ಬೆಂಗಳೂರು ನಗರದಲ್ಲಿ ಇ-ಖಾತಾ ಮಾಫಿಯಾ : ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ | R Ashoka Alleges E Khata Mafia Operating In Bengaluru

ಬೆಂಗಳೂರು ನಗರದಲ್ಲಿ ಇ-ಖಾತಾ ಮಾಫಿಯಾ : ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ | R Ashoka Alleges E Khata Mafia Operating In Bengaluru



ಬೆಂಗಳೂರು ನಗರದಲ್ಲಿ ಇ-ಖಾತಾ ಮಾಫಿಯಾ : ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ | R Ashoka Alleges E Khata Mafia Operating In Bengaluru

ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಹೆಸರಿನಲ್ಲಿ ಮಾಫಿಯಾ ಸೃಷ್ಟಿಯಾಗಿದ್ದು, ಪ್ರತಿ ಇ-ಖಾತೆಗೆ ಫೋನ್‌ ಪೇ ಮೂಲಕವೇ 50 ಸಾವಿರ ರು.ವರೆಗೆ ಲಂಚ ಪಡೆಯುತ್ತಿದ್ದಾರೆ ಎಂದು ಫೋನ್‌ ಪೇ ಮೂಲಕ ಲಂಚ ಪಾವತಿಸಿರುವ ದಾಖಲೆ ಬಿಡುಗಡೆ ಮಾಡಿ ಆರ್‌. ಅಶೋಕ್‌ ಗಂಭೀರ ಆರೋಪ

ವಿಧಾನಸಭೆ : ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಹೆಸರಿನಲ್ಲಿ ಮಾಫಿಯಾ ಸೃಷ್ಟಿಯಾಗಿದ್ದು, ಪ್ರತಿ ಇ-ಖಾತೆಗೆ ಫೋನ್‌ ಪೇ ಮೂಲಕವೇ 50 ಸಾವಿರ ರು.ವರೆಗೆ ಲಂಚ ಪಡೆಯುತ್ತಿದ್ದಾರೆ ಎಂದು ಫೋನ್‌ ಪೇ ಮೂಲಕ ಲಂಚ ಪಾವತಿಸಿರುವ ದಾಖಲೆ ಬಿಡುಗಡೆ ಮಾಡಿ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌. ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಅಲ್ಲದೆ, ಫೋನ್‌ ಪೇ ಮೂಲಕ 15,000 ರು. ಲಂಚ ಪಾವತಿಸಿರುವ ದಾಖಲೆಗಳನ್ನು ಸದನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸ್ಪೀಕರ್ ಯು.ಟಿ. ಖಾದರ್‌ ಅವರಿಗೆ ನೀಡಿದ ಅವರು, ‘ನಗರದಲ್ಲಿ ಇ-ಖಾತಾ ಮಾಫಿಯಾ ಸೃಷ್ಟಿಯಾಗಿದೆ. ಖಾತೆಗೆ 30-40 ಸಾವಿರ ಲಂಚ ಪಡೆಯುತ್ತಿದ್ದಾರೆ. ದೇವನಹಳ್ಳಿ ಕಡೆ 50,000 ರು. ನಿಗದಿಯಾಗಿದ್ದು, ಕನಕಪುರದಲ್ಲಿ ಅನಧಿಕೃತ ಬಡಾವಣೆಯಲ್ಲಿನ ನಿವೇಶನಗಳಿಗೆ ಇ-ಖಾತಾ ನೀಡಲು ತಲಾ 1 ಲಕ್ಷ ರು. ನಿಗದಿಯಾಗಿದೆ. ಈ ಕುರಿತು ದಾಖಲೆಗಳನ್ನೂ ಒದಗಿಸುತ್ತೇನೆ’ ಎಂದು ಹೇಳಿದರು.

ಇ-ಖಾತಾ ಸಮಸ್ಯೆ ಜತೆಗೆ ಆಸ್ತಿ ತೆರಿಗೆ ಪಾವತಿಸಿರುವವರ ಆಸ್ತಿಯೂ ಹರಾಜು ಹಾಕುವುದಾಗಿ ನೋಟಿಸ್‌ ನೀಡಿ ಬೆದರಿಸಲಾಗುತ್ತಿದೆ. ಓಸಿ-ಸಿಸಿ ಸಮಸ್ಯೆ ಸೃಷ್ಟಿಸಿ ಸಾಲ-ಸೋಲ ಮಾಡಿ ಕಟ್ಟಡ ಕಟ್ಟಿರುವ ಬೆಂಗಳೂರು ನಿವಾಸಿಗಳು ಕಣ್ಣೀರಾಕುವ ಸ್ಥಿತಿ ಬಂದಿದೆ ಎಂದು ಸಮಸ್ಯೆಗಳನ್ನು ಬಿಚ್ಚಿಟ್ಟರು.

ವಿಧಾನಸಭೆಯಲ್ಲಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ‘ನಮ್ಮ ಸರ್ಕಾರದಲ್ಲಿ ಲಂಚ ಪಡೆದ ಒಬ್ಬರನ್ನು ತೋರಿಸಿ’ ಎಂದು ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದ್ದರು.

ಬೆಂಗಳೂರಿನಲ್ಲಿ ಒಬ್ಬ ಮಾಲೀಕರು ಹರಾಜಿನಲ್ಲಿ ಬಿಡಿಎ ಮೂಲೆ ನಿವೇಶನ ಪಡೆದಿದ್ದರು. ಅದನ್ನು ಇ-ಖಾತಾ ಮಾಡಿಸಲು ಹೋದಾಗ, ಅಧಿಕಾರಿಗಳು ಇದು ಎ ಖಾತಾ ಆಗಲ್ಲ, ಬಿ ಖಾತಾ ಎಂದು ಹೇಳಿ 30,000 ರು.. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲಿಗೆ ಅಧಿಕಾರಿಗೆ ಫೋನ್‌ ಪೇನಲ್ಲಿ 15,000 ರು. ಲಂಚ ಸಂದಾಯವಾಗಿದೆ ಎಂದು ಫೋನ್‌ ಪೇ ಸ್ಕ್ರೀನ್‌ಶಾಟ್‌ ಪ್ರತಿ ಪ್ರದರ್ಶಿಸಿದರು.

ಲಂಚ ಪಡೆದ ಅಧಿಕಾರಿ ಅರ್ಜಿ ಕ್ಲಿಯರ್‌ ಮಾಡಿದ್ದಾರೆ. ಆದರೆ ಅರ್ಜಿಯನ್ನು ಜಿಲ್ಲಾಧಿಕಾರಿ ತಿರಸ್ಕಾರ ಮಾಡಿದ್ದಾರೆ. ಮತ್ತೆ ಎರಡು ಬಾರಿ ಅರ್ಜಿ ಹಾಕಿದಾಗಲೂ ತಿರಸ್ಕಾರವಾಗಿದೆ.

ನಿವೇಶನ ಮಾಲೀಕರು ಗ್ರಾಹಕರ ನ್ಯಾಯಾಲಯಕ್ಕೆ ಹೋದರೂ ನ್ಯಾಯ ಸಿಗಲಿಲ್ಲ. ಡಿ.ಕೆ. ಶಿವಕುಮಾರ್‌ ಅವರ ಸಹಾಯವಾಣಿಗೆ ದೂರು ನೀಡಿದರೂ ನ್ಯಾಯ ಸಿಗಲಿಲ್ಲ. ಕೊನೆಗೆ ಲಂಚದ ಹಣ ಫೋನ್‌ ಪೇ ಮೂಲಕವೇ ವಾಪಸು ಹಾಕಿದ್ದಾರೆ. ಇಷ್ಟರ ಮಟ್ಟಿಗೆ ರಾಜಾರೋಷವಾಗಿ ಇ-ಖಾತಾ ಲಂಚಾವತಾರ ನಡೆಯುತ್ತಿದೆ ಎಂದು ದೂರಿದರು.

ಆಸ್ತಿ ತೆರಿಗೆ ಪಾವತಿಸಿದರೂ ಮನೆ ಹರಾಜು:

ಎಚ್‌ಬಿಆರ್‌ ಲೇಔಟ್‌ನಲ್ಲಿ ಮಾಲೀಕರ ತಂದೆಗೆ ಆಸ್ತಿ ತೆರಿಗೆ ಪಾವತಿಸಿಲ್ಲ ಹೀಗಾಗಿ ನಿಮ್ಮ ಮನೆ ಹರಾಜು ಹಾಕುತ್ತಿದ್ದೇವೆ ಎಂದು ಜಿಬಿಎದಿಂದ ಹರಾಜು ನೋಟಿಸ್‌ ನೀಡಲಾಗಿದೆ. ಈ ಮನೆಯ ಖಾತೆಯನ್ನು ತಂದೆ ಮಗನ ಹೆಸರಿಗೆ ನೋಂದಣಿ ಮಾಡಿಸಿದ್ದರು. ಈವರೆಗೆ ಮಗ ಸರಿಯಾಗಿ ತೆರಿಗೆ ಪಾವತಿಸಿದ್ದಾರೆ. ಆದರೆ ಅವರ ತಂದೆಗೆ ನೋಟಿಸ್‌ ನೀಡಲಾಗಿದೆ. ಈ ರೀತಿಯ 50 ಪ್ರಕರಣಗಳ ಮಾಹಿತಿ ನಾನು ನೀಡಬಲ್ಲೆ ಎಂದು ಅಶೋಕ್‌ ಆರೋಪಿಸಿದರು.

ಸಮಸ್ಯೆಗಳ ಆಗರ:

ಕರ್ನಾಟಕದ ಶೇ.65 ರಷ್ಟು ಆದಾಯ ಬೆಂಗಳೂರಿಂದ ಬರುತ್ತಿದೆ. ಮೂಲಸೌಕರ್ಯದ ಕೊರತೆಯಿಂದಾಗಿ ಅನೇಕ ಕಂಪನಿಗಳು ನಗರವನ್ನು ತೊರೆಯುತ್ತಿವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಬೆಂಗಳೂರು ಯೋಜನೆ ಘೋಷಿಸಿದ್ದರು. ಆದರೆ ಬೆಂಗಳೂರನ್ನು ತೆಲಂಗಾಣದ ಕಾಂಗ್ರೆಸ್‌ ಮುಖ್ಯಮಂತ್ರಿಯೇ ಟೀಕಿಸಿದ್ದಾರೆ. ಆದರೂ ಶಿವಕುಮಾರ್‌ ಅವರ ಬಾಯಿಬಿಟ್ಟಿಲ್ಲ ಎಂದು ಅಶೋಕ್ ದೂರಿದರು.

ಒನ್‌ ಟೈಂ ಪರಿಹಾರ ನೀಡಿ

ಕಟ್ಟಡಗಳಿಗೆ ಒಸಿ ನೀಡದೆ ಸಮಸ್ಯೆ ಉಂಟಾಗಿದೆ. ಏನೇ ಕೇಳಿದರೂ ಸುಪ್ರೀಂ ಕೋರ್ಟ್‌ ಆದೇಶವಿದೆ ಎನ್ನುತ್ತಾರೆ. ಈಗಾಗಲೇ ನಿರ್ಮಾಣವಾದ 4 ಲಕ್ಷ ಕಟ್ಟಡಗಳು ಬಳಕೆಯಾಗದೆ ಪಾಳು ಬಿದ್ದಿದೆ. ಒಸಿ ನೀಡಲು ಸಾಧ್ಯವಿಲ್ಲವಾದರೆ ನಿರ್ಮಾಣವಾಗಲು ಅನುಮತಿ ಏಕೆ ನೀಡಬೇಕಿತ್ತು? ಎಂದು ಆರ್‌. ಅಶೋಕ್‌ ಕಿಡಿ ಕಾರಿದರು. ಆಗ ಡಿ.ಕೆ. ಶಿವಕುಮಾರ್‌ ಮಧ್ಯಪ್ರವೇಶಿಸಿ ಏನು ಮಾಡಬೇಕೆಂದು ಪರಿಹಾರ ತಿಳಿಸಿ ಎಂದರು. ಅದಕ್ಕೆ, ಈ ಹಿಂದೆ ಒಂದು ಬಾರಿಯ ಪರಿಹಾರವಾಗಿ ಅನುಮತಿ ನೀಡಲಾಗಿತ್ತು. ಅದೇ ರೀತಿ ಓಸಿ ನೀಡಿ ಎಂದು ಸಲಹೆ ನೀಡಿದರು.ಬೆಂಗಳೂರು ಕುರಿತ ಚರ್ಚೆಗೆ ಬುಧವಾರ ಉತ್ತರ ಕೊಡುತ್ತೇನೆ. ಕೆಲವು ಮುತ್ತು ರತ್ನಗಳು ಸಹ ಉದುರಿವೆ. ಎಲ್ಲೆಲ್ಲಿ ಏನಾನಾಗಿದೆ ಎಂಬ ಬಗ್ಗೆ ಪ್ರತಿಯೊಂದಕ್ಕೂ ಉತ್ತರ ಕೊಡುತ್ತೇನೆ.

– ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ



Source link

Leave a Reply

Your email address will not be published. Required fields are marked *