Headlines

ಅಪ್ಪನ ಮೇಲೆ ಕೋಪಗೊಂಡು 2 ವರ್ಷ ಮನೆ ಬಿಟ್ಟಿದ್ದ ಅಂಬರೀಷ್ ಉಳಿದುಕೊಂಡಿದ್ದು ಎಲ್ಲಿ ಗೊತ್ತಾ? | Actor Ambareesh Lived 2 Years In Director Dr Rajendra Singh Babu House After He Got Angry With His Father Huchche Gowda

ಅಪ್ಪನ ಮೇಲೆ ಕೋಪಗೊಂಡು 2 ವರ್ಷ ಮನೆ ಬಿಟ್ಟಿದ್ದ ಅಂಬರೀಷ್ ಉಳಿದುಕೊಂಡಿದ್ದು ಎಲ್ಲಿ ಗೊತ್ತಾ? | Actor Ambareesh Lived 2 Years In Director Dr Rajendra Singh Babu House After He Got Angry With His Father Huchche Gowda



ಅಪ್ಪನ ಮೇಲೆ ಕೋಪಗೊಂಡು 2 ವರ್ಷ ಮನೆ ಬಿಟ್ಟಿದ್ದ ಅಂಬರೀಷ್ ಉಳಿದುಕೊಂಡಿದ್ದು ಎಲ್ಲಿ ಗೊತ್ತಾ? | Actor Ambareesh Lived 2 Years In Director Dr Rajendra Singh Babu House After He Got Angry With His Father Huchche Gowda

ಶಿಸ್ತಿನ ಸಿಪಾಯಿಯಾಗಿದ್ದ ತಂದೆ ಹುಚ್ಚೇಗೌಡರು ಇದಕ್ಕೆ ಸುಲಭವಾಗಿ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಅಂಬರೀಶ್ ಅವರು, “ಕಾರು ಕೊಡಿಸೋವರೆಗೂ ನಾನು ಈ ಮನೆಗೆ ಕಾಲಿಡಲ್ಲ” ಎಂದು ಶಪಥ ಮಾಡಿ, ನೇರವಾಗಿ ತಮ್ಮ ದೋಸ್ತ್ ಮನೆಗೆ ಬಂದುಬಿಟ್ಟರು. ಬಾಬು ಅವರ ಮನೆಯ ಕೆಳಗಡೆ ಒಂದು ಬ್ಯಾಚುಲರ್ ರೂಮ್ ಇತ್ತು. ಮುಂದೆ..

ಕೋಪಗೊಂಡು 2 ವರ್ಷ ಮನೆ ಬಿಟ್ಟಿದ್ದ ಅಂಬರೀಶ್ ಅವರು ಇದ್ದಿದ್ದು ಎಲ್ಲಿ ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ‘ಕುಚಿಕು ಗೆಳೆಯರು’ ಎಂದಾಕ್ಷಣ ವಿಷ್ಣುವರ್ಧನ್ ಮತ್ತು ಅಂಬರೀಶ್ ಹೆಸರು ಥಟ್ ಅಂತ ನೆನಪಾಗುತ್ತದೆ. ಆದರೆ ಅಂಬರೀಶ್ ಅವರು ಸಿನಿಮಾಗೆ ಬರುವ ಮುನ್ನವೇ, ಅಂದರೆ ಅವರ ಹರೆಯದ ದಿನಗಳಿಂದಲೇ ಅವರಿಗೆ ಪ್ರಾಣ ಸ್ನೇಹಿತರಾಗಿದ್ದವರು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಇವರಿಬ್ಬರ ಸ್ನೇಹ ಎಷ್ಟು ಗಾಢವಾಗಿತ್ತು ಎಂದರೆ, ಒಮ್ಮೆ ಅಂಬರೀಶ್ (Ambareesh) ಅವರು ತಮ್ಮ ತಂದೆಯ ಮೇಲೆ ಮುನಿಸಿಕೊಂಡು ಬರೋಬ್ಬರಿ ಎರಡು ವರ್ಷಗಳ ಕಾಲ ತಮ್ಮ ಮನೆಯನ್ನೇ ಬಿಟ್ಟು ರಾಜೇಂದ್ರ ಸಿಂಗ್ ಬಾಬು ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರು! ಈ ಘಟನೆಯ ಹಿಂದಿನ ಅಸಲಿ ಕಾರಣವೇ ಒಂದು ಸ್ವಾರಸ್ಯಕರ ಕಥೆ.

ಅದು ಅಂಬರೀಶ್ ಅವರು ಇನ್ನೂ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡದ ದಿನಗಳು. ಮೈಸೂರಿನಲ್ಲಿ ಅಂಬರೀಶ್ ಅಂದರೆ ಒಂದು ರೀತಿಯ ರೆಬೆಲ್ ಮತ್ತು ಹಠಮಾರಿ ಸ್ವಭಾವದ ಹುಡುಗ. ಅಂಬರೀಶ್ ಅವರ ತಂದೆ ಹುಚ್ಚೇಗೌಡರು ಆಗ ತಹಶೀಲ್ದಾರ್ ಆಗಿದ್ದರು ಮತ್ತು ಶ್ರೀಮಂತರು ಕೂಡ ಆಗಿದ್ದರು. ಆದರೆ ಅಂಬರೀಶ್ ಮತ್ತು ಅವರ ತಂದೆಯ ನಡುವೆ ಒಂದು ದೊಡ್ಡ ‘ಶೀತಲ ಸಮರ’ (Cold War) ನಡೆಯುತ್ತಿತ್ತು. ಅದಕ್ಕೆ ಮುಖ್ಯ ಕಾರಣ ‘ಕಾರು’!

ಅಂಬರೀಶ್ ಅವರಿಗೆ ಓಡಾಡಲು ಒಂದು ಸ್ವಂತ ಕಾರು ಬೇಕಿತ್ತು. ಇದಕ್ಕಾಗಿ ಅವರು ತಮ್ಮ ತಂದೆಯ ಮುಂದೆ ಇಟ್ಟಿದ್ದ ವಾದವೇ ವಿಚಿತ್ರವಾಗಿತ್ತು. “ನೋಡಿ ಅಪ್ಪಾಜಿ, ನೀವು ಅಣ್ಣಂದಿರಿಗೆ ಮೆಡಿಕಲ್ ಸೀಟು, ಇಂಜಿನಿಯರಿಂಗ್ ಸೀಟು ಅಂತ ಎಷ್ಟೊಂದು ಡೊನೇಷನ್ (Donation) ಕಟ್ಟಿ ಓದಿಸಿದ್ದೀರಾ. ನಾನು ಪಿಯುಸಿ ಬಿಟ್ಟರೆ ಬೇರೇನು ಓದಿಲ್ಲ, ನಾನೇನು ನಿಮ್ಮ ಹತ್ತಿರ ಕಾಲೇಜು ಡೊನೇಷನ್ ಕೇಳುತ್ತಿಲ್ಲ. ಆ ಡೊನೇಷನ್ ಕಟ್ಟುವ ದುಡ್ಡಿನಲ್ಲಿ ನನಗೊಂದು ಕಾರು ಕೊಡಿಸಿ ಸಾಕು, ಅದು ನನ್ನ ಹಕ್ಕು” ಎಂದು ಹಠ ಹಿಡಿದು ಕುಳಿತಿದ್ದರು.

ಆದರೆ ಶಿಸ್ತಿನ ಸಿಪಾಯಿಯಾಗಿದ್ದ ತಂದೆ ಹುಚ್ಚೇಗೌಡರು ಇದಕ್ಕೆ ಸುಲಭವಾಗಿ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಅಂಬರೀಶ್ ಅವರು, “ಕಾರು ಕೊಡಿಸೋವರೆಗೂ ನಾನು ಈ ಮನೆಗೆ ಕಾಲಿಡಲ್ಲ” ಎಂದು ಶಪಥ ಮಾಡಿ, ನೇರವಾಗಿ ತಮ್ಮ ದೋಸ್ತ್ ರಾಜೇಂದ್ರ ಸಿಂಗ್ ಬಾಬು ಅವರ ಮನೆಗೆ ಬಂದುಬಿಟ್ಟರು. ಬಾಬು ಅವರ ಮನೆಯ ಕೆಳಗಡೆ ಒಂದು ಬ್ಯಾಚುಲರ್ ರೂಮ್ ಇತ್ತು. ಅಂಬರೀಶ್ ಅವರು ಆ ರೂಮಿನಲ್ಲೇ ಬರೋಬ್ಬರಿ ಎರಡು ವರ್ಷಗಳ ಕಾಲ ವಾಸವಿದ್ದರು!

ವಿಷಯ ಇಲ್ಲಿಗೆ ಮುಗಿಯಲಿಲ್ಲ. ಮಗನ ಹಠ ನೋಡಿ ತಂದೆ ಹುಚ್ಚೇಗೌಡರು, ರಾಜೇಂದ್ರ ಸಿಂಗ್ ಬಾಬು ಅವರನ್ನು ಕರೆದು ಮಾತನಾಡಿಸಿದರು. “ನೋಡಪ್ಪ ಬಾಬಣ್ಣ, ನಿನ್ನ ಸ್ನೇಹಿತನ ವಾದ ಕೇಳಿದ್ಯಾ? ಕಾರು ಬೇಕಂತೆ ಕಾರು.. ಅವನಿಗೆ ಸ್ವಲ್ಪ ಬುದ್ಧಿ ಹೇಳಪ್ಪ ನೀನಾದರೂ” ಎಂದರು. ಆಗ ಬಾಬು ಅವರು ಅಂಬರೀಶ್ ಅವರ ಬಳಿ ಬಂದು, “ಏನೋ, ನಿಮ್ಮ ತಂದೆ ಅಷ್ಟೊಂದು ಹೇಳ್ತಿದ್ದಾರೆ, ಸುಮ್ಮನೆ ಅವರ ಮಾತು ಕೇಳು, ಹಠ ಮಾಡಬೇಡ” ಎಂದು ಬುದ್ಧಿವಾದ ಹೇಳಲು ಹೋದರು.

ನಮ್ಮಪ್ಪನತ್ರ ಬೇಜಾನ್ ದುಡ್ಡಿದೆ, ಆದ್ರೂ ನನಗೆ ಕಾರ್ ಕೊಡ್ಸಿಲ್ಲ!

ಆದರೆ ರೆಬೆಲ್ ಸ್ಟಾರ್ ಸುಮ್ಮನೆ ಬಿಡುತ್ತಾರೆಯೇ? ಬಾಬು ಅವರು ಬುದ್ಧಿ ಹೇಳುತ್ತಿದ್ದಂತೆ ಅವರನ್ನೇ ತರಾಟೆಗೆ ತೆಗೆದುಕೊಂಡ ಅಂಬರೀಶ್, “ಏ ಸುಮ್ನೆ ಇರು ಗುರು ನೀನು.. ನಮ್ಮಪ್ಪನ ಹತ್ರ ಬೇಜಾನ್ ದುಡ್ಡಿದೆ.. ನನಗೊಂದು ಕಾರು ಕೊಡಿಸೋಕೆ ಏನು? ಕೊಡ್ಲಿ ಬಿಡು” ಎಂದು ಬಾಬು ಅವರ ಬಾಯನ್ನೇ ಮುಚ್ಚಿಸಿಬಿಟ್ಟಿದ್ದರು! ಅಂಬರೀಶ್ ಅವರ ಈ ನಿರ್ಲಕ್ಷ್ಯದ ಮಾತು ಮತ್ತು ಹಠದ ಮುಂದೆ ಬಾಬು ಅವರ ಬುದ್ಧಿವಾದ ನಡೆಯಲೇ ಇಲ್ಲ.

ಕೊನೆಗೂ ಮಗನ ಹಠಕ್ಕೆ ಮಣಿದ ತಂದೆ ಹುಚ್ಚೇಗೌಡರು ಕಾರು ಕೊಡಿಸಲು ಒಪ್ಪಿದರು. ಆದರೆ ಅವರು ಆ ದುಡ್ಡನ್ನು ಅಂಬರೀಶ್ ಕೈಗೆ ಕೊಡಲಿಲ್ಲ. ಬದಲಿಗೆ ರಾಜೇಂದ್ರ ಸಿಂಗ್ ಬಾಬು ಅವರ ಕೈಗೆ 10,000 ರೂಪಾಯಿಗಳನ್ನು (ಆಗಿನ ಕಾಲಕ್ಕೆ ಅದು ಇಂದಿನ ಲಕ್ಷಾಂತರ ರೂಪಾಯಿಗೆ ಸಮ) ಇಟ್ಟು ಒಂದು ಮಾತು ಹೇಳಿದರು. “ನೋಡು ಬಾಬಣ್ಣ, ಈ ದುಡ್ಡನ್ನು ನಾನು ಅವನ (ಅಂಬರೀಶ್) ಕೈಗೆ ಕೊಟ್ಟರೆ, ಅವನು ಅದನ್ನೆಲ್ಲಾ ಇಸ್ಪೀಟ್ ಆಡೋದು, ಕುದುರೆ ರೇಸ್ ಆಡೋದು ಅಂತ ಹಾಳು ಮಾಡಿಬಿಡುತ್ತಾನೆ. ಅವನಿಗೆ ಜೂಜಾಟದ ಚಟ ಜಾಸ್ತಿ. ಆದ್ದರಿಂದ ನೀನೇ ನಿಂತು ಜವಾಬ್ದಾರಿಯಿಂದ ಒಂದು ಒಳ್ಳೆ ಕಾರು ಕೊಡಿಸು” ಎಂದು ತಾಕೀತು ಮಾಡಿದರು.

ಕಾರು ಸಿಕ್ಕ ಮೇಲೂ ಅಂಬರೀಶ್ ಮನೆಗೆ ಹೋಗಲಿಲ್ಲ!

ಹೀಗೆ ತಂದೆ ಕೊಟ್ಟ ದುಡ್ಡಿನಲ್ಲಿ ಬಾಬು ಅವರು ಅಂಬರೀಶ್ ಅವರಿಗೆ ಕಾರು ಕೊಡಿಸಿದರು. ಕಾರು ಸಿಕ್ಕ ಮೇಲೂ ಅಂಬರೀಶ್ ಅವರ ಕೋಪ ಕಡಿಮೆಯಾಗಲಿಲ್ಲ, ಅವರು ಮನೆಗೆ ಹೋಗಲಿಲ್ಲ! ರಾಜೇಂದ್ರ ಸಿಂಗ್ ಬಾಬು ಅವರ ಮನೆಯೇ ಅಂಬರೀಶ್ ಅವರ ಮನೆಯಾಯಿತು. ಬಾಬು ಅವರ ತಾಯಿ ಅಂಬರೀಶ್ ಅವರನ್ನು ತಮ್ಮ ಸ್ವಂತ ಮಗನಂತೆಯೇ ನೋಡಿಕೊಳ್ಳುತ್ತಿದ್ದರು. ಬೆಳಗ್ಗೆ ಎದ್ದ ತಕ್ಷಣ ಅಂಬರೀಶ್ ಅವರಿಗೆ ಇಷ್ಟವಾದ ಉಪ್ಪಿಟ್ಟು, ದೋಸೆ ಮಾಡಿಕೊಡುತ್ತಿದ್ದರು.

ಇತ್ತ ಅಂಬರೀಶ್ ಅವರ ಸ್ವಂತ ತಾಯಿ, ಮಗ ಮನೆಗೆ ಬರುತ್ತಿಲ್ಲವೆಂದು ಕೊರಗುತ್ತಿದ್ದರು. ಅಂಬರೀಶ್ ಅವರು ತಂದೆಯ ಮೇಲಿನ ಕೋಪಕ್ಕೆ ಮನೆ ಕಡೆ ತಲೆ ಹಾಕುತ್ತಿರಲಿಲ್ಲ. ಆಗ ಅಂಬರೀಶ್ ಅವರ ತಾಯಿ, ಮಗನಿಗೆ ಇಷ್ಟವಾಗುವ ನಾನ್-ವೆಜ್ (Non-veg) ಅಡುಗೆಯನ್ನು ಮಾಡಿ, ಅದನ್ನು ಬಾಬು ಅವರ ಮನೆಗೆ ಕಳುಹಿಸಿಕೊಡುತ್ತಿದ್ದರು! ಹೀಗೆ ಅಂಬರೀಶ್ ಅವರು ಸ್ನೇಹಿತನ ಮನೆಯ ಪ್ರೀತಿ ಮತ್ತು ಅನ್ನದ ಋಣದಲ್ಲಿ ಬರೋಬ್ಬರಿ ಎರಡು ವರ್ಷ ಕಳೆದರು. ಮುಂದೆ ಇದೇ ಸ್ನೇಹ ‘ಅಂತ’ ಸಿನಿಮಾದಂತಹ ಅದ್ಭುತ ಕಲಾಕೃತಿ ಮೂಡಿಬರಲು ಮತ್ತು ಅಂಬರೀಶ್ ಅವರು ‘ರೆಬೆಲ್ ಸ್ಟಾರ್’ ಆಗಿ ಹೊರಹೊಮ್ಮಲು ಕಾರಣವಾಯಿತು.

(ಕೃಪೆ: ವಿವಿಧ ವಿಸ್ಮಯ’s post)



Source link

Leave a Reply

Your email address will not be published. Required fields are marked *