
ಇಂಧನ ತತ್ವಾರದಿಂದ ತತ್ತರಿಸುತ್ತಿರುವ ಪಾಕಿಸ್ತಾನದಲ್ಲಿ, ಸರ್ಕಾರವು ಇಸ್ಲಾಮಾಬಾದ್ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ 30 ದಿನಗಳ ಉಚಿತ ಸಾರಿಗೆ ವ್ಯವಸ್ಥೆ ಜಾರಿಗೊಳಿಸಿದೆ. ವೆಚ್ಚ ಕಡಿತಕ್ಕಾಗಿ ಸಚಿವರ 6 ತಿಂಗಳ ಸಂಬಳ ರದ್ದುಪಡಿಸಿದ್ದು, ಸಾರ್ವಜನಿಕರ ಆಕ್ರೋಶದ ನಂತರ ಪೆಟ್ರೋಲ್ ಬೆಲೆ 80 ರೂ.ನಷ್ಟು ಇಳಿಕೆ
– ಇಂಧನ ಅಭಾವದ ಮಧ್ಯೆ ಮಹತ್ವದ ಯೋಜನೆ ಜಾರಿ
– 30 ದಿನದ ಯೋಜನೆಗೆ ಸರ್ಕಾರಕ್ಕೆ ₹35 ಕೋಟಿ ಹೊರೆ
– ಸಂಪುಟ ಸದಸ್ಯರಿಗೆ ಇನ್ನು 6 ತಿಂಗಳ ಸಂಬಳ ಕಟ್- ಆಕ್ರೋಶದ ಬಳಿಕ ಪೆಟ್ರೋಲ್ ದರದಲ್ಲಿ 80 ರು. ಇಳಿಕೆ
ಇಸ್ಲಾಮಾಬಾದ್: ಮಧ್ಯಪ್ರಾಚ್ಯ ಸಂಘರ್ಷದ ಕಾರಣ ಇಂಧನ ತತ್ವಾರದಿಂದ ತತ್ತರಿಸುತ್ತಿರುವ ಪಾಕಿಸ್ತಾನದಲ್ಲಿ, ಕರ್ನಾಟಕದ ‘ಶಕ್ತಿ’ ಯೋಜನೆಯ ಮಾದರಿಯಲ್ಲೇ, ಸಾರ್ವಜನಿಕರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಶನಿವಾರದಿಂದ ಜಾರಿಗೊಳಿಸಲಾಗಿದೆ. ಈ ನಡುವೆ, ವೆಚ್ಚ ಕಡಿತದ ಭಾಗವಾಗಿ ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ 6 ತಿಂಗಳ ಕಾಲ ಸಂಬಳವನ್ನು ಸರ್ಕಾರ ರದ್ದುಪಡಿಸಿದೆ.
ಶುಕ್ರವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಶೆಹಬಾಜ್ ಷರೀಫ್, ‘ಇಸ್ಲಾಮಾಬಾದ್ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಶನಿವಾರದಿಂದ ಮುಂದಿನ 30 ದಿನಗಳವರೆಗೆ ಜನರಿಗೆ ಎಲ್ಲಾ ಸಾರ್ವಜನಿಕ ಸಾರಿಗೆಯನ್ನು ಉಚಿತವಾಗಿ ಒದಗಿಸಲಾಗುವುದು. ಇದರ 35 ಕೋಟಿ ರು.ಗಳನ್ನು ಸರ್ಕಾರವೇ ಭರಿಸುತ್ತದೆ. ವೆಚ್ಚ ಕಡಿತದ ಉದ್ದೇಶದಿಂದ ಸಂಪುಟ ಸದಸ್ಯರಿಗೆ 6 ತಿಂಗಳ ಸಂಬಳವನ್ನು ರದ್ದುಪಡಿಸುತ್ತಿದ್ದೇವೆ’ ಎಂದು ಘೋಷಿಸಿದ್ದಾರೆ. ಇನ್ನು ಸಿಂಧ್ ಪ್ರಾಂತ್ಯದಲ್ಲಿ ಬೈಕ್ ಚಾಲಕರು ಮತ್ತು ಸಣ್ಣ ರೈತರಿಗೆ ವಿಶೇಷ ಸಬ್ಸಿಡಿ ಘೋಷಿಸಲಾಗಿದೆ.
ಪೆಟ್ರೋಲ್ ದರ ಇಳಿಕೆ:
ಇದೇ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮಾಡಿದ ಭಾರೀ ಏರಿಕೆಗೆ ದೇಶವ್ಯಾಪಿ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೆಟ್ರೋಲ್ ಬೆಲೆಯನ್ನು 80 ರು.ನಷ್ಟು ಇಳಿಸುವುದಾಗಿಯೂ ಪಾಕ್ ಸರ್ಕಾರ ಘೋಷಿಸಿದೆ. ಆದರೆ ಡೀಸೆಲ್ ಬೆಲೆಯಲ್ಲಿ ಯಾವುದೇ ಇಳಿಕೆ ಮಾಡಿಲ್ಲ. ಶುಕ್ರವಾರ ಪಾಕ್ ಸರ್ಕಾರ ಪೆಟ್ರೋಲ್ ಬೆಲೆಯನ್ನು ಳೀಗೆ 138 ಮತ್ತು ಡೀಸೆ4ಲ್ ಬೆಲೆಯನ್ನು 185 ರುನಷ್ಟು ಭಾರೀ ಏರಿಕೆ ಮಾಡಿತ್ತು.