ಚಿಕ್ಕಮಗಳೂರಿನಲ್ಲಿ ಪರಿಚಯಸ್ಥ ಮುಸ್ಲಿಂ ಯುವತಿ ಜೊತೆ ಮಾತನಾಡುತ್ತಿದ್ದ ದಲಿತ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ನೈತಿಕ ಪೊಲೀಸ್ಗಿರಿ ನಡೆಸಿ ಹಲ್ಲೆ ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು (ಫೆ.20): ಪರಿಚಯಸ್ಥ ಮುಸ್ಲಿಂ ಯುವತಿ ಜೊತೆ ಮಾತನಾಡುತ್ತಾ ನಿಂತಿದ್ದ ಎನ್ನುವ ಕಾರಣಕ್ಕೆ ವಿನಾಕಾರಣ ಜಗಳ ತೆಗೆದು, ದಲಿತ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಗುರುವಾರ ಚಿಕ್ಕಮಗಳೂರಲ್ಲಿ ನಡೆದಿದೆ. ಈ ಸಂಬಂಧ 3 ಆರೋಪಿಗಳನ್ನು ಬಂಧಿಸಲಾಗಿದೆ.
ನಗರದ ನಿವಾಸಿಗಳಾದ ನಯಾಜ್, ತಬ್ರೀಜ್, ಹನೀಫ್ ಬಂಧಿತ ಆರೋಪಿಗಳು. ಹಲ್ಲೆ ನಡೆಸಿದ ಉಳಿದ 5 ಆರೋಪಿಗಳ ಪತ್ತೆಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪೊಲೀಸರು ಶೋಧ ನಡೆಸಿದ್ದಾರೆ.
ಮುಸ್ಲಿಂ ಯುವಕರ ಗುಂಪಿನಿಂದ ದಾಳಿ
ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಕಾಲೇಜು ಮುಗಿಸಿಕೊಂಡು ಬಂದ ಅಪ್ರಾಪ್ತ ಮುಸ್ಲಿಂ ಯುವತಿ ನಗರದ ಸಂತೆ ಮೈದಾನದಲ್ಲಿ ಪರಿಚಿತ ಅಪ್ರಾಪ್ತ ದಲಿತ ಯುವಕನೊಂದಿಗೆ ನಿಂತು ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ 8 ಯುವಕರಿದ್ದ ಮುಸ್ಲಿಂ ಯುವಕರ ಗುಂಪು ಆ ಯುವಕ-ಯುವತಿಯರ ಬಳಿ ಬಂದು ಪ್ರಶ್ನಿಸಿ ಜಗಳ ತೆಗೆದಿದ್ದಾರೆ.
ಆಗ ಭಯಗೊಂಡ ಮುಸ್ಲಿಂ ಯುವತಿ ಆ ಸ್ಥಳದಿಂದ ತೆರಳಿದ್ದಾಳೆ. ಈ ವೇಳೆ ಯುವತಿಯೊಂದಿಗೆ ನೀನು ಏಕೆ ಇದೀಯಾ? ಎಂದು ಮುಸ್ಲಿಂ ಯುವಕರು ದಲಿತ ಯುವಕನ ಮೇಲೆ ನೈತಿಕ ಪೊಲೀಸ್ಗಿರಿ ನಡೆಸಿ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ 8 ಮಂದಿಯ ವಿರುದ್ಧ ದೊಂಬಿ, ಗಲಾಟೆ ಹಾಗೂ ಅಟ್ರಾಸಿಟಿ ಸೆಕ್ಷನ್ ಅಡಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುಸ್ಲಿಂ ಯುವತಿ ಹಾಗೂ ದಲಿತ ಯುವಕ ಇಬ್ಬರ ಕುಟುಂಬಸ್ಥರು ಪರಸ್ಪರ ಪರಿಚಿತರಾಗಿದ್ದು, ಯುವಕ, ಯುವತಿ ಸ್ನೇಹಿತ ರಾಗಿದ್ದಾರೆ.
ಶೀಘ್ರ ಬಂಧನ:
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ಆಗಮಿಸಿ ಮಾಹಿತಿ ಪಡೆದಿದ್ದು, ನಗರದಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದರೆ ಸಹಿಸುವ ಮಾತೇ ಇಲ್ಲ. ತಲೆಮರೆಸಿಕೊಂಡವರನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.