ಕೆಸಿ ಜನರಲ್ ಆಸ್ಪತ್ರೆಯಲ್ಲಿ ಸ್ಮಾರ್ಟ್ ಎಐ ಡಯಾಲಿಸಿಸ್ ವ್ಯವಸ್ಥೆ: ಸಚಿವ ದಿನೇಶ್ ಗುಂಡೂರಾವ್ | Ai Dialysis Monitoring Kc General Hospital Bangalore Ppp Model Gvd

ಕೆಸಿ ಜನರಲ್ ಆಸ್ಪತ್ರೆಯಲ್ಲಿ ಸ್ಮಾರ್ಟ್ ಎಐ ಡಯಾಲಿಸಿಸ್ ವ್ಯವಸ್ಥೆ: ಸಚಿವ ದಿನೇಶ್ ಗುಂಡೂರಾವ್ | Ai Dialysis Monitoring Kc General Hospital Bangalore Ppp Model Gvd


ಕೃತಕ ಬುದ್ಧಿಮತ್ತೆ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಯ ಪರಿಚಯದಿಂದ ಚಿಕಿತ್ಸಾ ಗುಣಮಟ್ಟ ಮತ್ತು ರೋಗಿ ಸುರಕ್ಷತೆ ಮತ್ತಷ್ಟು ಬಲವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರು (ಏ.02): ಪಿಪಿಪಿ ಮಾದರಿಯಡಿ ಡಯಾಲಿಸಿಸ್ ಸೇವೆಗಳನ್ನು ವಿಸ್ತರಿಸುವಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದ್ದು, ಕೃತಕ ಬುದ್ಧಿಮತ್ತೆ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಯ ಪರಿಚಯದಿಂದ ಚಿಕಿತ್ಸಾ ಗುಣಮಟ್ಟ ಮತ್ತು ರೋಗಿ ಸುರಕ್ಷತೆ ಮತ್ತಷ್ಟು ಬಲವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನೆಫ್ರೋಪ್ಲಸ್ ಸಂಸ್ಥೆ ಜಾರಿಗೆ ತಂದಿರುವ ಎಐ ಆಧಾರಿತ ಸ್ಮಾರ್ಟ್ ಮೇಲ್ವಿಚಾರಣಾ ವ್ಯವಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ವ್ಯವಸ್ಥೆಯ ಮೂಲಕ ಪಿಪಿಪಿ ಯೋಜನೆಯಡಿಯಲ್ಲಿ ನೀಡಲಾಗುವ ಡಯಾಲಿಸಿಸ್ ಸೇವೆಗಳು ಖಾಸಗಿ ಕ್ಷೇತ್ರದ ಮಟ್ಟಕ್ಕೆ ಸಮನಾಗುತ್ತಿವೆ,” ಎಂದು ಹೇಳಿದರು. ಈಗಾಗಲೇ ಎರಡು ಖಾಸಗಿ ಸಂಸ್ಥೆಗಳೊಂದಿಗೆ ಸಹಭಾಗಿತ್ವದಲ್ಲಿ ಎಐ ಬಳಕೆ ಹೆಚ್ಚಿಸುತ್ತಿದ್ದು, ಇದರ ಉಪಯೋಗವನ್ನು ಎರಡು ತಿಂಗಳುಗಳ ಕಾಲ ಪರಿಶೀಲಿಸಿ ನಂತರ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನೆಫ್ರೋಪ್ಲಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿತ್ ಸಿಂಗ್ ಮಾತನಾಡಿ, “ಡಯಾಲಿಸಿಸ್ ಚಿಕಿತ್ಸೆಯಲ್ಲಿ ನಿರಂತರ ಮೇಲ್ವಿಚಾರಣೆ ಅತ್ಯಗತ್ಯ. ಈ ಎಐ ವ್ಯವಸ್ಥೆಯ ಮೂಲಕ ಎಲ್ಲಾ ಕೇಂದ್ರಗಳಲ್ಲಿಯೂ ಸಮಾನ ಗುಣಮಟ್ಟವನ್ನು ಕಾಪಾಡುವುದರ ಜೊತೆಗೆ, ರೋಗಿಗಳಿಗೆ ಹೆಚ್ಚು ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆ ಒದಗಿಸಲು ಸಾಧ್ಯವಾಗುತ್ತಿದೆ,” ಎಂದು ಹೇಳಿದರು. ಪ್ರಸ್ತುತ ರಾಜ್ಯ ಸರ್ಕಾರದ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿಯಲ್ಲಿ ಡಯಾಲಿಸಿಸ್ ಯೋಜನೆಯನ್ನು ಬಲಪಡಿಸುವ ಉದ್ದೇಶದಿಂದ ಈ ನವೀನ ತಂತ್ರಜ್ಞಾನವನ್ನು ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಪರಿಚಯಿಸಲಾಗಿದೆ.

ಎಐ ಮಾನಿಟರಿಂಗ್ ಹೇಗೆ?

ಎಐ ಮೂಲಕ ಡಯಾಲಿಸಿಸ್ ವೇಳೆ ರೋಗಿಯ ರಕ್ತದ ಒತ್ತಡ, ದ್ರವದ ಹೊರಹರಿವು, ಇಲೆಕ್ಟ್ರೋಲೈಟ್ ಸಮತೋಲನ ಸೇರಿದಂತೆ ಪ್ರಮುಖ ಅಂಶಗಳನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಬಹುದು. ನಿರಂತರ ನಿಗಾವಳಿ ಮೂಲಕ ರೋಗಿ ಸುರಕ್ಷತೆ ಹಾಗೂ ಚಿಕಿತ್ಸಾ ಗುಣಮಟ್ಟವನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಇದಷ್ಟೇ ಅಲ್ಲದೆ, 28 ಪ್ರಮುಖ ಅಂಶಗಳನ್ನು ಪರಿಶೀಲಿಸುವ ಎಐ, ರೋಗಿ ಆರೈಕೆ, ಸುರಕ್ಷತೆ, ಹಾಸಿಗೆ ಲಭ್ಯತೆ, ಸಿಬ್ಬಂದಿ ಎಚ್ಚರಿಕೆ, ತುರ್ತು ಸಿದ್ಧತೆ, ಸೋಂಕು ನಿಯಂತ್ರಣ, ಸ್ವಚ್ಛತೆ ಹಾಗೂ ಕಾರ್ಯಕ್ಷಮತೆ ಸೇರಿದಂತೆ ಹಲವು ವಿಭಾಗಗಳಲ್ಲಿ ನಿರಂತರ ಮೌಲ್ಯಮಾಪನ ನಡೆಸುತ್ತದೆ.

ಇದರಿಂದ ಆಡಳಿತ ಮತ್ತು ವೈದ್ಯಕೀಯ ತಂಡಗಳಿಗೆ ಅಂಕಿ-ಅಂಶ ಆಧಾರಿತ ನಿರ್ಧಾರ ಕೈಗೊಳ್ಳಲು ಸಹಕಾರವಾಗುತ್ತದೆ. ಈ ತಂತ್ರಜ್ಞಾನವು ಪರಂಪರೆಯ ಅವಧಿ ಆಧಾರಿತ ಪರಿಶೀಲನೆಗಳನ್ನು ಮೀರಿ, ಸದಾ ಸಕ್ರಿಯ ನಿಗಾವಳಿ ವ್ಯವಸ್ಥೆಯನ್ನು ಒದಗಿಸುತ್ತದೆ. ಪ್ರಸ್ತುತ 85 ರಿಂದ 95 ಶೇಕಡಾ ನಿಖರತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆ ಮಾಡುವ ಯೋಜನೆ ಇದೆ. ಕಾರ್ಯಕ್ರಮದ ವೇಳೆ ಎಐ ಆಧಾರಿತ ಡ್ಯಾಶ್‌ಬೋರ್ಡ್‌ಗಳ ನೇರ ಪ್ರದರ್ಶನ ಕೂಡ ನಡೆಯಿತು.

ಮುಖ್ಯ ಅಂಶಗಳು
* ಡಯಾಲಿಸಿಸ್ ಚಿಕಿತ್ಸೆಗೆ ನೈಜ ಸಮಯ ಮೇಲ್ವಿಚಾರಣೆ
* ಪಿಪಿಪಿ ಯೋಜನೆಯಲ್ಲಿ ಚಿಕಿತ್ಸಾ ಗುಣಮಟ್ಟದ ಬಲಪಡಿಕೆ
* ಖಾಸಗಿ ಕ್ಷೇತ್ರದ ಮಟ್ಟದ ಸೇವೆ ಸಾಧಿಸುವತ್ತ ಹೆಜ್ಜೆ

ನೆಫ್ರೋಪ್ಲಸ್ ಕುರಿತು

ನೆಫ್ರೋಪ್ಲಸ್ ಸಂಸ್ಥೆ 5 ದೇಶಗಳ 328ಕ್ಕೂ ಹೆಚ್ಚು ನಗರಗಳಲ್ಲಿ 521 ಡಯಾಲಿಸಿಸ್ ಕೇಂದ್ರಗಳನ್ನು ನಡೆಸುತ್ತಿದ್ದು, ಪ್ರತಿ ತಿಂಗಳು ಸುಮಾರು 36,550 ರೋಗಿಗಳಿಗೆ ಸೇವೆ ಒದಗಿಸುತ್ತದೆ.



Source link

Leave a Reply

Your email address will not be published. Required fields are marked *