ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ‘ರಣರಂಗ ಬಿಟ್ಟು ಓಡುವ ಹೇಡಿ ನಾನಲ್ಲ’ ಎಂದು ಗುಡುಗಿದ್ದಾರೆ. ತಮ್ಮ ರಾಜಕೀಯ ಜೀವನವು ಕಲ್ಲು-ಮುಳ್ಳಿನ ಹಾದಿಯಾಗಿದ್ದು, ತನ್ನ ಹಾಗೂ ಜನರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಿಗೆ ಬಗ್ಗುವುದಿಲ್ಲವೆಂದು ವಿರೋಧಿಗಳಿಗೆ ನೇರ ಸವಾಲು
ಬೆಂಗಳೂರು (ಫೆ.21): ‘ರಣರಂಗವನ್ನ ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ..’ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರ ಪೋಸ್ಟ್ ಒಂದು ಇದೀಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ರಾಜಕೀಯ ವಿರೋಧಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಸಮರ ಸಾರಿದರಾ? ಸಿಎಂ ಕೊಟ್ಟ ಸಂದೇಶ ವಿಪಕ್ಷದ ರಾಜಕೀಯ ವಿರೋಧಿಗಳಿಗಾ? ಸ್ವಪಕ್ಷದ ರಾಜಕೀಯ ವಿರೋಧಿಗಳಿಗಾ? ಕುತೂಹಲ ಮೂಡಿಸಿದೆ. ತಮ್ಮನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸುತ್ತಿರುವ ಶಕ್ತಿಗಳಿಗೆ ಸಿಎಂ ನೇರವಾಗಿಯೇ ಸವಾಲು ಎಸೆದಿದ್ದಾರೆ.
ಕುತೂಹಲ ಮೂಡಿಸಿದ ಸಿಎಂ ಸಿದ್ದರಾಮಯ್ಯ ಪೋಸ್ಟ್
ಸಾಮಾಜಿಕ ನ್ಯಾಯ ದಿನದ ಪ್ರಯುಕ್ತ ಸುದೀರ್ಘ ಅಂಕಣವೊಂದನ್ನು ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಉಸಿರಿರುವವರೆಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತೇನೆ’ ಎನ್ನುವ ಮೂಲಕ ತಾವು ಎಂತಹದ್ದೇ ಪರಿಸ್ಥಿತಿಯಲ್ಲೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಹೂವಿನ ಹಾಸಿಗೆಯಲ್ಲ, ಇದು ಕಲ್ಲು-ಮುಳ್ಳಿನ ಹಾದಿ!
ತಮ್ಮ ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಜೀವನವನ್ನು ಸ್ಮರಿಸಿರುವ ಸಿಎಂ, ‘ನನ್ನ ರಾಜಕೀಯ ಹಾದಿ ಎಂದಿಗೂ ಸುಲಭವಾಗಿರಲಿಲ್ಲ. ಅದು ಕಲ್ಲು-ಮುಳ್ಳುಗಳಿಂದ ಕೂಡಿದ ಹಾದಿಯಾಗಿತ್ತು. ನನ್ನನ್ನು ರಾಜಕೀಯವಾಗಿ ಹತ್ತಿಕ್ಕಲು ದೊಡ್ಡ ದೊಡ್ಡ ನಾಯಕರು ಅನೇಕ ಕುಟಿಲ ಕಾರಸ್ತಾನಗಳನ್ನು ನಡೆಸಿದ್ದಾರೆ. ಆದರೆ, ಜನರ ಆಶೀರ್ವಾದದ ಬಲದಿಂದ ನಾನು ಅದೆಲ್ಲವನ್ನೂ ಮೆಟ್ಟಿ ನಿಂತು ಇಲ್ಲಿಯವರೆಗೆ ಬಂದಿದ್ದೇನೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಜನರ ವಿರುದ್ಧದ ಷಡ್ಯಂತ್ರಕ್ಕೆ ಸಿಎಂ ಪ್ರತಿರೋಧ
ಪ್ರಸ್ತುತ ತಮ್ಮ ವಿರುದ್ಧ ನಡೆಯುತ್ತಿರುವ ಆರೋಪಗಳು ಮತ್ತು ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಇದು ಕೇವಲ ನನ್ನ ವಿರುದ್ಧದ ಷಡ್ಯಂತ್ರವಲ್ಲ, ಬದಲಿಗೆ ನನ್ನನ್ನು ನಂಬಿರುವ ಮತ್ತು ಪ್ರೀತಿಸುತ್ತಿರುವ ಜನರ ವಿರುದ್ಧದ ಷಡ್ಯಂತ್ರ. ದ್ವೇಷ ಮತ್ತು ಅಸೂಯೆಯ ರಾಜಕಾರಣ ಮಾಡುತ್ತಿರುವವರ ವಿರುದ್ಧ ನಾನು ಎದೆಗುಂದದೆ ನಿಲ್ಲುತ್ತೇನೆ. ಇದು ಸತ್ಯ, ನ್ಯಾಯ ಮತ್ತು ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ’ ಎಂದು ಘೋಷಿಸಿದ್ದಾರೆ.
ರಣರಂಗ ಬಿಟ್ಟು ಓಡುವ ಹೇಡಿ ನಾನಲ್ಲ!
ಪೋಸ್ಟ್ನ ಕೊನೆಯಲ್ಲಿ ಅತ್ಯಂತ ಕಠಿಣ ಪದಗಳನ್ನು ಬಳಸಿರುವ ಸಿದ್ದರಾಮಯ್ಯ, ‘ವಿರೋಧಿಗಳ ಯಾವುದೇ ತಂತ್ರಕ್ಕೂ ನಾನು ಬಗ್ಗುವುದಿಲ್ಲ. ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ. ನಿಮ್ಮೆಲ್ಲರ ಬೆಂಬಲ ಇರುವವರೆಗೆ ಈ ಹೋರಾಟ ಮುಂದುವರಿಯಲಿದೆ’ ಎಂದು ಗುಡುಗಿದ್ದಾರೆ. ಈ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡುವ ಮುನ್ಸೂಚನೆ ನೀಡಿದೆ.
