
ನಿನ್ನೆ ಉಳಿದ ಪಿಜ್ಜಾ, ಚಿಕನ್ ಅಥವಾ ಅನ್ನವನ್ನು ಇಂದು ತಿನ್ನುವುದು ಸುರಕ್ಷಿತವೇ? ಮೈಕ್ರೋಬಯಾಲಜಿಸ್ಟ್ ಒಬ್ಬರು ಇದರಲ್ಲಿರುವ ಗುಪ್ತ ಅಪಾಯಗಳ ಬಗ್ಗೆ ವಿವರಿಸಿದ್ದಾರೆ. ಆಹಾರವನ್ನು ಸರಿಯಾಗಿ ಶೇಖರಿಸಿಡದಿದ್ದರೆ ಫುಡ್ ಪಾಯ್ಸನಿಂಗ್ ಆಗುವ ಸಾಧ್ಯತೆ ಇದೆ. ಸುರಕ್ಷಿತವಾಗಿರುವುದು ಹೇಗೆಂದು ತಿಳಿಯಿರಿ.
ಮೈಕ್ರೋಬಯಾಲಜಿಸ್ಟ್ ಡಾ. ಪ್ರಿಮ್ರೋಸ್ ಫ್ರೀಸ್ಟೋನ್ ಅವರು ‘ದಿ ಕಾನ್ವರ್ಸೇಶನ್’ (The Conversation) ಪತ್ರಿಕೆಯಲ್ಲಿ ಬರೆದ ಲೇಖನವೊಂದರಲ್ಲಿ, ನಾವು ಪ್ರತಿದಿನ ಉಳಿಸುವ ಆಹಾರ ಹೇಗೆ ನಮ್ಮ ಆರೋಗ್ಯಕ್ಕೆ ಸದ್ದಿಲ್ಲದೆ ಅಪಾಯ ತರಬಹುದು ಎಂದು ವಿವರಿಸಿದ್ದಾರೆ. ಅವರ ವಿಶ್ಲೇಷಣೆ ಪ್ರಕಾರ, ಸರಿಯಾಗಿ ಬೇಯಿಸದ ಆಹಾರ ಅಥವಾ ಅಡುಗೆ ಮಾಡುವಾಗ ಸ್ವಚ್ಛತೆ ಇಲ್ಲದಿದ್ದರೆ ಮಾತ್ರ ಫುಡ್ ಪಾಯ್ಸನಿಂಗ್ ಆಗುವುದಿಲ್ಲ. ಬದಲಾಗಿ, ಅಡುಗೆ ಮಾಡಿದ ನಂತರ ಆಹಾರವನ್ನು ಹೇಗೆ ಶೇಖರಿಸಿಡುತ್ತೇವೆ ಎನ್ನುವುದೂ ಅಷ್ಟೇ ಮುಖ್ಯ.
ಉಳಿದ ಆಹಾರವನ್ನು ಹೆಚ್ಚು ಸಮಯದವರೆಗೆ ಹೊರಗಿಟ್ಟರೆ ಅಥವಾ ಸರಿಯಾಗಿ ತಣ್ಣಗೆ ಮಾಡದಿದ್ದರೆ, ಅದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್‌ಗಳು ವೇಗವಾಗಿ ಬೆಳೆಯುತ್ತವೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಸರಿಯಾಗಿ ಅಡುಗೆ ಮಾಡುವುದರ ಜೊತೆಗೆ ಆಹಾರವನ್ನು ಎಚ್ಚರಿಕೆಯಿಂದ ಶೇಖರಿಸಿಡುವುದು ಕೂಡ ಬಹಳ ಮುಖ್ಯ ಎಂದು ಈ ಅಧ್ಯಯನ ಒತ್ತಿ ಹೇಳುತ್ತದೆ.
ಪಿಜ್ಜಾದಿಂದ ಪ್ರಾಬ್ಲಮ್
ತಣ್ಣಗಾದ ಪಿಜ್ಜಾ ನೋಡಲು ಹಾನಿಕಾರಕವಲ್ಲ ಎನಿಸಬಹುದು, ಆದರೆ ಅದರಿಂದ ಅನಿರೀಕ್ಷಿತ ಅಪಾಯಗಳಿವೆ. ಡಾ. ಫ್ರೀಸ್ಟೋನ್ ಪ್ರಕಾರ, ಪಿಜ್ಜಾ ಮೇಲಿರುವ ಒಣಗಿದ ಗಿಡಮೂಲಿಕೆಗಳು ಮತ್ತು ಮಸಾಲೆ ಪದಾರ್ಥಗಳಲ್ಲಿಯೂ ಸಾಲ್ಮೊನೆಲ್ಲಾ (Salmonella) ಅಥವಾ ಬ್ಯಾಸಿಲಸ್ ಸೀರಿಯಸ್ (Bacillus cereus) ನಂತಹ ಬ್ಯಾಕ್ಟೀರಿಯಾಗಳು ಇರಬಹುದು. ಈ ಸೂಕ್ಷ್ಮಾಣುಜೀವಿಗಳು ಸಂಸ್ಕರಣೆಯ ಹಂತದಲ್ಲಿ ನಾಶವಾಗದೆ, ನಂತರ ಆಹಾರವನ್ನು ಸೇರಿಕೊಳ್ಳಬಹುದು. ಪಿಜ್ಜಾ ತಣ್ಣಗಾದ ಮೇಲೆ ಅದನ್ನು ರೂಮ್ ಟೆಂಪರೇಚರ್‌ನಲ್ಲಿ ಬಿಟ್ಟರೆ, ಈ ಸೂಕ್ಷ್ಮಜೀವಿಗಳು ವೇಗವಾಗಿ ಬೆಳೆಯಲು ಶುರುಮಾಡುತ್ತವೆ.
ತಜ್ಞರ ಪ್ರಕಾರ, ಪಿಜ್ಜಾವನ್ನು ಎರಡು ಗಂಟೆಯೊಳಗೆ ಫ್ರಿಡ್ಜ್‌ನಲ್ಲಿಡಬೇಕು ಮತ್ತು ಬೇರೆ ಕ್ರಿಮಿಗಳು ಸೇರದಂತೆ ಮುಚ್ಚಿಡಬೇಕು. ವಾಸನೆ ಚೆನ್ನಾಗಿದ್ದರೂ, ಹೆಚ್ಚು ಹೊತ್ತು ಹೊರಗಿಟ್ಟ ಪಿಜ್ಜಾ ತಿನ್ನಲು ಸುರಕ್ಷಿತವಾಗಿರುವುದಿಲ್ಲ. ಫ್ರಿಡ್ಜ್‌ನಲ್ಲಿಟ್ಟರೂ ಅದನ್ನು ಎರಡು ದಿನಗಳೊಳಗೆ ತಿನ್ನುವುದು ಉತ್ತಮ.
ಇದನ್ನೂ ಓದಿ: ನಿಮ್ಮ ಕಿಚನ್ ಸ್ಪಾಂಜ್ ಅನ್ನು ಪ್ರತಿದಿನ ಬದಲಾಯಿಸಿ! ಇಲ್ಲಿದೆ ತಜ್ಞರ ಸಲಹೆ
ಚಿಕನ್ ಬಗ್ಗೆ ಚಿಂತೆ
ಬೇಯಿಸಿದ ಚಿಕನ್ ಕೂಡ ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕಾದ ಆಹಾರ. ಅಡುಗೆ ಮಾಡುವಾಗ ಹೆಚ್ಚಿನ ಬ್ಯಾಕ್ಟೀರಿಯಾಗಳು ಸಾಯುತ್ತವೆಯಾದರೂ, ಮಾಂಸ ತಣ್ಣಗಾದ ನಂತರ ಬೇಗನೆ ಹಾಳಾಗುತ್ತದೆ. ಅದರಲ್ಲಿರುವ ತೇವಾಂಶ ಮತ್ತು ಪೋಷಕಾಂಶಗಳು ಬ್ಯಾಕ್ಟೀರಿಯಾಗಳು ಬೆಳೆಯಲು ಹೇಳಿ ಮಾಡಿಸಿದ ವಾತಾವರಣವನ್ನು ಸೃಷ್ಟಿಸುತ್ತವೆ.
ಡಾ. ಫ್ರೀಸ್ಟೋನ್ ಅವರು ಬೇಯಿಸಿದ ಚಿಕನ್ ಅನ್ನು ಆದಷ್ಟು ಬೇಗ, ಅಂದರೆ ಎರಡು ಗಂಟೆಯೊಳಗೆ ಫ್ರಿಡ್ಜ್‌ನಲ್ಲಿಡಲು ಶಿಫಾರಸು ಮಾಡುತ್ತಾರೆ. ಸರಿಯಾಗಿ ಶೇಖರಿಸಿಟ್ಟರೆ, ಅದು ಫ್ರಿಡ್ಜ್‌ನಲ್ಲಿ ಮೂರು ದಿನಗಳವರೆಗೆ ಚೆನ್ನಾಗಿರುತ್ತದೆ. ಒಂದು ವೇಳೆ ಚಿಕನ್ ಸರಿಯಾಗಿ ಬೆಂದಿಲ್ಲದಿದ್ದರೆ, ಅಂದರೆ ರಕ್ತದ ಕುರುಹುಗಳು ಕಂಡರೆ, ಅದನ್ನು ತಣ್ಣಗೆ ಅಥವಾ ಬಿಸಿ ಮಾಡಿ ತಿನ್ನಲೇಬಾರದು.
ಅನ್ನದಿಂದ ಅಪಾಯ
ಫ್ರೈಡ್ ರೈಸ್, ರಿಸೊಟ್ಟೊ ಮತ್ತು ಬುರ್ರಿಟೊಗಳಂತಹ ಅನ್ನ ಆಧಾರಿತ ಖಾದ್ಯಗಳಲ್ಲಿ ಅಪಾಯ ಹೆಚ್ಚು. ಡಾ. ಫ್ರೀಸ್ಟೋನ್ ಉಲ್ಲೇಖಿಸಿದ ಸಂಶೋಧನೆಯ ಪ್ರಕಾರ, ಹಸಿ ಅಕ್ಕಿಯಲ್ಲಿ ಬ್ಯಾಸಿಲಸ್ ಸೀರಿಯಸ್ (Bacillus cereus) ಎಂಬ ಬ್ಯಾಕ್ಟೀರಿಯಾದ ಬೀಜಕಣಗಳು (spores) ಇರಬಹುದು. ಇವು ಅಡುಗೆ ಮಾಡಿದ ನಂತರವೂ ನಾಶವಾಗುವುದಿಲ್ಲ.
ಬೇಯಿಸಿದ ಅನ್ನವನ್ನು ಹೆಚ್ಚು ಹೊತ್ತು ಹೊರಗಿಟ್ಟರೆ, ಈ ಬೀಜಕಣಗಳು ಬ್ಯಾಕ್ಟೀರಿಯಾಗಳಾಗಿ ಬೆಳೆದು, ವಾಂತಿ ಮತ್ತು ಭೇದಿಗೆ ಕಾರಣವಾಗುವ ವಿಷವನ್ನು ಬಿಡುಗಡೆ ಮಾಡುತ್ತವೆ. ಸುರಕ್ಷಿತವಾಗಿರಲು, ಅನ್ನವನ್ನು ಬೇಗನೆ ತಣ್ಣಗೆ ಮಾಡಿ, ಮುಚ್ಚಿಟ್ಟು, ತಕ್ಷಣವೇ ಫ್ರಿಡ್ಜ್‌ನಲ್ಲಿಡಬೇಕು. ಹಾಗೆ ಇಟ್ಟರೂ, 24 ಗಂಟೆಗಳ ಒಳಗೆ ತಿನ್ನುವುದು ಉತ್ತಮ. ಸಮಯ ಕಳೆದಂತೆ ಅಪಾಯ ಹೆಚ್ಚಾಗುತ್ತದೆ.
ಡಬ್ಬಿ ಆಹಾರದ ಬಗ್ಗೆ ಎಚ್ಚರ
ಟಿನ್‌ನಿಂದ (ಡಬ್ಬಿ) ತೆಗೆದು ಉಳಿದ ಆಹಾರದ ಬಗ್ಗೆಯೂ ಗಮನ ಬೇಕು. ಅದನ್ನು ಅದೇ ಡಬ್ಬಿಯಲ್ಲಿ ಶೇಖರಿಸಿಡಬಹುದಾದರೂ, ಮುಚ್ಚಳ ಹಾಕಿ ಫ್ರಿಡ್ಜ್‌ನಲ್ಲಿಡಬೇಕು. ಅದು ಎಷ್ಟು ದಿನ ಚೆನ್ನಾಗಿರುತ್ತದೆ ಎಂಬುದು ಆಹಾರದ ಪ್ರಕಾರವನ್ನು ಅವಲಂಬಿಸಿದೆ. ಟೊಮೆಟೊಗಳಂತಹ ಆಮ್ಲೀಯ ಪದಾರ್ಥಗಳು ಹೆಚ್ಚು ಕಾಲ ಉಳಿಯುತ್ತವೆ. ಆದರೆ ಮಾಂಸ, ಮೀನು ಅಥವಾ ತರಕಾರಿಗಳಂತಹ ಕಡಿಮೆ ಆಮ್ಲೀಯ ಆಹಾರಗಳು ಬೇಗನೆ ಹಾಳಾಗುತ್ತವೆ. ಇವುಗಳನ್ನು ಮೂರು ದಿನಗಳೊಳಗೆ ತಿನ್ನಬೇಕು.
ಕೊನೆಯಲ್ಲಿ ಡಾ. ಫ್ರೀಸ್ಟೋನ್ ಹೇಳುವುದೇನೆಂದರೆ, ಉಳಿದ ಆಹಾರವನ್ನು ತಕ್ಷಣವೇ ಶೇಖರಿಸಿ, ತಣ್ಣಗೆ ಇಟ್ಟು, ಕಡಿಮೆ ಸಮಯದಲ್ಲಿ ತಿಂದರೆ ಮಾತ್ರ ಸುರಕ್ಷಿತ.