಲಿ ಸಂಚಾರ ಮಾಡುವವರ ಸಂಖ್ಯೆ ಇದ್ದರೂ ಬಸ್ಗಳ ಕೊರತೆಯಿಂದಾಗಿ ಪ್ರಯಾಣಿಕರ ಕೊರತೆ ಬಾಧಿಸುತ್ತಿದೆ.

Source link
Karnataka Budget 2026-27: ಇಂದಿನ ಬಜೆಟ್ನಲ್ಲಿ ಬೆಳಗಾವಿಗೆ ಸಿಗುತ್ತಾ ಬಂಪರ್? ಬೇಡಿಕೆಗಳೇನು?