
China-Taiwan Conflict: ಚೀನಾದ 15 ಯುದ್ಧ ವಿಮಾನಗಳು ಗಡಿರೇಖೆ ದಾಟಿ ತೈವಾನ್ನ ವಾಯುಪ್ರದೇಶಕ್ಕೆ ನುಗ್ಗಿವೆ. ಈ ಮೂಲಕ ಚೀನಾ ಮತ್ತೆ ತೈವಾನ್ಗೆ ಪ್ರಚೋದನೆ ನೀಡಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ತೈಪೆ: ತೈವಾನ್ ಸುತ್ತಮುತ್ತ ಚೀನಾ ಸೇನೆ ಮತ್ತೆ ತನ್ನ ತಂಟೆ ಮುಂದುವರಿಸಿದೆ. ಶನಿವಾರ ಬೆಳಗ್ಗೆ 6 ಗಂಟೆಯ ಹೊತ್ತಿಗೆ, ಚೀನಾದ 17 ಯುದ್ಧ ವಿಮಾನಗಳು, ಏಳು ನೌಕಾ ಹಡಗುಗಳು ಮತ್ತು ಒಂದು ಅಧಿಕೃತ ಹಡಗು ತೈವಾನ್ನ ಸಮುದ್ರ ಗಡಿ ಬಳಿ ಪತ್ತೆಯಾಗಿವೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಈ 17 ವಿಮಾನಗಳ ಪೈಕಿ 15 ವಿಮಾನಗಳು, ಎರಡೂ ದೇಶಗಳನ್ನು ವಿಭಜಿಸುವ ಮಧ್ಯರೇಖೆಯನ್ನು ದಾಟಿ ತೈವಾನ್ನ ಉತ್ತರ ಮತ್ತು ನೈಋತ್ಯ ಭಾಗದ ವಾಯು ರಕ್ಷಣಾ ವಲಯಕ್ಕೆ ಪ್ರವೇಶಿಸಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಶುಕ್ರವಾರವೂ ಇದೇ ರೀತಿ ಚೀನಾ ನಡೆದುಕೊಂಡಿತ್ತು. ಅಂದು ಚೀನಾದ ಏಳು ಯುದ್ಧ ವಿಮಾನಗಳು ಮತ್ತು ಏಳು ಸೇನಾ ಹಡಗುಗಳು ತೈವಾನ್ ಬಳಿ ಕಾಣಿಸಿಕೊಂಡಿದ್ದವು. ಈ ಏಳೂ ವಿಮಾನಗಳು ಮಧ್ಯರೇಖೆ ದಾಟಿ ತೈವಾನ್ ವಾಯುಪ್ರದೇಶಕ್ಕೆ ನುಗ್ಗಿದ್ದವು.
ಚೀನಾ ಮತ್ತು ತೈವಾನ್ ನಡುವಿನ ಈ ಸಂಘರ್ಷಕ್ಕೆ ದೊಡ್ಡ ಐತಿಹಾಸಿಕ ಮತ್ತು ರಾಜಕೀಯ ಹಿನ್ನೆಲೆಯೇ ಇದೆ. ತೈವಾನ್ ನಮ್ಮ ದೇಶದ ಅವಿಭಾಜ್ಯ ಅಂಗ ಎಂದು ಚೀನಾ ವಾದಿಸುತ್ತದೆ. ಆದರೆ, ತೈವಾನ್ ತನ್ನದೇ ಆದ ಸರ್ಕಾರ, ಸೇನೆ ಮತ್ತು ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ಸ್ವತಂತ್ರ ದೇಶವಾಗಿ ಕಾರ್ಯನಿರ್ವಹಿಸುತ್ತಿದೆ. ತೈವಾನ್ನ ಈ ನಿಲುವಿನಿಂದಾಗಿ ಸಾರ್ವಭೌಮತ್ವ ಮತ್ತು ಸ್ವ-ನಿರ್ಣಯದಂತಹ ವಿಷಯಗಳ ಬಗ್ಗೆ ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಚರ್ಚೆಗಳು ನಡೆಯುತ್ತಿವೆ ಎಂದು ಯುನೈಟೆಡ್ ಸರ್ವಿಸ್ ಇನ್ಸ್ಟಿಟ್ಯೂಷನ್ ಆಫ್ ಇಂಡಿಯಾ ಹೇಳಿದೆ. 1683ರಲ್ಲಿ ಕ್ವಿಂಗ್ ರಾಜವಂಶವು ತೈವಾನ್ ಅನ್ನು ವಶಪಡಿಸಿಕೊಂಡಾಗ ಈ ದ್ವೀಪದ ಮೇಲೆ ಚೀನಾದ ಹಕ್ಕು ಸ್ಥಾಪನೆಯಾಯಿತು. ಆದರೆ, 1895ರಲ್ಲಿ ನಡೆದ ಮೊದಲ ಚೀನಾ-ಜಪಾನ್ ಯುದ್ಧದ ನಂತರ, ಕ್ವಿಂಗ್ ರಾಜವಂಶವು ತೈವಾನ್ ಅನ್ನು ಜಪಾನ್ಗೆ ಹಸ್ತಾಂತರಿಸಿತು. ಇದರಿಂದಾಗಿ ತೈವಾನ್ 50 ವರ್ಷಗಳ ಕಾಲ ಜಪಾನ್ನ ವಸಾಹತುವಾಗಿ ಉಳಿಯಿತು.
ಎರಡನೇ ಮಹಾಯುದ್ಧದಲ್ಲಿ ಜಪಾನ್ ಸೋತ ನಂತರ, ತೈವಾನ್ ಮತ್ತೆ ಚೀನಾದ ನಿಯಂತ್ರಣಕ್ಕೆ ಬಂತು. ಆದರೆ ಈ ಅಧಿಕಾರ ಹಸ್ತಾಂತರ ಅಧಿಕೃತವಾಗಿರಲಿಲ್ಲ. 1949ರಲ್ಲಿ ಚೀನಾದಲ್ಲಿ ಅಂತರ್ಯುದ್ಧ ಮುಗಿದಾಗ, ಚೀನಾದ ಮುಖ್ಯ ಭೂಭಾಗದಲ್ಲಿ ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ’ (PRC) ಸ್ಥಾಪನೆಯಾಯಿತು. ಆಗ ‘ರಿಪಬ್ಲಿಕ್ ಆಫ್ ಚೈನಾ’ (ROC) ಸರ್ಕಾರವು ತೈವಾನ್ಗೆ ಹಿಮ್ಮೆಟ್ಟಿತು. ಇದರಿಂದಾಗಿ ಎರಡು ಆಡಳಿತಗಳು ಅಸ್ತಿತ್ವಕ್ಕೆ ಬಂದವು. ಚೀನಾದ ಮುಖ್ಯ ಭೂಭಾಗದಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ಮತ್ತು ತೈವಾನ್ನಲ್ಲಿ ರಿಪಬ್ಲಿಕ್ ಆಫ್ ಚೈನಾ. ಅಂದಿನಿಂದ ತೈವಾನ್ ಒಂದು ಸ್ವತಂತ್ರ ದೇಶದಂತೆಯೇ ಕಾರ್ಯನಿರ್ವಹಿಸುತ್ತಿದೆ.