ಐಪಿಎಲ್ ಆಟದ ವೇಳೆ ಮೊಬೈಲ್ ಕದಿಯಲೆಂದೇ ವಿಮಾನ ಬಂದ್ರು! ಖದೀಮರು ಅರೆಸ್ಟ್ | Ipl 2026 Jharkhand Gang Travels By Flight To Steal Phones At Chinnaswamy Stadium Rav

ಐಪಿಎಲ್ ಆಟದ ವೇಳೆ ಮೊಬೈಲ್ ಕದಿಯಲೆಂದೇ ವಿಮಾನ ಬಂದ್ರು! ಖದೀಮರು ಅರೆಸ್ಟ್ | Ipl 2026 Jharkhand Gang Travels By Flight To Steal Phones At Chinnaswamy Stadium Rav



ಐಪಿಎಲ್ ಆಟದ ವೇಳೆ ಮೊಬೈಲ್ ಕದಿಯಲೆಂದೇ ವಿಮಾನ ಬಂದ್ರು! ಖದೀಮರು ಅರೆಸ್ಟ್ | Ipl 2026 Jharkhand Gang Travels By Flight To Steal Phones At Chinnaswamy Stadium Rav

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಪ್ರೇಕ್ಷಕರ ಮೊಬೈಲ್‌ಗಳನ್ನು ಕದ್ದಿದ್ದ ಜಾರ್ಖಂಡ್ ಮೂಲದ ಗ್ಯಾಂಗ್ ಅನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಕೃತ್ಯ ಎಸಗಿದ್ದ ಈ ತಂಡದಿಂದ 18 ಲಕ್ಷ ಮೌಲ್ಯದ 21 ಮೊಬೈಲ್ಸ್ ವಶಕ್ಕೆ

ಬೆಂಗಳೂರು (ಏ.1): ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಾವಳಿ ಪ್ರೇಕ್ಷಕರಿಂದ ಮೊಬೈಲ್‌ ಕಳವು ಮಾಡಿದ್ದ ಅಪ್ರಾಪ್ತ ಬಾಲಕರು ಸೇರಿದಂತೆ ನಾಲ್ವರು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಜಾರ್ಖಂಡ್ ಮೂಲದ ಶುಭಂ ಕುಮಾರ್ ಹಾಗೂ ಮೂವರು ಅಪ್ರಾಪ್ತ ಬಾಲಕರಾಗಿದ್ದು, ಆರೋಪಿಗಳಿಂದ 18 ಲಕ್ಷ ರು. ಮೌಲ್ಯದ 21 ಮೊಬೈಲ್‌ಗಳು ಜಪ್ತಿಯಾಗಿವೆ. ಐಪಿಎಲ್ ಪಂದ್ಯ ಮುಗಿದ ಬಳಿಕ ಮೊಬೈಲ್ ಕಳ್ಳತನ ಕೃತ್ಯಗಳು ಬೆಳಕಿ ಬಂದಿದ್ದವು. ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಚೋರರು ನಗರ ತೊರೆಯುವ ಮುನ್ನವೇ ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೊಬೈಲ್ ಕಳ್ಳತನಕ್ಕೆ ವಿಮಾನದಲ್ಲಿ ಬಂದ್ರು

ಜಾರ್ಖಂಡ್‌ನ ಶುಭಂ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಆತನ ವಿರುದ್ಧ ಸ್ಥಳೀಯವಾಗಿ ಪ್ರಕರಣಗಳಿವೆ. ಜನಸಂದಣಿ ಕಾರ್ಯಕ್ರಮಗಳಲ್ಲಿ ದುಬಾರಿ ಮೊಬೈಲ್ ಕಳ್ಳತನಕ್ಕೆ ಜಾರ್ಖಂಡ್ ತಂಡವು ಕುಖ್ಯಾತಿ ಪಡೆದಿದೆ. ಅಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಇಂಡಿಯನ್ ಪ್ರಿಮಿಯರ್ ಲೀಗ್‌ (ಐಪಿಎಲ್‌)ನ ಉದ್ಘಾಟನಾ ಪಂದ್ಯದ ಬಗ್ಗೆ ಶುಭಂ ಮಾಹಿತಿ ಪಡೆದಿದ್ದ. ತವರಿನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್‌ (ಆರ್‌ಸಿಬಿ)ನ ಪಂದ್ಯಕ್ಕೆ ಹೆಚ್ಚಿನ ಅಭಿಮಾನಿಗಳು ಸೇರುತ್ತಾರೆ. ಆ ವೇಳೆ ಮೊಬೈಲ್ ಕಳ್ಳತನಕ್ಕೆ ಶುಭಂ ಹಾಗೂ ಆತನ ಸಹಚರರು ಸಂಚು ರೂಪಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಪೂರ್ವನಿಗದಿಯಂತೆ ಮೊಬೈಲ್ ಕಳ್ಳತನಕ್ಕೆ ವಿಮಾನದಲ್ಲಿ ಅಪ್ರಾಪ್ತ ಬಾಲಕರನ್ನು ಕರೆದುಕೊಂಡು ನಗರಕ್ಕೆ ಆತ ಬಂದಿದ್ದ. ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಶುಭಂ ಇದ್ದರೆ, ಇನ್ನುಳಿದ ಅಪ್ರಾಪ್ತರು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿ ಪ್ರೇಕ್ಷಕರ ಸೋಗಿನಲ್ಲಿ ಕ್ರೀಡಾಂಗಣದೊಳಗೆ ಪ್ರವೇಶಿಸಿದ್ದರು. ಎಸ್ಆರ್‌ಎಚ್‌ ತಂಡದ ವಿರುದ್ಧ ಆರ್‌ಸಿಬಿ ಅಬ್ಬರದ ಆಟ ಕಣ್ತುಂಬಿಕೊಳ್ಳುತ್ತ ಮೈಮರೆತಿದ್ದ ಪ್ರೇಕ್ಷಕರಿಂದ ಆರೋಪಿಗಳು ದುಬಾರಿ ಮೌಲ್ಯದ ಮೊಬೈಲ್‌ಗಳನ್ನು ಎಗರಿಸಿದ್ದರು.

20 ಜನರಿಂದ ದೂರುಗಳು

ಈ ಪಂದ್ಯ ಮುಗಿಸಿ ಕ್ರೀಡಾಂಗಣದ ಹೊರಗೆ ಬಂದಾಗ ಪ್ರೇಕ್ಷಕರಿಗೆ ಜೇಬುಗಳ್ಳತನ ಅರಿವಿಗೆ ಬಂದಿದೆ. ಆದರೆ ಅಷ್ಟರಲ್ಲಿ ಜಾರ್ಖಂಡ್ ಗ್ಯಾಂಗ್ ಪರಾರಿಯಾಗಿತ್ತು. ಮೊಬೈಲ್ ಕಳ್ಳತನ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ 20ಕ್ಕೂ ಹೆಚ್ಚಿನ ದೂರುಗಳು ಸಲ್ಲಿಕೆಯಾಗಿದ್ದವು. ಈ ಎಫ್‌ಐಆರ್ ದಾಖಲಿಸಿ ಚೋರರ ಬೇಟೆಗೆ ಪೊಲೀಸರು ತಡಮಾಡದೆ ಫೀಲ್ಡ್‌ಗಿಳಿದರು.

ಭದ್ರತಾ ಕೋಟೆ ಬೇಧಿಸಿ ಚೋರರು

ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯದ ವೇಳೆ ಅಹಿತಕರ ಘಟನೆ ನಡೆಯದಂತೆ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಈ ಅಭೇದ್ಯ ಭದ್ರತಾ ಕೋಟೆಯನ್ನು ಬೇಧಿಸಿ ಕ್ರೀಡಾಂಗಣದಲ್ಲಿ ಮೊಬೈಲ್ ಕಳ್ಳರು ಕೈಚಳಕ ತೋರಿಸಿದ್ದು ಅಧಿಕಾರಿಗಳಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಈ ಕಳ್ಳರ ಪತ್ತೆಗೆ ವಿಶೇಷ ತಂಡಗಳನ್ನು ಡಿಸಿಪಿ ಅಕ್ಷಯ್‌ ಮಚ್ಚಿಂದ್ರ ಹಾಕೆ ರಚಿಸಿದರು. ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಕಳ್ಳರನ್ನು ಬಂಧಿಸುವಲ್ಲಿ ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಡಾ. ಪ್ರಿಯದರ್ಶಿನಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ ಕೆ.ಎಸ್‌. ದೇವೇಂದ್ರಪ್ಪ ಹಾಗೂ ಸಬ್‌ ಇನ್ಸ್‌ಪೆಕ್ಟರ್ ರಾಜಕುಮಾರ್ ತಂಡ ಯಶಸ್ಸು ಕಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮತ್ತೆ ಕೆಲವು ಅಪ್ರಾಪ್ತರು ವಶಕ್ಕೆ 

ಮೊಬೈಲ್ ಕಳ್ಳತನ ಪ್ರಕರಣ ಸಂಬಂಧ 10ಕ್ಕೂ ಹೆಚ್ಚಿನ ಅಪ್ರಾಪ್ತ ಬಾಲಕರನ್ನು ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಇದುವರೆಗೆ ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಮಾತ್ರ ಅಧಿಕೃತವಾಗಿ ಪೊಲೀಸರು ಬಂಧನ ಪ್ರಕ್ರಿಯೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಪ್ರಾಪ್ತರ ಬಳಕೆಯೇ ಯಾಕೆ?

ಮೊಬೈಲ್ ಕಳ್ಳತನ ಕೃತ್ಯದಲ್ಲಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅಪ್ರಾಪ್ತ ಬಾಲಕರನ್ನು ಗುರಾಣಿಯಾಗಿಸಿ ಕಿಡಿಗೇಡಿಗಳು ಬಳಸಿದ್ದಾರೆ. ಕ್ರೀಡಾಂಗಣದಲ್ಲಿ ಅಪ್ರಾಪ್ತರ ಮೇಲೆ ಹೆಚ್ಚಿನ ನಿಗಾವಿರುವುದಿಲ್ಲ. ಅಲ್ಲದೆ ಬಂಧಿತರಾದರೂ ಸುಲಭವಾಗಿ ಜಾಮೀನು ಸಿಗುತ್ತದೆ ಎಂಬುದು ಮಾಸ್ಟರ್‌ ಮೈಂಡ್‌ಗಳ ಲೆಕ್ಕಾಚಾರವಾಗಿದೆ ಎನ್ನಲಾಗಿದೆ.

ಐಪಿಎಲ್ ಪಂದ್ಯಾವಳಿ ವೇಳೆ ಮೊಬೈಲ್ ಕಳವು ಮಾಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಕ್ರೀಡಾಂಗಣ ಮಾತ್ರವಲ್ಲದೆ ಇತರೆಡೆ ಸಹ ಅಂದು ಕಳ್ಳತನ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಇದೇ ರೀತಿ ಐಪಿಎಲ್ ಪಂದ್ಯ ನಡೆದ ಬೇರೆಡೆ ಸಹ ಕಳ್ಳತನವಾಗಿರುವ ಬಗ್ಗೆ ಆ ರಾಜ್ಯದ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗುತ್ತದೆ.\\B \\B

ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ 



Source link

Leave a Reply

Your email address will not be published. Required fields are marked *