
ಆಯತೊಲ್ಲಾ ಅಲಿ ಖಮೇನಿ ಸಾವಿನೊಂದಿಗೆ, ಪ್ರಗತಿಪರ ಚಿಂತನೆಯ ದೇಶವನ್ನು ಧಾರ್ಮಿಕ ಮೂಲಭೂತವಾದ ತೆಕ್ಕೆಗೆ ತಳ್ಳಿದ್ದ ವ್ಯಕ್ತಿತ್ವವೊಂದು ಇರಾನ್‌ನ ಇತಿಹಾಸದ ಪುಟ ಸೇರಿದಂತಾಗಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ದೇಶದ ಒಳಗೂ, ಹೊರಗೂ ದ್ವೇಷಕಟ್ಟಿಕೊಂಡ ಖಮೇನಿಯ ಜೀವನವೇ ಒಂದು ರೋಚಕ ಅಧ್ಯಾಯ.
ಆಯತೊಲ್ಲಾ ಅಲಿ ಖಮೇನಿ ಸಾವಿನೊಂದಿಗೆ, ಪ್ರಗತಿಪರ ಚಿಂತನೆಯ ದೇಶವನ್ನು ಧಾರ್ಮಿಕ ಮೂಲಭೂತವಾದ ತೆಕ್ಕೆಗೆ ತಳ್ಳಿದ್ದ ವ್ಯಕ್ತಿತ್ವವೊಂದು ಇರಾನ್‌ನ ಇತಿಹಾಸದ ಪುಟ ಸೇರಿದಂತಾಗಿದೆ. ಮೂರೂವರೆ ದಶಕಗಳಿಂದ ಅಮೆರಿಕ ಮತ್ತು ಇಸ್ರೇಲ್ ಜೊತೆ ಸೆಣಸಾಟ, ನೆರೆಯ ಇರಾಕ್‌ನೊಂದಿಗೆ ಸತತ ಸಂಘರ್ಘದ ಹೊರತಾಗಿಯೂ ದೇಶವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಕಟ್ಟುವ ಯತ್ನದಲ್ಲಿ ಸಾಕಷ್ಟು ಯಶಕಂಡ, ಕೊನೆಗೆ ಅದೇ ಕಾರಣಕ್ಕೆ ದೇಶದ ಒಳಗೂ, ಹೊರಗೂ ದ್ವೇಷಕಟ್ಟಿಕೊಂಡ ಖಮೇನಿಯ ಜೀವನವೇ ಒಂದು ರೋಚಕ ಅಧ್ಯಾಯ.
ಇರಾನ್‌ನ ಮಶಾದ್ ಪಟ್ಟಣದ ಧಾರ್ಮಿಕ ಕುಟುಂಬದಲ್ಲಿ ಜನಿಸಿದ ಖಮೇನಿ, ಓದಿದ್ದೆಲ್ಲಾ ಖೋಮ್ ಸೇರಿದಂತೆ ಸುತ್ತಮುತ್ತಲ ನಗರದ ಧಾರ್ಮಿಕ ಕೇಂದ್ರಗಳಲ್ಲಿ. ಈ ಹೊತ್ತಿಗೆ ಇರಾನ್‌ನಲ್ಲಿ ಆಡಳಿತ ನಡೆಸುತ್ತಿದ್ದವರು ಪಾಶ್ಚಿಮಾತ್ಯ ಪರಿಕಲ್ಪನೆಯ ಶಾ ರಾಜಮನೆತನಕ್ಕೆ ಸೇರಿದ ಮೊಹಮ್ಮದ್ ರೆಜಾ ಪಹ್ಲವಿ. ಮತ್ತೊಂದೆಡೆ ಧರ್ಮದ ಆಧಾರದಲ್ಲಿ ದೇಶ ಕಟ್ಟುವ ಕನಸು ಹೊತ್ತಿದ್ದ ರುಹೊಲ್ಲಾ ಖಮೇನಿ, ಪಹ್ಲವಿ ಸರ್ಕಾರ ಕೆಡವಲು ಸಂಚು ರೂಪಿಸುತ್ತಿದ್ದರು. ಇಂಥ ಹೊತ್ತಿನಲ್ಲೇ ರುಹಲ್ಲಾ ಚಿಂತನೆಗಳಿಗೆ ಮಾರುಹೋದ ಖಮೇನಿ ತನ್ನ ಗುರುವಿನ ಹೋರಾಟಕ್ಕೆ ಕೈ ಜೋಡಿಸಿದ್ದರು. ಇದೇ ಕಾರಣಕ್ಕೆ ಜೈಲು ಶಿಕ್ಷೆಗೆ ಗುರಿಯಾಗಿ ತಲೆಮರೆಸಿಕೊಂಡಿದ್ದ ಖಮೇನಿ ಬಳಿಕ ಇರಾಕ್ ಮತ್ತು ಫ್ರಾನ್ಸ್‌ಗೆ ಪರಾರಿಯಾಗಿದ್ದರು.
ಈ ನಡುವೆ 1970ರ ದಶಕದ ಅಂತ್ಯದಲ್ಲಿ ಪಹ್ಲವಿ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. 1979ರಲ್ಲಿ ರುಹಲ್ಲಾ, ಇರಾನ್ ಅನ್ನು ಇಸ್ಲಾಮಿಕ್ ದೇಶವೆಂದು ಘೋಷಿಸಿದರು. ದೇಶದಲ್ಲಿ ದೊಡ್ಡಮಟ್ಟದ ಕ್ರಾಂತಿ ನಡೆದು ಪಹ್ಲವಿ ಸರ್ಕಾರ ಉರುಳಿಸಲಾಯಿತು. ರುಹಲ್ಲಾ ಇರಾನ್‌ನ ಹೊಸ ಅಧ್ಯಕ್ಷರಾದರು. ಇದೆ ವೇಳೆ ಖಮೇನಿ ಕೂಡಾ ವಿದೇಶದಿಂದ ದೇಶಕ್ಕೆ ಮರಳಿದರು. ಈ ನಡುವೆ 1989ರಲ್ಲಿ ರೊಹಲ್ಲಾ ಖೊಮೇನಿ ನಿಧನದ ಬಳಿಕ ಖಮೇನಿ ಅಧ್ಯಕ್ಷರಾಗಿ ಆಯ್ಕೆಯಾದರು. ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಖಮೇನಿ, ಬಳಿಕ ಆಯತೊಲ್ಲಾ ಎಂಬ ಅತ್ಯುನ್ನತ ಧಾರ್ಮಿಕ ಪದವಿ ಏರಿದ್ದರು.
ದಡ್ಡ, ಮುಂಗೋಪಿ:
ವಿಚಿತ್ರವೆಂದರೆ ಬಾಲ್ಯದ ಧಾರ್ಮಿಕ ಶಿಕ್ಷಣದ ಅಧ್ಯಯನದಲ್ಲಿ ದಡ್ಡ, ಮುಂಗೋಪಿ ಎಂದೇ ಪರಿಗಣಿತ ಖಮೇನಿ ಮುಂದೆ ಇರಾನ್ ಅನ್ನು ಪಕ್ಕಾ ಇಸ್ಲಾಮಿಕ್ ದೇಶವಾಗಿ ಪರಿವರ್ತಿಸಲು ಎಲ್ಲಾ ಪ್ರಯತ್ನ ಮಾಡಿದರು. ಧಾರ್ಮಿಕ ಮೂಲಭೂತವಾದಿಗಳು ಖಮೇನಿಗೆ ದೇವರ ನಂತರದ ಅತ್ಯುನ್ನತ ಸ್ಥಾನ ನೀಡಿದ್ದರು. ಆಡಳಿತದ ಪ್ರತಿ ಹಂತದಲ್ಲಿ ಶಿಯಾ ಧಾರ್ಮಿಕರಿಗೆ ಖಮೇನಿ ಆದ್ಯತೆ ನೀಡುತ್ತಾ ಬಂದಿದ್ದರು. ತಾವು ಅಧಿಕಾರಕ್ಕೆ ಬರಲು ಕಾರಣವಾದ ರೆವಲ್ಯೂಷನರಿ ಗಾರ್ಡ್‌ಗೆ ಕೇವಲ ಸೇನೆಯ ಚುಕ್ಕಾಣಿ ನೀಡಿದ್ದು ಮಾತ್ರವಲ್ಲದೇ ದೇಶದ ಆರ್ಥಿಕತೆ ಮೇಲೆ ಹಿಡಿತ ಸಾಧಿಸಲೂ ಅವಕಾಶ ನೀಡಿದರು.
ಪರೋಕ್ಷ ಯುದ್ಧ:
ಖಮೇನಿ ಅಧಿಕಾರಕ್ಕೆ ಬಂದ ಬಳಿಕ ಸಾಂಪ್ರಾಯಿಕ ಯುದ್ಧ ತಂತ್ರಗಳ ಜೊತೆಜೊತೆಗೆ, ಇಡೀ ಮಧ್ಯಪ್ರಾಚ್ಯ ವಲಯದಲ್ಲಿ ಆಯ್ದ ಉಗ್ರ ಸಂಘಟನೆಗಳಿಗೆ ನೆರವು ನೀಡುವ ಮೂಲಕ ಪರೋಕ್ಷ ಯುದ್ಧ ತಂತ್ರ ಪಾಲಿಸತೊಡಗಿದರು. ಅದು ಲೆಬನಾನ್‌ನ ಹೆಜ್ಬುಲ್ಲಾ, ಯೆಮನ್‌ನ ಹೌತಿ ಉಗ್ರರು, ಪ್ಯಾಲೆಸ್ತೀನ್‌ನಲ್ಲಿ ಹಮಾಸ್…ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಪರಮಾಣು ಅಸ್ತ್ರ:
ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ ಪ್ರಮುಖವಾಗಿ ಕಾರಣವಾಗಿದ್ದು ಅದು ರಹಸ್ಯವಾಗಿ ಅಣ್ವಸ್ತ್ರ ತಯಾರಿಸುತ್ತಿದೆ ಎಂಬ ಗುಮಾನಿ. ಅಮೆರಿಕ ಮತ್ತು ವಿಶ್ವಸಂಸ್ಥೆಯ ನಿರ್ಬಂಧಗಳ ಹೊರತಾಗಿಯೂ ಇರಾನ್ ರಹಸ್ಯವಾಗಿ ಅಣ್ವಸ್ತ್ರ ತಯಾರಿ ಕೆಲಸ ಮಾಡುತ್ತಲೇ ಬಂದಿತ್ತು. ಇದು ಇಂಧನ ಉದ್ದೇಶದ್ದು ಎಂಬ ಖಮೇನಿ ಹೇಳಿಕೆಯನ್ನು ಅಮೆರಿಕ ಎಂದಿಗೂ ಒಪ್ಪಲೇ ಇಲ್ಲ. ಜೊತೆಗೆ ಪರಮಾಣು ಅಸ್ತ್ರ ಹೊಂದುವ ನಮ್ಮ ಯತ್ನವನ್ನು ಎಂದಿಗೂ ಕೈಬಿಡಲ್ಲ ಎಂದು ಖಮೇನಿ ಬಹಿರಂಗವಾಗಿಯೇ ಘೋಷಿಸಿದ್ದರು.
ಆಡಳಿತದುದ್ದಕ್ಕೂ ಪ್ರಗತಿಪರ ಚಿಂತನೆಗಳು, ಮಹಿಳಾ ಸ್ವಾತಂತ್ರ್ಯವನ್ನು ಹತ್ತಿಕ್ಕಲೇ ಬಂದಿದ್ದ ಖಮೇನಿ, ತಮ್ಮ ಎದುರಾಳಿಗಳನ್ನ ಮೇಲೇಳಲು ಬಿಡದಂತೆ ಸರ್ವಾಧಿಕಾರಿಯಾಗಿಯೂ ಮೆರೆದಿದ್ದರು.
ಮೊದಲ ಬಂಡಾಯ:
ಖಮೇನಿಗೆ ಮೊದಲ ಅಪಾಯ ಎದುರಾಗಿದ್ದು 1997ರಲ್ಲಿ. ಆಗ ಸುಧಾರಣಾವಾದಿ ನಾಯಕ ಮೊಹಮ್ಮದ್ ಖಟಾಮಿ ಬಹುಮತದೊಂದಿಗೆ ಅಧ್ಯಕ್ಷರಾದರು. ಜೊತೆಗೆ ದೇಶವನ್ನು ಧಾರ್ಮಿಕ ಮೂಲಭೂತದಿಂದ ಹೊರಗೆ ತರುವ ಮಾತುಗಳನ್ನು ಆಡಿದರು. ಇದು ಖಮೇನಿ – ಖಟಾಮಿ ಸಂಘರ್ಷಕ್ಕೆ ಕಾರಣವಾಯ್ತು. 2004ರ ಚುನಾವಣೆಯಲ್ಲಿ ಖಟಾಮಿ ಬೆಂಬಲಿಗರು ಚುನಾವಣೆಗೆ ನಿಲ್ಲದಂತೆ ನಿಷೇಧಿಸಿದ ಖಮೇನಿ ಆಪ್ತರು, ಅಧಿಕಾರ ಮರಳಿ ಧಾರ್ಮಿಕ ಮೂಲಭೂತವಾದಿಗಳ ಕೈಗೆ ಸಿಗುವಂತೆ ನೋಡಿಕೊಂಡರು. ಪರಿಣಾಮ 2005 ಮತ್ತು 2009ರಲ್ಲಿ ಖಮೇನಿ ಪರ ಅಹಮದಿನೇಜಾದ್ ಅಧ್ಯಕ್ಷರಾದರು.
ಆದರೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ದೇಶವ್ಯಾಪಿ ಪ್ರತಿಭಟನೆಗಳು ನಡೆದವು. ಈ ವೇಳೆ ನೂರಾರು ಜನರನ್ನು ಹತ್ಯೆಗೈದ ಆರೋಪ ಕೇಳಿಬಂತು. ಈ ನಡುವೆ 2010ರ ದಶಕದಲ್ಲಿ ದೇಶದಲ್ಲಿ ಹಣದುಬ್ಬರ ಸಮಸ್ಯೆ ಗಗನಕ್ಕೇರಿ ಸರ್ಕಾರದ ವಿರುದ್ಧ ಮತ್ತೆ ಪ್ರತಿಭಟನೆಗಳು ಆರಂಭವಾದವು. ಇದರ ಬೆನ್ನಲ್ಲೇ ಬುರ್ಖಾ ಧರಿಸದ ಕಾರಣಕ್ಕೆ 2022ರಲ್ಲಿ ಬಂಧಿತಳಾಗಿದ್ದ ಅಮಿನಿ ಪೊಲೀಸ್ ವಶದಲ್ಲಿ ಸಾವನ್ನಪ್ಪಿದ್ದು ಆಡಳಿತ ವಿರೋಧಿ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಹಬ್ಬಿಸಿತು. ಇದು ಸಾಲದೆಂಬಂತೆ 2025ರಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ ವಿರುದ್ಧ ದೇಶದ ಯುವಸಮೂದ ಬೀದಿಗಿಳಿಸಿದ್ದು ಖಮೇನಿ ಪಾಲಿಗೆ ಬಿಸಿ ತುಪ್ಪವಾಯಿತು. ಇದೇ ಸನ್ನಿವೇಶ ಬಳಸಿಕೊಂಡು ಆ ದೇಶದ ಮೇಲೆ ಮುಗಿಬಿದ್ದ ಅಮೆರಿಕ ಖಮೇನಿ ಮುಗಿಸುವಲ್ಲಿ ಯಶಸ್ವಿಯಾಗಿದೆ.