
ರಾಜ್ಯದ ಎನ್‌ಪಿಎಸ್ ನೌಕರರ ಪಿಂಚಣಿ ಸಮಸ್ಯೆಗಳ ಕುರಿತು ಪರಿಶೀಲಿಸಲು ರಚಿಸಲಾದ ಸಮಿತಿಗೆ ಅಂತಿಮ ವರದಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಬೇಕಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಆಂಧ್ರಪ್ರದೇಶ, ಹಿಮಾಚಲ ಪ್ರದೇಶದ ಮಾದರಿಗಳನ್ನು ಅಧ್ಯಯನ ಮಾಡಲಾಗುತ್ತಿದ್ದು, ಸಮಗ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ಮಂಗಳೂರು: ಪಿಂಚಣಿ ಸಂಬಂಧಿತ ನಿಯಮಗಳಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಪಿಂಚಣಿ ನಿಯಮಗಳಲ್ಲಿ ಆಗುತ್ತಿರುವ ಈ ಹೊಸ ಬದಲಾವಣೆಗಳ ಪರಿಣಾಮಗಳನ್ನು ಅರ್ಥೈಸಿಕೊಳ್ಳಲು ಹಾಗೂ ಈ ಕುರಿತು ಸಮಗ್ರ ಪರಿಹಾರವನ್ನು ನೀಡಬೇಕಾಗಿರುವುದರಿಂದ ಸಮಿತಿಯು ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಲು ಹೆಚ್ಚಿನ ಸಮಯಾವಕಾಶದ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಎನ್ ಪಿಎಸ್ ಯೋಜನೆಯಡಿ ನಿವೃತ್ತಿಯಾದ ಸರಕಾರಿ ನೌಕರರಿಗೆ ಕನಿಷ್ಠ ಪಿಂಚಣಿಯೂ ಸಿಗದೆ ತೊಂದರೆಯಾಗುತ್ತಿರುವ ಬಗ್ಗೆ ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿ ಬಗ್ಗೆ ವಿವರ ಕೇಳಿದ್ದರು.
ನೌಕರರ ಮೂಲವೇತನದ ಆಧಾರ
ಅದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಎನ್ ಪಿಎಸ್ ಯೋಜನೆಯಡಿ ನಿವೃತ್ತಿ ಹೊಂದಿದ ನೌಕರರ ಫ್ರಾನ್ ಖಾತೆಯಲ್ಲಿರುವ ಶೇ. 60 ಲಂಪ್‌ಸಮ್ ಮೊತ್ರವನ್ನು ನೌಕರರು ಹಿಂಪಡೆಯ ಬಹುದಾಗಿದೆ. ಉಳಿದ ಶೇ. 40 ಮೊತ್ತವನ್ನು Annuity Senice Provider ಹೂಡಿಕೆ ಮಾಡಿ, ಮಾಸಿಕ ಪಿಂಚಣಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ. ಎನ್ ಪಿಎಸ್ ಯೋಜನೆಯಡಿ ನಿವೃತ್ತಿಯಾಗುವ ಸರ್ಕಾರ ನೌಕರರ ಪಿಂಚಣಿಯು ನೌಕರರು ಸಲ್ಲಿಸುವ ಸೇವಾ ಅವಧಿ ಮತ್ತು ಸದರಿ ಅವಧಿಯಲ್ಲಿ ನೌಕರರ ಮೂಲವೇತನದ ಆಧಾರದ ಮೇಲೆ ಪಾವತಿಸಲ್ಪಡುವ ವಂತಿಗೆಯ ಮೇರೆಗೆ ನಿರ್ಧರಿಸಲ್ಪಡುತ್ತದೆ ಎಂದರು.
ಸಮಿತಿಯ ಸಭೆಯಲ್ಲಿ ಚರ್ಚೆ
ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೂಕ್ತ ಬದಲಾವಣೆ / ಮಾರ್ಪಾಡು ಮಾಡಲು ಸಮಗ್ರವಾಗಿ ಪರಿಶೀಲಿಸಲು ಈಗಾಗಲೇ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಸಮಿತಿಯು ಹಲವು ಬಾರಿ ಸಭೆಗಳನ್ನು ನಡೆಸಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಗೆ ಬದಲಾವಣೆ/ ಮಾರ್ಪಾಡು ಮಾಡಿರುವ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಗೆ ಅಧಿಕಾರಿಗಳನ್ನೊಳಗೊಂಡ ತಂಡಗಳು ಅಧ್ಯಯನ ನಡೆಸಿ ವರದಿಗಳನ್ನು ಸಮಿತಿಗೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎನ್‌ಪಿಎಸ್ ಯೋಜನೆಗೆ ಸೂಕ್ತ ಮಾರ್ಪಾಡುಗಳನ್ನು ಮಾಡುವ ಸಾಧ್ಯತೆಗಳ ಕುರಿತು ಮತ್ತು ಎನ್‌ಪಿಎಸ್ ಯೋಜನೆಯ ಬದಲಾಗಿ ರಾಜ್ಯದಲ್ಲಿ ಏಕೀಕೃತ ಪಿಂಚಣಿ ಯೋಜನೆಯ Unified Pension Scheme (UPS) ಸಾಧ್ಯತೆಗಳು ಮತ್ತು ಇತರೆ ವಿಷಯಗಳ ಕುರಿತು ಸಲಹೆಗಳನ್ನು ನೀಡುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಇವರುಗಳೊಂದಿಗೆ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದೆ. ಸಮಿತಿಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದರು.
ರಾಜಸ್ಥಾನ ಹಿಮಾಚಲ ಪುದೇಶ ಒಳಗೊಂಡಂತೆ ಹಲವು ರಾಜ್ಯಗಳು ಒಪಿಎಸ್ ಯೋಜನೆಯನ್ನು ಮರು ಜಾರಿ ಮಾಡಲಾಗಿದ್ದರೂ ಸಹ PFRDAರವರು ಒಪಿಎಸ್ ಮರು ಜಾರಿ ಮಾಡಿರುವ ಸದರಿ ರಾಜ್ಯಗಳು ಈಗಾಗಲೇ ಪಾವತಿಸಿರುವ ಎನ್ ಪಿಎಸ್ ವಂತಿಗೆ ಮೊತ್ತಗಳನ್ನು ಸಂಬಂಧಿಸಿದ ರಾಜ್ಯ ಸರಕಾರಗಳಿಗೆ ಹಿಂದಿರುಗಿಸಿರುವುದಿಲ್ಲ. ಕೇಂದ್ರ ಸರ್ಕಾರವು ಮಾಸಿಕ ಪಿಂಚಣಿ ಆಧಾರಿತ ಯುಪಿಎಸ್ ಯೋಜನೆಯನ್ನು ಅಳವಡಿಸಿಕೊಳ್ಳಲು ಎಲ್ಲ ರಾಜ್ಯ ಸರ್ಕಾರಗಳಿಗೆ ಅವಕಾಶ ಕಲ್ಪಿಸಿದ್ದರೂ, ಕೆಲವೇ ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ರಾಜ್ಯಗಳು ಎನ್ ಪಿಎಸ್ ಯೋಜನೆಯನ್ನೇ ಮುಂದುವರಿಸಿವೆ. ಆಂಧ್ರ ಪ್ರದೇಶವು ಓಪಿಎಸ್ ಯೋಜನೆಯನ್ನು ಅಳವಡಿಸಿಕೊಳ್ಳದೆ ಕನಿಷ್ಠ ಪಿಂಚಣಿ ಪಾವತಿಯನ್ನು ಖಾತ್ರಿಪಡಿಸುವ Guaranteed Pension Scheme ಯೋಜನೆಯನ್ನು ಜಾರಿಗೊಳಿಸಿದೆ. ಇತ್ತೀಚೆಗೆ ತಮಿಳುನಾಡು ಸರಕಾರ ಕೂಡ OPS ಯೋಜನೆಯನ್ನು ಅಳವಡಿಸಿಕೊಳ್ಳದೇ Tamil Nadu Assured Pension Scheme (TAPS) ಯೋಜನೆಯನ್ನು ಜಾರಿಗೊಳಿಸಿದೆ ಎಂದರು.
ಕೇಂದ್ರ ಸರ್ಕಾರವು ಮಾರ್ಪಡಿಸಿದ ಪಿಂಚಣಿ ಯೋಜನೆಯಾದ Unified Pension Scheme (UPS) ನ್ನು ಜಾರಿಹಗೊಳಿಸಿರುತ್ತಾರೆ. UPS ಅನ್ನು ಜಾರಿಗೊಳಿಸಿದ ನಂತರವೂ ಸಹ ಎನ್ ಪಿಎಸ್ ಯೋಜನೆಗೆ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಆದಾಗ್ಯೂ NPS ಯೋಜನೆಯ ಅಧಿಕಾರಿಗಳು/ನೌಕರರುಗಳು NPS ಯೋಜನೆಯಲ್ಲೇ ಮುಂದುವರೆಯಲು ಅಥವಾ UPS ಯೋಜನೆಗೆ ಬದಲಾಯಿಸಿಕೊಳ್ಳಲು ಆಯ್ಕೆ ನೀಡಲಾಗಿದೆ. ಆದ್ದರಿಂದ ಪಿಂಚಣಿ ಸಂಬಂಧಿತ ನಿಯಮಗಳಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ ಎಂದರು.
ಸರ್ಕಾರಿ ನೌಕರರ ಕರ್ತವ್ಯದ ವೇಳೆಯಲ್ಲಿ ಸಾರ್ವಜನಿಕರಿಂದ ನಡೆಯುವ ಹಲ್ಲೆ ದೌರ್ಜನ್ಮ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕಿರುಕುಳ ಹಾಗೂ ಸರ್ಕಾರಿ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ ಕುರಿತು ಕಾಯ್ದೆ ರೂಪಿಸುವ ಪ್ರಸ್ತಾವನೆಯು ಸರ್ಕಾರದ ವರಿಶೀಲನೆಯಲ್ಲಿರುವುದಾಗಿ ಮುಖ್ಯಮಂತ್ತಿಗಳು ತಿಳಿಸಿದ್ದಾರೆ.