Promotion Bhagya for a Swamiji ರಾಜ್ಯ ಸರ್ಕಾರವು ಇತ್ತೀಚೆಗೆ 20 ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದ್ದು, ಈ ಪಟ್ಟಿಯಲ್ಲಿ ಸ್ವಯಂ ನಿವೃತ್ತಿ ಪಡೆದು ಪೀಠಾಧಿಪತಿಯಾಗಿರುವ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರ ಹೆಸರೂ ಸೇರಿದೆ.
ಮಂಡ್ಯ (ಫೆ.14): ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳ ಎಡವಟ್ಟುಗಳು ಹೊಸತಲ್ಲ, ಆದರೆ ಈಗ ನಡೆದಿರುವ ಘಟನೆ ಇಡೀ ಆಡಳಿತ ಯಂತ್ರವೇ ತಲೆತಗ್ಗಿಸುವಂತಾಗಿದೆ. ಸ್ವಯಂ ನಿವೃತ್ತಿ ಪಡೆದು ಆಧ್ಯಾತ್ಮದ ಹಾದಿ ಹಿಡಿದು ಪೀಠಾಧಿಪತಿಯಾಗಿರುವ ಸ್ವಾಮೀಜಿಯೊಬ್ಬರಿಗೆ ಸರ್ಕಾರ ಬಡ್ತಿ (Promotion) ನೀಡಿ ಆದೇಶ ಹೊರಡಿಸುವ ಮೂಲಕ ನಗೆಪಾಟಲಿಗೀಡಾಗಿದೆ.
20 ಅಧಿಕಾರಿಗಳ ಪಟ್ಟಿಯಲ್ಲಿ ಸ್ವಾಮೀಜಿ ಹೆಸರು!
ರಾಜ್ಯ ಸರ್ಕಾರ ಇತ್ತೀಚೆಗೆ 20 ಕೆಎಎಸ್ (KAS) ಅಧಿಕಾರಿಗಳಿಗೆ ಬಡ್ತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಪಟ್ಟಿಯಲ್ಲಿ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ. ಆದರೆ, ಅಚ್ಚರಿಯ ವಿಷಯವೆಂದರೆ ಈ ಪಟ್ಟಿಯಲ್ಲಿ ಈಗಾಗಲೇ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿರುವ ಹೆಚ್.ಎಲ್. ನಾಗರಾಜ (ಈಗಿನ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ) ಅವರ ಹೆಸರೂ ಸೇರಿದೆ.
ಪೀಠಾಧಿಪತಿಗೆ ‘ಸ್ಥಳ ನಿರೀಕ್ಷಣೆಯಲ್ಲಿರಿ’ ಎಂದು ಆದೇಶ!
ಈ ಹಿಂದೆ ಕೆಎಎಸ್ ಅಧಿಕಾರಿಯಾಗಿದ್ದ ಹೆಚ್.ಎಲ್. ನಾಗರಾಜ ಅವರು ಮಂಡ್ಯ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ (ADC) ಸೇವೆ ಸಲ್ಲಿಸಿದ್ದರು. ನಿವೃತ್ತಿಗೂ ಮುನ್ನವೇ ಅವರು ಸೇವೆಯನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದರು. ಸದ್ಯ ಅವರು ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಎಂಬ ಹೆಸರಿನಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಆದರೆ ಸರ್ಕಾರದ ಆದೇಶದಲ್ಲಿ ಅವರನ್ನು ‘ಸ್ಥಳ ನಿರೀಕ್ಷಣೆಯಲ್ಲಿರುವ ಅಧಿಕಾರಿ’ ಎಂದು ನಮೂದಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
ಅಧೀನ ಕಾರ್ಯದರ್ಶಿಗಳ ಸಹಿ ಇರುವ ಅಧಿಕೃತ ಪತ್ರ
ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ್ ಪ್ರಸಾದ್ ಅವರ ಸಹಿಯೊಂದಿಗೆ ಈ ಆದೇಶ ಹೊರಬಿದ್ದಿದೆ. ಬಡ್ತಿ ನೀಡುವ ಮೊದಲು ಆಯಾ ಅಧಿಕಾರಿಗಳು ಸೇವೆಯಲ್ಲಿದ್ದಾರೆಯೇ? ನಿವೃತ್ತಿ ಹೊಂದಿದ್ದಾರೆಯೇ? ಅಥವಾ ಸ್ವಯಂ ನಿವೃತ್ತಿ ಪಡೆದಿದ್ದಾರೆಯೇ? ಎಂಬ ಕನಿಷ್ಠ ಮಾಹಿತಿಯೂ ಇಲ್ಲದೆ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ದಿವ್ಯ ಸಾನಿಧ್ಯದಲ್ಲಿರುವ ಸ್ವಾಮೀಜಿಗೆ ಮರಳಿ ಅಧಿಕಾರ ಸ್ವೀಕರಿಸಲು ಬನ್ನಿ ಎಂದು ಕರೆದಂತಿದೆ ಈ ಸರ್ಕಾರದ ನಡೆ.
ಆಡಳಿತ ಯಂತ್ರದ ವೈಫಲ್ಯಕ್ಕೆ ಹಿಡಿದ ಕನ್ನಡಿ
ಸರ್ಕಾರಿ ಕಡತಗಳಲ್ಲಿ ಅಧಿಕಾರಿಗಳ ಮಾಹಿತಿ ಎಷ್ಟು ‘ಅಪ್‌ಡೇಟ್’ ಆಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಿವೃತ್ತಿ ಪಡೆದು ವರ್ಷಗಳೇ ಕಳೆದರೂ, ಪೀಠಾಧಿಪತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರೂ ಆಡಳಿತ ಮಂಡಳಿಗೆ ಈ ವಿಷಯ ತಿಳಿಯದಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಎಡವಟ್ಟು ಈಗ ಕಾಂಗ್ರೆಸ್ ಸರ್ಕಾರದ ಮುಜುಗರಕ್ಕೆ ಕಾರಣವಾಗಿದೆ.
