
ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಇಂದೇ ಚುನಾವಣೆ ನಡೆದರೂ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬೀದರ್ (ಮಾ.21): ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಇಂದೇ ಚುನಾವಣೆ ನಡೆದರೂ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಅವರು ಬೀದರ್ ದಕ್ಷಿಣ ಕ್ಷೇತ್ರದ ಚಾಂಗಲೇರಾ ಗ್ರಾಮದಲ್ಲಿರುವ ಜೆಡಿ ಕಲ್ಯಾಣ ಮಂಟಪದಲ್ಲಿ, ಬೀದರ್ ದಕ್ಷಿಣ ಮಂಡಲದ ವತಿಯಿಂದ ನಡೆದ ಪಂಡಿತ ದೀನದಯಾಳ ಉಪಾಧ್ಯಾಯರ 2026ರ ಪ್ರಶಿಕ್ಷಣ ಮಹಾಭಿಯಾನವನ್ನು ಭವ್ಯವಾಗಿ ಉದ್ಘಾಟಿಸಿ ಮಾತನಾಡಿದರು.
ಮಹಾಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಂಘಟನೆ ಬಲಪಡಿಸುವುದು, ಪಕ್ಷದ ಸಿದ್ಧಾಂತಗಳ ತಿಳಿವುದು ಹಾಗೂ ಜನಸೇವೆಯಲ್ಲಿ ಇನ್ನಷ್ಟು ಚುರುಕುತನ ತರುವ ಬಗ್ಗೆ ಮಾರ್ಗದರ್ಶನ ನೀಡಿದರು. ಭಾರತೀಯ ಜನತಾ ಪಕ್ಷವು ಕೇವಲ ಒಂದು ರಾಜಕೀಯ ಪಕ್ಷವಲ್ಲ, ಇದು ಒಂದು ಸಿದ್ಧಾಂತ ಮತ್ತು ಸೇವಾ ಮನೋಭಾವದ ನಮ್ಮ ಪಕ್ಷದ ನಿಜವಾದ ಬಲವೇ ನೀವು ನಮ್ಮ ನಿಷ್ಠಾವಂತ ಕಾರ್ಯಕರ್ತರು. ಸಮಾಜದ ಕೊನೆಯ ವ್ಯಕ್ತಿಗೂ ನ್ಯಾಯ ಮತ್ತು ಸೌಲಭ್ಯಗಳು ತಲುಪಬೇಕು ಎಂಬುದು ನಮ್ಮ ಧ್ಯೇಯವಾಗಿದೆ ಎಂದರು.
ಪಕ್ಷದ ಸಿದ್ಧಾಂತ, ಸಾಧನೆ ಜನರಿಗೆ ಮತ್ತಷ್ಟು ವ್ಯಾಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಕೂಡ ಬದ್ಧತೆಯಿಂದ ಶ್ರಮಿಸುವ ಹಾಗೂ ಜನಕಲ್ಯಾಣಕ್ಕಾಗಿ ನಮ್ಮ ಪರಿಪೂರ್ಣ ಪರಿಶ್ರಮದ ದೃಢಸಂಕಲ್ಪವನ್ನು ಪುನರುಚ್ಚರಿಸಬೇಕು. ಪಕ್ಷ ಸಂಘಟನೆ ಬಲವಾಗಿದ್ದರೆ ಮಾತ್ರ ಚುನಾವಣೆಯಲ್ಲಿ ಯಶಸ್ಸು ಸಾಧ್ಯ. ಪ್ರತಿಯೊಬ್ಬ ಕಾರ್ಯಕರ್ತನು ತನ್ನ ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ, ಮನೆಮನೆಗೆ ಪಕ್ಷದ ಸಾಧನೆಗಳು ಮತ್ತು ಸಿದ್ಧಾಂತಗಳನ್ನು ತಲುಪಿಸಬೇಕು ಎಂದರು.
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಈ ಅಭಿವೃದ್ಧಿಯ ಪಥವನ್ನು ಇನ್ನಷ್ಟು ಬಲಪಡಿಸಲು ನಾವು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ನಮ್ಮ ಗುರಿ ಕೇವಲ ಅಧಿಕಾರವಲ್ಲ, ಜನಸೇವೆ. ಕಾರ್ಯಕರ್ತರು ಸದಾ ಜನರೊಂದಿಗೆ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪಕ್ಷದ ಮೇಲೆ ವಿಶ್ವಾಸ ಹೆಚ್ಚಿಸಬೇಕು ಎಂದು ಕರೆ ನೀಡಿದರು.
ವಿಜಯ ನಿಶ್ಚಿತ
ನಾವು ಮಾತಿನಲ್ಲಿ ಅಲ್ಲ, ಕೆಲಸದಲ್ಲಿ ತೋರಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತ ಪಕ್ಷದ ರಾಯಭಾರಿಯಾಗಿ ಕೆಲಸ ಮಾಡಿದರೆ, ನಮ್ಮ ವಿಜಯ ನಿಶ್ಚಿತ ಎಂದರು. ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಸಂಘಟನೆಗೆ ಒತ್ತು ನೀಡುವುದು ಪಕ್ಷದ ಬಲವರ್ಧನೆಗೆ ಮೂಲಭೂತ ಅಂಶವಾಗಿದೆ. ಸಂಘಟಿತ ಕಾರ್ಯಕರ್ತರು, ಶಕ್ತಿಶಾಲಿ ಮಂಡಲ-ಬೂತ್ ಮಟ್ಟದ ವ್ಯವಸ್ಥೆ ಹಾಗೂ ಜನರೊಂದಿಗೆ ನೇರ ಸಂಪರ್ಕವೇ ಪಕ್ಷದ ಯಶಸ್ಸಿನ ಪ್ರಮುಖ ಶಕ್ತಿ.
ಬೂತ್ ಮಟ್ಟದಿಂದಲೇ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದರು. ನಮ್ಮ ಅವಧಿಯಲ್ಲಿ ಜಾರಿಗೊಂಡ ಜನಪರ ಯೋಜನೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಸ್ಪಷ್ಟವಾಗಿ ತಿಳಿಸಿ, ಅವರ ವಿಶ್ವಾಸವನ್ನು ಇನ್ನಷ್ಟು ಬಲಪಡಿಸೋಣ ಎಂದರು. ಈ ಸಂದರ್ಭದಲ್ಲಿ ದಕ್ಷಿಣ ಮಂಡಲ ಅಧ್ಯಕ್ಷ ಗುರುನಾಥ ರಾಜಗೀರಾ, ಮಾಜಿ ಸಚಿವ ಮತ್ತು ಶಾಸಕರಾದ ಪ್ರಭು ಚವ್ಹಾಣ, ಶಾಸಕರುಗಳಾದ ಸಿದ್ದು ಪಾಟೀಲ, ಶರಣು ಸಲಗರ, ಬಸವರಾಜ್ ಮತ್ತಿಮೂಡ್, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಜಿ. ಮೂಳೆ, ಶಶಿಲ್ ನಮೋಶಿ ಸೇರಿದಂತೆ ಪ್ರಮುಖರು, ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.