
ನಿಧಿ ಹುಡುಕಿಕೊಡುವುದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ಹಜರತ್ ಮೌಲ್ವಿ ಎಂಬಾತನನ್ನು ಉತ್ತರಖಂಡದಲ್ಲಿ ಬಂಧಿಸಲಾಗಿದೆ. ಧಾರವಾಡದ ಮಹಿಳೆಯೊಬ್ಬರಿಗೆ ₹22 ಲಕ್ಷ ವಂಚಿಸಿದ್ದ ಈತ, ಚಾಕೊಲೇಟ್ ನಾಣ್ಯಗಳನ್ನು ಬಳಸಿ ನಿಧಿ ನಾಟಕವಾಡಿದ್ದು ತನಿಖೆಯಿಂದ ಬಯಲಾಗಿದೆ.
ಗದಗ: ನಿಧಿ ಹುಡುಕಿಕೊಡುವುದಾಗಿ ಹೇಳಿ ಜನರನ್ನು ನಂಬಿಸಿ ಹಣ ಪಡೆದುಕೊಂಡು ಮೋಸ ಮಾಡಿ ಪರಾರಿಯಾಗಿದ್ದ ಹಜರತ್ ಮೌಲ್ವಿ ಎಂಬಾತನನ್ನು ಉತ್ತರಖಂಡದ ಕಾಶಿಪುರದಲ್ಲಿ ಬಂಧಿಸಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಧಾರವಾಡದ ನಿವಾಸಿಯಾದ ಬಷೀರಾ ಬಾನು ಎಂಬವರಿಗೆ ಮ್ಯಾಟ್ರೋಮೋನಿ ವೆಬ್ಸ್ಟೈಟ್ ಮೂಲಕ ಪರಿಚಿತನಾದ ಆರೋಪಿ ಹಜರತ್ ಮೌಲ್ವಿ ನಿಧಿ ಆಸೆ ತೋರಿಸಿ ಅವರಿಂದ ಹಂತ- ಹಂತವಾಗಿ ₹22 ಲಕ್ಷ ಪಡೆದು ವಂಚಿಸಿದ್ದಾನೆ ಎಂದು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಜನರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುವ ಹಜರತ್ ಮೌಲ್ವಿ ಕೃತ್ಯ ನಡೆಸಿದ್ದಾನೆ ಎನ್ನುವುದು ಪತ್ತೆಯಾಗಿದೆ.
ಪ್ರಕರಣದ ಹಿನ್ನೆಲೆಯ ವಿವರ
ಧಾರವಾಡ ನಿವಾಸಿ ಬಷೀರಾ ಬಾನು ತನಗೆ ನಿಧಿ ಆಸೆ ತೋರಿಸಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ 2022ರ ಸೆಪ್ಟೆಂಬರ್ನಲ್ಲಿ ದೂರು ನೀಡಿದ್ದರು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ಬಿ ರಿಪೋರ್ಟ್ ಮಾಡಲಾಗಿತ್ತು. ಆದರೆ ಸರ್ಕಾರಕ್ಕೆ ಸೇರಬೇಕಿದ್ದ ನಿಧಿ ಕಂಡವರ ಪಾಲಾಗಿದೆ. ತನಿಖೆ ನಡೆಸಿ ಎಂದು ಫೆ. 12ರಂದು ಮತ್ತೊಂದು ದೂರು ದಾಖಲಾಗಿದೆ. ಮತ್ತೊಮ್ಮೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಎಲ್ಲ ಮಾಹಿತಿ ಕಲೆಹಾಕಿ, ತನಿಖೆ ಮುಂದುವರಿದಾಗ ಪೊಲೀಸರು ಅಂತಿಮವಾಗಿ ಹೋಗಿ ನಿಂತಿದ್ದು ಉತ್ತರಾಖಂಡದ ಹಜರತ್ ಮೌಲ್ವಿ ಎಂಬ ಚಾಣಾಕ್ಷ ವಂಚಕನ ಮನೆಮುಂದೆ. ಅವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹಲವಾರು ಪ್ರಕರಣದಲ್ಲಿ ಭಾಗಿ
ಇದೊಂದೇ ಪ್ರಕರಣ ಅಲ್ಲದೇ 2022ರ ಸೆಪ್ಟೆಂಬರ್ನಲ್ಲಿ ಹಜರತ್ ಮೌಲ್ವಿ ಲಕ್ಕುಂಡಿಗೆ ಬಂದು ಸಣ್ಣಬಸಪ್ಪ ಹಾಗೂ ದೊಡ್ಡಬಸಪ್ಪ ಎಂಬವರ ಜಮೀನಿನಲ್ಲಿ ಕಪ್ಪು ಮೆಣಸು ಹಾಗೂ ಕೆಲವು ವಸ್ತುಗಳನ್ನು ಎಸೆದು ಇಲ್ಲೇ ನಿಧಿ ಇದೆ ಎಂದು ಜಾಗ ಗುರುತಿಸಿ, ಒಂದು ತಿಂಗಳ ನಂತರ ಬರುವುದಾಗಿ ಹೇಳಿ ಹೋಗಿದ್ದ. ಬಳಿಕ ವಂಚನೆಗೆ ಸಂಚು ರೂಪಿಸಲು ಸಿದ್ಧತೆ ಮಾಡಿಕೊಂಡಿದ್ದ.
ಹೇಗಿತ್ತು ಆರೋಪಿ ಮೌಲ್ವಿ ಸಿದ್ಧತೆ?
ಗದಗ ನಗರದ ಮಹೇಂದ್ರಕರ ಸರ್ಕಲ್ ಬಳಿ ಇರುವ ಸ್ಟೀಲ್ ಅಂಗಡಿಯಲ್ಲಿ ₹6800 ಕೊಟ್ಟು ಹಳೆಯ ಹಂಡೆ ಖರೀದಿಸಿದ್ದ. ಅದಕ್ಕೆ ಬಟ್ಟೆ ಸುತ್ತಿ, ಪೂಜೆ ಸಾಮಾನು ಎಂದು ಹೇಳಿ ಜುಬೇರ್ ಎಂಬವರ ಮೂಲಕ ಲಕ್ಕುಂಡಿಗೆ ತೆಗೆದುಕೊಂಡು ಹೋಗಿದ್ದ. ಇದಕ್ಕಿಂತ ಕುತೂಹಲಕರವಾಗಿ ಅಂಗಡಿಯೊಂದರಲ್ಲಿ ₹80 ನೀಡಿ 80 ಚಾಕೊಲೇಟ್ ಕಾಯಿನ್ಸ್(ಬಂಗಾರ ಬಣ್ಣದ ಚಾಕೊಲೇಟ್) ಖರೀದಿಸಿ ಅವುಗಳನ್ನು ಹಂಡೆಯಲ್ಲಿ ಹಾಕಿ ಯಾರಿಗೂ ಗೊತ್ತಾಗದಂತೆ ಜಮೀನಿನಲ್ಲಿ ಹೂತಿಟ್ಟಿದ್ದ.
ಇದನ್ನೂ ಓದಿ: ಚಿನ್ನದ ನಿಧಿ ಸಿಕ್ಕ ಲಕ್ಕುಂಡಿಗೆ ಭೇಟಿಕೊಟ್ಟ ಸಂಸದ ಗದ್ದಿಗೌಡರ್; ನಿಧಿ ಕೊಟ್ಟ ಗಿರಿಜಮ್ಮಗೆ ಮತ್ತೊಂದು ಭರವಸೆ!
ನಂತರ ವಿಡಿಯೊ ಚಿತ್ರೀಕರಣ ಮಾಡಿಸಿಕೊಂಡು ಹಂಡೆಯನ್ನು ಹೊರತೆಗೆದು ನಿಮ್ಮ ಪೂರ್ವಜರ ನಿಧಿ ನನಗೆ ದಕ್ಕದು. ಆದರೆ ಹಣ ಕೊಟ್ಟರೆ ಈ ಹಂಡೆ(ನಿಧಿ) ನಿಮ್ಮದು ಎಂದು ಸಣ್ಣಬಸಪ್ಪ, ದೊಡ್ಡಬಸಪ್ಪ ಅವರನ್ನು ನಂಬಿಸಿದ್ದಾನೆ. ಆದರೆ, ಅವರ ಬಳಿ ಮೌಲ್ವಿ ಕೇಳಿದಷ್ಟು ಹಣ ಇರಲಿಲ್ಲವಾದ್ದರಿಂದ ಇದು ಯಾರಿಗೂ ದಕ್ಕದು ಎಂದು ಹೇಳಿ ನಿಧಿ ಮಣ್ಣಾಗಲಿ ಎಂದು ಹಂಡೆಯನ್ನು ಹಾಳು ಮಾಡಿ ಹೋಗಿದ್ದ.
ಇದೇ ಹಜರತ್ ಮೌಲ್ವಿ ತಮಿಳುನಾಡಿನ ಗುಡ್ಲೂರಿನ ಬಿಜ್ಜು ಎಂಬ ವ್ಯಕ್ತಿಯ ಮಗನ ಆರೋಗ್ಯ ಸರಿಪಡಿಸುವುದಾಗಿ ಹೇಳಿ ₹1 ಲಕ್ಷ ಪಡೆದು ಮೋಸ ಮಾಡಿದ್ದ. ಅದೇ ರೀತಿ, ದೆಹಲಿಯ ನೋಯ್ಡಾದ ನಿವಾಸಿಗೂ ಮೌಲ್ವಿ ಮೋಸ ಮಾಡಿದ್ದಾನೆ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 16ನೇ ದಿನದ ಲಕ್ಕುಂಡಿ ಉತ್ಖನನ ವರದಿ: ವೀರಭದ್ರೇಶ್ವರ ದೇವಸ್ಥಾನದ ಐತಿಹಾಸಿಕ ರಹಸ್ಯ!