
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ, ಹಿಂದಿನ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಟಿಕೆಟ್‌ಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡಲಾಗಿದ್ದು, ಟಿಕೆಟ್ ಹೊಂದಿದವರಿಗೆ ಉಚಿತ ಮೆಟ್ರೋ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ಜೊತೆಗೆ, ಕ್ರೀಡಾಂಗಣದ ಸುತ್ತಮುತ್ತ ಟ್ರಾಫಿಕ್ ನಿರ್ವಹಣೆ ಹಾಗೂ ಪಾರ್ಕಿಂಗ್‌ಗೆ ವಿಶೇಷ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಬೆಂಗಳೂರು: ಕಾಲ್ತುಳಿತ ದುರಂತದ ಬಳಿಕ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ( ಐಪಿಎಲ್) ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಇರಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಹಿನ್ನೆಲೆ ಭದ್ರತಾ ಮತ್ತು ಟ್ರಾಫಿಕ್ ವ್ಯವಸ್ಥೆಗಳ ಕುರಿತು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಐಪಿಎಲ್ ಪಂದ್ಯಗಳಿಗೆ ಟಿಕೆಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಮಾತ್ರ ಕಲ್ಪಿಸಲಾಗಿದೆ. ಪ್ರೇಕ್ಷಕರು ಕೇವಲ ಆನ್‌ಲೈನ್ ಮೂಲಕವೇ ಟಿಕೆಟ್ ಖರೀದಿಸಬೇಕು ಹಾಗೂ ಒಂದು ಮೊಬೈಲ್ ನಂಬರ್‌ಗೆ ಗರಿಷ್ಠ ಎರಡು ಟಿಕೆಟ್‌ಗಳನ್ನು ಪಡೆಯಲು ಮಾತ್ರ ಅವಕಾಶ ಇರಲಿದೆ. ಟಿಕೆಟ್ ಖರೀದಿಸಿದವರೇ ಪಂದ್ಯ ವೀಕ್ಷಣೆಗೆ ಆಗಮಿಸಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಅನುಸರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರೇಕ್ಷಕರ ಸೌಕರ್ಯ ಹಾಗೂ ಟ್ರಾಫಿಕ್ ನಿಯಂತ್ರಣದ ದೃಷ್ಟಿಯಿಂದ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಟಿಕೆಟ್ ಹೊಂದಿರುವವರಿಗೆ ಮೆಟ್ರೋ ರೈಲು ಪ್ರಯಾಣವನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಿತ ಸಮಿತಿಯೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಹೇಳಿದರು. ಪೊಲೀಸ್ ಇಲಾಖೆಯ ಮನವಿಗೂ ಸ್ಪಂದಿಸಿ ಈ ಕ್ರಮ ಜಾರಿಗೊಂಡಿದೆ.
ಮೂರು ನಿಮಿಷಕ್ಕೊಮ್ಮೆ ಮೆಟ್ರೋ
ಪ್ರೇಕ್ಷಕರು ಸಾಧ್ಯವಾದಷ್ಟು ಮೆಟ್ರೋ ಸೇವೆಯನ್ನು ಬಳಸುವಂತೆ ಮನವಿ ಮಾಡಿರುವ ಆಯುಕ್ತರು, ಇದರಿಂದ ಸ್ಟೇಡಿಯಂ ಸುತ್ತಮುತ್ತ ವಾಹನಗಳ ದಟ್ಟಣೆ ಮತ್ತು ಪಾರ್ಕಿಂಗ್ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಹೇಳಿದರು. ಪಂದ್ಯ ದಿನಗಳಲ್ಲಿ ಪ್ರತಿ ಮೂರು ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚಾರ ಇರಲಿದ್ದು, ಹೆಚ್ಚಿನ ಜನಸಂದಣಿಯನ್ನು ನಿಭಾಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಸ್ಟೇಡಿಯಂ ಸುತ್ತಲಿನ ಟ್ರಾಫಿಕ್ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಕ್ವೀನ್ಸ್ ರೋಡ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಕಬ್ಬನ್ ರೋಡ್‌ನಲ್ಲಿ ಏಳು ಪ್ರವೇಶ ದ್ವಾರಗಳನ್ನು ತೆರೆಯಲಾಗಿದೆ. ಒಟ್ಟು 27 ಎಂಟ್ರಿ ಪಾಯಿಂಟ್‌ಗಳ ಮೂಲಕ ಪ್ರೇಕ್ಷಕರನ್ನು ಸ್ಟೇಡಿಯಂ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.
ಪಂದ್ಯ ಆರಂಭಕ್ಕೂ ನಾಲ್ಕು ಗಂಟೆಗಳ ಮೊದಲು ಸ್ಟೇಡಿಯಂ ಗೇಟ್‌ಗಳನ್ನು ತೆರೆಯಲಾಗುತ್ತದೆ. ಆದ್ದರಿಂದ ಎಲ್ಲಾ ಪ್ರೇಕ್ಷಕರು ಮುಂಚಿತವಾಗಿಯೇ ಆಗಮಿಸುವಂತೆ ಸೂಚಿಸಲಾಗಿದೆ. ಟಿಕೆಟ್ ಹೊಂದಿರುವವರು ಮಾತ್ರ ಸ್ಟೇಡಿಯಂ ಸುತ್ತಮುತ್ತ ನಿಲ್ಲಲು ಅವಕಾಶವಿದ್ದು, ಟಿಕೆಟ್ ಇಲ್ಲದೆ ಅಲೆದಾಡಲು ಅಥವಾ ರಸ್ತೆ ಮೇಲೆ ನಿಲ್ಲಲು ಅವಕಾಶ ಇರುವುದಿಲ್ಲ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನೂ, ಪಂದ್ಯಕ್ಕೆ ಆಗಮಿಸುವವರು ತಮ್ಮ ವಾಹನಗಳನ್ನು ಎಲ್ಲಿ ಪಾರ್ಕ್ ಮಾಡಬೇಕು ಎಂಬ ಮಾಹಿತಿ ಟಿಕೆಟ್ ಖರೀದಿ ಮಾಡುವಾಗಲೇ ನೀಡಲಾಗುತ್ತದೆ. ಸ್ಟೇಡಿಯಂ ಸುತ್ತಮುತ್ತ ‘ನೋ ಪಾರ್ಕಿಂಗ್’ ವಲಯವನ್ನು ಜಾರಿಗೊಳಿಸಲಾಗಿದ್ದು, ವಾಹನ ದಟ್ಟಣೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ಈ ಕುರಿತು ಹೆಚ್ಚುವರಿ ಮಾಹಿತಿ ನೀಡಿದ ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ಅವರು, ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಗಳ ಬಗ್ಗೆ ಪ್ರೇಕ್ಷಕರಿಗೆ ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಿದರು. ಒಟ್ಟಾರೆ, ಐಪಿಎಲ್ ಪಂದ್ಯಗಳನ್ನು ಸುಗಮವಾಗಿ ನಡೆಸಲು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಬೆಂಗಳೂರು ಪೊಲೀಸರು ಸಮಗ್ರ ಬಂದೋಬಸ್ತ್ ವ್ಯವಸ್ಥೆ ರೂಪಿಸಿದ್ದು, ಪ್ರೇಕ್ಷಕರು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.
ಮಾಸದ ಸಿಹಿ-ಕಹಿ
ಇಂಡಿಯನ್ ಪ್ರಿಮಿಯರ್ ಲೀಗ್-19ನೇ ಆವೃತ್ತಿಯ ಮೊದಲ ಪಂದ್ಯವು ಮಾ.28 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಬಾರಿ ಪ್ರಶಸ್ತಿ ವಿಜೇತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸೈನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡಗಳು ಮುಖಾಮುಖಿಯಾಗಲಿವೆ. ಕಳೆದ ವರ್ಷ ಐಪಿಎಲ್ ಗೆದ್ದ ಆರ್‌ಸಿಬಿ ತಂಡದ ಅಭಿನಂದನಾ ಕಾರ್ಯಕ್ರಮದ ವೇಳೆ ಕಾಲ್ತುಳಿತ ದುರ್ಘಟನೆ ಸಂಭವಿಸಿ 11 ಮಂದಿ ಅಭಿಮಾನಿಗಳು ಬಲಿಯಾಗಿದ್ದರು. ಈ ಕರಾಳ ಘಟನೆ ನೆನಪು ಮರೆಯುವ ಹೊತ್ತಿಗೆ ಮತ್ತೊಂದು ಐಪಿಎಲ್ ಋತು ಶುರುವಿಗೆ ದಿನಗಣನೆ ಆರಂಭವಾಗಿದೆ.ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಸರ್ಕಾರ ಕೆಂಪು ಬಾವುಟ ತೋರಿಸಿತ್ತು. ಕೊನೆಗೆ ಮಾತುಕತೆ ನಡೆದು ಐಪಿಎಲ್ ಪಂದ್ಯಗಳಿಗೆ ಸರ್ಕಾರವು ಹಸಿರು ನಿಶಾನೆ ತೋರಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಪ್ರಾಣಹಾನಿ ಸಂಭವಿಸುವಂತಹ ಅನಾಹುತಗಳಿಗೆ ಅವಕಾಶ ಕೊಡದಂತೆ ಹೊಣೆಗಾರಿಕೆ ಪೊಲೀಸರ ಹೆಗಲಿಗೆ ಬಿದ್ದಿದೆ.