
ದೆಹಲಿ ಸಾರಿಗೆ ನಿಗಮದ ಬಸ್ ಕಂಡಕ್ಟರ್ ರಣವೀರ್ ಸಿಂಗ್ ಯಾದವ್, 5 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಿದ ಆರೋಪದ ಮೇಲೆ ಕೆಲಸ ಕಳೆದುಕೊಂಡರು. ತಮ್ಮದಲ್ಲದ ತಪ್ಪಿಗೆ ನ್ಯಾಯಕ್ಕಾಗಿ 40 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಹೋರಾಡಿ, ಕೊನೆಗೂ ತಮ್ಮ ಪ್ರಕರಣದಲ್ಲಿ ಜಯ ಸಾಧಿಸಿದರು.
Justice Delayed is Justice Denied (ವಿಳಂಬದ ನ್ಯಾಯ, ನ್ಯಾಯಕ್ಕೇ ಮಾಡುವ ಅನ್ಯಾಯ) ಎನ್ನುವ ಮಾತಿದೆ. ಆದರೆ, ಕೋರ್ಟ್ಗಳಿಗೆ ದಾಖಲಾಗುತ್ತಿರುವ ಕೇಸ್ಗಳ ಸಂಖ್ಯೆಗಳಿಂದಾಗಿ ಕೋರ್ಟ್ಗಳ ಮೇಲೆ ಹೊರೆ ಹೆಚ್ಚುತ್ತಲೇ ಸಾಗಿದ್ದು, ಇದರಿಂದ ಅದೆಷ್ಟೋ ಅಮಾಯಕರು 40-50 ವರ್ಷಗಳವರೆಗೆ ತಮ್ಮದಲ್ಲದ ತಪ್ಪಿಗೆ ನೋವು ಅನುಭವಿಸುತ್ತಲೇ ಇರಬೇಕು. ಅಂಥವರಲ್ಲಿ ಒಬ್ಬರು ದೆಹಲಿಯ ಬಸ್ ಕಂಡಕ್ಟರ್ ರಣವೀರ್ ಸಿಂಗ್ ಯಾದವ್. ಇವರ ಕೇಸ್ ಇದೀಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ! 5 ಪೈಸೆ ಕಳ್ಳತನ ಮಾಡಿದ್ದಕ್ಕಾಗಿ 40 ವರ್ಷಗಳ ನ್ಯಾಯಾಲಯದ ವಿಚಾರಣೆಯನ್ನು ಎದುರಿಸಿದ್ದಾರೆ ಇವರು. ಕೊನೆಗೂ ಅವನಿಗೆ ನ್ಯಾಯ ಸಿಕ್ಕಿದೆ. ನಿಜ, ನಿಜ, ಕೇಳ್ತಿರೋದು ನಿಜವೇ. ಐದು ಪೈಸೆ ಕಳ್ಳತನದ ಆರೋಪದ ಮೇಲೆ ಕೆಲಸವನ್ನೇ ಕಳೆದುಕೊಂಡಿದ್ದ ಈ ಕಂಡಕ್ಟರ್‌ಗೆ ಈಗ ಕೋರ್ಟ್ನಿಂದ ಜಯ ಸಿಕ್ಕಿದೆ!
ಏನಿದು ಸ್ಟೋರಿ?
ಈ ಪ್ರಕರಣ ದೆಹಲಿಯದ್ದು. ಸ್ಟೋರಿ ಆರಂಭವಾಗುವುದು 1973ರಿಂದ. ರಣವೀರ್ ಸಿಂಗ್ ಯಾದವ್ ಎಂಬ ಯುವ ಬಸ್ ಕಂಡಕ್ಟರ್‌ಗೆ ಇಬ್ಬರು ಮಕ್ಕಳಿದ್ದಾಗ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು. ರಣವೀರ್ ಅವರು ಡಿಟಿಸಿ (ದೆಹಲಿ ಸಾರಿಗೆ ನಿಗಮ) ದಲ್ಲಿ ಟಿಕೆಟ್ ಪರಿಶೀಲಿಸುವ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾಗ. ಒಂದು ದಿನ, ಒಬ್ಬ ಮಹಿಳೆ 10 ಪೈಸೆ ಟಿಕೆಟ್‌ಗೆ 15 ಪೈಸೆ ಕಡಿತಗೊಳಿಸಿ 5 ಪೈಸೆ ಹೆಚ್ಚುವರಿಯಾಗಿ ವಿಧಿಸಿದ್ದಾರೆ ಎಂದು ಆರೋಪಿಸಿದರು. ಇದರ ನಂತರ, ರಣವೀರ್ ಅವರನ್ನು ತನಿಖೆ ಮಾಡಲಾಯಿತು ಮತ್ತು ಮೂರು ವರ್ಷಗಳ ನಂತರ, ಅವರನ್ನು ವಜಾಗೊಳಿಸಲಾಯಿತು.
40 ವರ್ಷ ಕೋರ್ಟ್ ಅಲೆದಾಟ
ರಣವೀರ್ ಅವರ ಜೀವನದಲ್ಲಿ ಅವರ ಮಕ್ಕಳು ಸಹ “ನೀವು ಯಾರಿಗಾದರೂ ಮೋಸ ಮಾಡಿದ್ದೀರಾ” ಎಂದು ಕೇಳುತ್ತಿದ್ದ ಸಂದರ್ಭಗಳಿವೆಯಂತೆ. ವಯಸ್ಸಾದ ಮೇಲೆ ರಣವೀರ್ ಅವರ ಸ್ನೇಹಿತರು ತೀರ್ಥಯಾತ್ರೆಗಳಲ್ಲಿದ್ದಾಗ, ರಣವೀರ್ ನಿರಂತರವಾಗಿ ನ್ಯಾಯಾಲಯದಲ್ಲಿ ಇರುತ್ತಿದ್ದರು. 1990 ರಲ್ಲಿ, ಅವರು ಕಾರ್ಮಿಕ ನ್ಯಾಯಾಲಯದಲ್ಲಿ ಜಯಗಳಿಸಿದರು, ಅದು ಅವರ ವಜಾವನ್ನು ಕಾನೂನುಬಾಹಿರವೆಂದು ಘೋಷಿಸಿತು. ಆದಾಗ್ಯೂ, ಡಿಟಿಸಿ, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು ಮತ್ತು ಪ್ರಕರಣವು 40 ವರ್ಷಗಳಿಗೂ ಹೆಚ್ಚು ಕಾಲ ನಡೆಯಿತು. 1994 ರಲ್ಲಿ ಭಾರತದಲ್ಲಿ 5 ಪೈಸೆ ನಾಣ್ಯವನ್ನು ರದ್ದುಗೊಳಿಸಲಾಯಿತು. ಆದರೂ, ರಣವೀರ್ ಇನ್ನೂ ಇಷ್ಟು ದಿನ ವಿಚಾರಣೆಯನ್ನು ಸಹಿಸಿಕೊಳ್ಳಬೇಕಾಯಿತು. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಮಾತ್ರ ರಣವೀರ್ ಸುಮಾರು 4 ಲಕ್ಷ ರೂಪಾಯಿ ಕಾನೂನು ಶುಲ್ಕವನ್ನು ಖರ್ಚು ಮಾಡಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
ಕೊನೆಗೂ ಸಿಕ್ಕಿತು ನ್ಯಾಯ?
2016 ರಲ್ಲಿ NDTV ಜೊತೆ ಮಾತನಾಡಿದ್ದ ರಣವೀರ್ ಅವರ ಪತ್ನಿ, “ಇದು ಐದು ಪೈಸೆ ಸ್ಟೋರಿ ಕಥೆಯಲ್ಲ. ನಮಗೆ ಶಿಕ್ಷೆ ವಿಧಿಸಿದ ರೀತಿ ಲಕ್ಷಾಂತರ ರೂಪಾಯಿಗಳಿಗೆ ಸಮಾನ. ಈಗ ಆ ಐದು ಪೈಸೆಯ ಕರೆನ್ಸಿ ಕೂಡ ಇನ್ನು ಮುಂದೆ ಮಾನ್ಯವಾಗಿಲ್ಲ. ಆದರೆ ನಮಗಿನ್ನೂ ನ್ಯಾಯ ಸಿಕ್ಕಿಲ್ಲ ಎಂದಿದ್ದರು. ಅಂತಿಮವಾಗಿ, ರಣವೀರ್ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಗೆದ್ದರು. ನ್ಯಾಯಾಲಯವು ಅವರಿಗೆ 30 ಸಾವಿರ ರೂಪಾಯಿ ಪರಿಹಾರದ ಜೊತೆಗೆ, 1.28 ಲಕ್ಷ ಗ್ರಾಚ್ಯುಟಿ ಮತ್ತು 1.37 ಲಕ್ಷ ರೂಪಾಯಿ CPF ಪಾವತಿಸಲು ಸಾರಿಗೆ ನಿಮಗಕ್ಕೆ ಆದೇಶಿಸಿದೆ. ಅಂದರೆ ಖರ್ಚು ಮಾಡಿದ 4 ಲಕ್ಷ ರೂಪಾಯಿಗೆ ಇವರಿಗೆ ಕೋರ್ಟ್ನಿಂದ ಅಷ್ಟೇ ಪರಿಹಾರ ಸಿಕ್ಕಂತಾಗಿದೆ!