ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ; ಪೊಲೀಸ್ ಠಾಣೆಗೆ ನುಗ್ಗಿದ ಗುಂಪಿನ ಮೇಲೆ ಲಾಠಿ ಚಾರ್ಜ್, 49 ಜನರ ಮೇಲೆ ಎಫ್‌ಐಆರ್! | Basavakalyana Police Station Siege Maulvi Assault Row Bidar Lathi Charge News Sat

ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ; ಪೊಲೀಸ್ ಠಾಣೆಗೆ ನುಗ್ಗಿದ ಗುಂಪಿನ ಮೇಲೆ ಲಾಠಿ ಚಾರ್ಜ್, 49 ಜನರ ಮೇಲೆ ಎಫ್‌ಐಆರ್! | Basavakalyana Police Station Siege Maulvi Assault Row Bidar Lathi Charge News Sat



ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ; ಪೊಲೀಸ್ ಠಾಣೆಗೆ ನುಗ್ಗಿದ ಗುಂಪಿನ ಮೇಲೆ ಲಾಠಿ ಚಾರ್ಜ್, 49 ಜನರ ಮೇಲೆ ಎಫ್‌ಐಆರ್! | Basavakalyana Police Station Siege Maulvi Assault Row Bidar Lathi Charge News Sat

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮುಸ್ಲಿಂ ಮೌಲ್ವಿಗಳ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಆರೋಪದ ಹಿನ್ನೆಲೆಯಲ್ಲಿ, ಸಾವಿರಾರು ಜನರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ 49 ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಬೀದರ್ (ಮಾ.04): ಬೀದರ್ ಜಿಲ್ಲೆಯ ಐತಿಹಾಸಿಕ ನಗರಿ ಬಸವಕಲ್ಯಾಣದಲ್ಲಿ ತಡರಾತ್ರಿ ಭಾರಿ ಹೈಡ್ರಾಮಾ ನಡೆದಿದೆ. ಮುಸ್ಲಿಂ ಮೌಲ್ವಿಗಳ ಮೇಲೆ ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಆಕ್ರೋಶಗೊಂಡ ಸಾವಿರಾರು ಮುಸ್ಲಿಂ ಸಮುದಾಯದ ಜನರು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದು, ಇಡೀ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಘಟನೆಯ ಹಿನ್ನೆಲೆ:

ಮಾಹಿತಿಯ ಪ್ರಕಾರ, ಕೆಲವು ಹಿಂದೂ ಯುವಕರು ಮುಸ್ಲಿಂ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಚಾರ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದರಿಂದ ಕೆರಳಿದ ಮುಸ್ಲಿಂ ಸಮುದಾಯದ ಸಾವಿರಾರು ಯುವಕರು ಮತ್ತು ಮುಖಂಡರು ನಗರದ ಗಾಂಧಿ ವೃತ್ತದಲ್ಲಿರುವ ಪೊಲೀಸ್ ಠಾಣೆಯತ್ತ ಧಾವಿಸಿದ್ದಾರೆ. ‘ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ನಮ್ಮ ವಶಕ್ಕೆ ನೀಡಬೇಕು’ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಠಾಣೆಯ ಮುಂಭಾಗದಲ್ಲಿ ಭಾರಿ ಗದ್ದಲ ಸೃಷ್ಟಿಸಿದರು.

ಠಾಣೆ ಮುತ್ತಿಗೆ ಮತ್ತು ಲಾಠಿ ಚಾರ್ಜ್:

ಸಾವಿರಾರು ಜನರು ಏಕಾಏಕಿ ಠಾಣೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಜಮಾವಣೆಗೊಂಡಿದ್ದ ಜನರನ್ನು ಚದುರಿಸಲು ಪೊಲೀಸರು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಿದರು. ಈ ಸಂಘರ್ಷದ ವೇಳೆ ಜಮಾವಣೆಗೊಂಡಿದ್ದ ಜನರು ಠಾಣೆಯಲ್ಲಿದ್ದ ವಸ್ತುಗಳನ್ನು ಹಾನಿಗೊಳಿಸಿದ್ದಾರೆ. ಇದರಿಂದ ಪೊಲೀಸ್ ಇಲಾಖೆಗೆ ಸೇರಿದ ಕೆಲವು ಪೀಠೋಪಕರಣ ಹಾಗೂ ವಸ್ತುಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಹಿರಿಯ ಅಧಿಕಾರಿಗಳ ಠಿಕಾಣಿ:

ಘಟನೆಯ ಗಾಂಭೀರ್ಯವನ್ನು ಅರಿತು ಉತ್ತರ ವಲಯದ ಐಜಿಪಿ (IGP) ಮತ್ತು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸೇರಿದಂತೆ ಹಿರಿಯ ಅಧಿಕಾರಿಗಳು ರಾತ್ರಿಯೇ ಬಸವಕಲ್ಯಾಣಕ್ಕೆ ಧಾವಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಶಸ್ತ್ರ ಮೀಸಲು ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

49 ಜನರ ಮೇಲೆ ಎಫ್‌ಐಆರ್ ದಾಖಲು:

ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಸಾರ್ವಜನಿಕ ಶಾಂತಿ ಭಂಗ ತಂದ ಹಾಗೂ ಸರ್ಕಾರಿ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 49 ಮುಸ್ಲಿಂ ಯುವಕರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ನಗರದಲ್ಲಿ ಅಘೋಷಿತ ಕರ್ಫ್ಯೂ ಮಾದರಿಯ ವಾತಾವರಣವಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕೋಮು ಸೂಕ್ಷ್ಮ ಪ್ರದೇಶವಾಗಿರುವ ಬಸವಕಲ್ಯಾಣದಲ್ಲಿ ಈ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಲ್ಲೆ ಮಾಡಿದವರು ಮತ್ತು ಠಾಣೆಗೆ ಮುತ್ತಿಗೆ ಹಾಕಿದವರ ವಿರುದ್ಧ ಕಾನೂನು ಪ್ರಕಾರ ತನಿಖೆ ಮುಂದುವರಿದಿದೆ.



Source link

Leave a Reply

Your email address will not be published. Required fields are marked *