
Woman dies in wall collapse: ಬೆಳಗಾವಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಅಕಾಲಿಕ ಮಳೆಗೆ ಪಾಳು ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ನಿಂತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೇಸಿಗೆಯಲ್ಲಿ ಸುರಿದ ಅಕಾಲಿಕ ಮಳೆಗೆ ಮತ್ತೊಂದು ಜೀವ ಬಲಿ
ಬೆಳಗಾವಿ: ರಾಜ್ಯದಲ್ಲಿ ಬೇಸಿಗೆಯಲ್ಲಿ ಸುರಿದ ಅಕಾಲಿಕ ಮಳೆಗೆ ಮತ್ತೊಂದು ಜೀವ ಬಲಿಯಾಗಿದೆ. ನಿನ್ನೆಯಂತೆ ಇಂದು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಧಾರಾಕಾರ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬೆಳಗಾವಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಮಳೆಗೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮನೆಯ ಗೋಡೆ ಕುಸಿದು ಪತ್ನಿ ಸಾವನ್ನಪ್ಪಿದ್ದರೆ ಪತಿ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಮಳೆ ನಿಲ್ಲೋದನ್ನು ಕಾಯುತ್ತಿದ್ದವರಿಗೆ ಕಾದಿದ್ದ ಜವರಾಯ
ಮೃತ ಮಹಿಳೆಯನ್ನು 34 ವರ್ಷದ ಪರ್ವಿನ್ ಬೇಪಾರಿ(34) ಎಂದು ಗುರುತಿಸಲಾಗಿದೆ. ಇವರ ಪತಿ ಶರೀಫ್ ಬೇಪಾರಿ ಈ ಅವಘಡದಲ್ಲಿ ಬದುಕುಳಿದಿದ್ದಾರೆ. ಈ ದಂಪತಿ ಕೋಳಿಗಳನ್ನು ಮಾರಾಟ ಮಾಡುವುದಕ್ಕೆ ಬೈಕ್ ಮೇಲೆ ಹೊರಟಿದ್ದರು. ಮಳೆ ಹೆಚ್ಚಾದ ಹಿನ್ನೆಲೆ ಪಾಳು ಮನೆ ಕೆಳಗೆ ನಿಂತಿದ್ದರು. ಇವರ ದುರಾದೃಷ್ಟಕ್ಕೆ ಇದೇ ವೇಳೆ ಇವರು ಮಳೆಯಿಂದ ಆಶ್ರಯ ಪಡೆಯಲು ನಿಂತಿದ್ದ ಪಾಳು ಮನೆಯ ಗೋಡೆ ಏಕಾಏಕಿ ಕುಸಿದು ಬಿದ್ದು, ಪರ್ವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬದುಕುಳಿದ ಶರೀಫ್ ಅವರಿಗೆ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಕುಟುಂಬಸ್ಥರ ಆಗ್ರಹಿಸಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ರೈತರ ಕೈಗೆ ಸಿಕ್ಕ ಪಂಪ್‌ಸೆಟ್ ಕೇಬಲ್ ಕಳ್ಳರು: ಕದ್ದ ಕೇಬಲ್‌ನಿಂದ ಮರಕ್ಕೆ ಕಟ್ಟಿ ಥಳಿಸಿದ ರೈತರು
ನಿನ್ನೆಯಷ್ಟೇ ಕೊಪ್ಪಳದಲ್ಲಿ ಸುರಿದ ಬೇಸಿಗೆ ಮಳೆ ವೇಳೆ ಸಿಡಿಲು ಬಡಿದು 8ನೇ ತರಗತಿಯ ಬಾಲಕ ಮಂಜುನಾಥ ಮುದೇಗೌಡ (14) ಮೃತಪಟ್ಟಿದ್ದರು. ಕೊಪ್ಪಳದ ಯಲಬುರ್ಗಾ ತಾಲೂಕಿನಲ್ಲಿ ಆಡು ಮೇಯಿಸಲು ತೆರಳಿದ್ದಾಗ ಸಿಡಿಲು ಬಡಿದು ಮುದೇಗೌಡ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು : 50 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು: ಅನುಮಾನ ಹುಟ್ಟಿಸಿದ ಅಪಘಾತ ಪ್ರಕರಣ