16ರೊಳಗಿನ ಮಕ್ಕಳಿಗೆ ಜಾಲತಾಣ ನಿಷೇಧ: 18ವರ್ಷದೊಳಗಿನವರಿಗೆ ಸಿಗರೇಟ್ ಮಾರಾಟ ಬ್ಯಾನ್ ಎಷ್ಟು ಪರಿಣಾಮಕಾರಿಯಾಗಿದೆ | Ban On Social Media For Children Under 16 Is A Timely Decision Psychiatrist Dr Pv Bhandary

16ರೊಳಗಿನ ಮಕ್ಕಳಿಗೆ ಜಾಲತಾಣ ನಿಷೇಧ: 18ವರ್ಷದೊಳಗಿನವರಿಗೆ ಸಿಗರೇಟ್ ಮಾರಾಟ ಬ್ಯಾನ್ ಎಷ್ಟು ಪರಿಣಾಮಕಾರಿಯಾಗಿದೆ | Ban On Social Media For Children Under 16 Is A Timely Decision Psychiatrist Dr Pv Bhandary



16ರೊಳಗಿನ ಮಕ್ಕಳಿಗೆ ಜಾಲತಾಣ ನಿಷೇಧ: 18ವರ್ಷದೊಳಗಿನವರಿಗೆ ಸಿಗರೇಟ್ ಮಾರಾಟ ಬ್ಯಾನ್ ಎಷ್ಟು ಪರಿಣಾಮಕಾರಿಯಾಗಿದೆ | Ban On Social Media For Children Under 16 Is A Timely Decision Psychiatrist Dr Pv Bhandary

ರಾಜ್ಯ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸುವ ಕುರಿತು ರೂಪಿಸುತ್ತಿರುವ ಡಿಜಿಟಲ್ ನೀತಿಯನ್ನು ಮನೋವೈದ್ಯ ಡಾ. ಪಿ.ವಿ. ಭಂಡಾರಿ ಸ್ವಾಗತಿಸಿದ್ದಾರೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಯು ಗಂಭೀರ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಈ ಕ್ರಮ ಸಮಯೋಚಿತವಾಗಿದೆ ಎಂದು ಅವರು ಹೇಳಿದ್ದಾರೆ.

ಉಡುಪಿ: ರಾಜ್ಯ ಸರ್ಕಾರ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿಷೇಧ ವಿಧಿಸುವ ಕುರಿತು ಡಿಜಿಟಲ್ ನೀತಿಯನ್ನು ರೂಪಿಸಲು ತೀರ್ಮಾನಿಸಿರುವುದಕ್ಕೆ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಸ್ವಾಗತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಮನೋವೈದ್ಯನಾಗಿ ನಾನು ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಬಳಕೆ ಗಂಭೀರ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತಿದಿನವೂ 18 ವರ್ಷದೊಳಗಿನ ಇಬ್ಬರು ಮಕ್ಕಳಲ್ಲಿ ಮಾನಸಿಕ ಆರೋಗ್ಯ

ಆಸ್ಪತ್ರೆಯ ವಾರ್ಡ್‌ಗಳಲ್ಲಿ ಪ್ರತಿದಿನವೂ 18 ವರ್ಷದೊಳಗಿನ ಇಬ್ಬರು ಮಕ್ಕಳಾದರೂ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ದಾಖಲಾಗುತ್ತಿರುವುದು ಕಂಡು ಬರುತ್ತಿದೆ. ಇದರ ಹಿಂದೆ ಪ್ರಮುಖ ಕಾರಣವಾಗಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಇರುವುದನ್ನು ಅವರು ಉಲ್ಲೇಖಿಸಿದರು. ಸೋಷಿಯಲ್ ಮೀಡಿಯಾದ ಮೂಲಕ ಅಪರಿಚಿತ ವ್ಯಕ್ತಿಗಳ ಸಂಪರ್ಕಕ್ಕೆ ಬಿದ್ದು ಮೋಸ ಹೋಗಿರುವ ಮಕ್ಕಳ ಪ್ರಕರಣಗಳೂ ಕಂಡು ಬರುತ್ತಿವೆ. ಈ ಹಿನ್ನೆಲೆ ಸರ್ಕಾರ ತೆಗೆದುಕೊಂಡಿರುವ ಕ್ರಮ ಸಮಯೋಚಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆದಾಗ್ಯೂ, ಈ ನಿರ್ಧಾರ ತಕ್ಷಣವೇ ಯಾವ ಮಟ್ಟಿನ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ನಮ್ಮ ದೇಶದಲ್ಲಿ 18 ವರ್ಷದೊಳಗಿನವರಿಗೆ ಬೀಡಿ, ಸಿಗರೇಟ್ ಮಾರಾಟ ಮಾಡಬಾರದು ಎಂಬ ಕಾನೂನು ಈಗಾಗಲೇ ಇದೆ. ಆದರೆ ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ರೀತಿಯಲ್ಲಿ ಸಾಮಾಜಿಕ ಜಾಲತಾಣ ಬಳಕೆಯ ಮೇಲಿನ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಸವಾಲಿನ ವಿಷಯವಾಗಬಹುದು ಎಂದು ತಿಳಿಸಿದರು.

ಮೊಬೈಲ್ ಫೋನ್ ಒಂದು ಖಾಸಗಿ ಸ್ವತ್ತು ಆಗಿರುವುದರಿಂದ ಅದರಲ್ಲಿ ಮಕ್ಕಳು ಏನು ನೋಡುತ್ತಿದ್ದಾರೆ, ಯಾವ ವಿಷಯಗಳನ್ನು ಬಳಕೆ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚುವುದು ಸುಲಭವಲ್ಲ. ಆದ್ದರಿಂದ ಈ ನಿಯಮವನ್ನು ಯಶಸ್ವಿಯಾಗಿ ಜಾರಿಗೆ ತರುವುದಕ್ಕೆ ಪೋಷಕರು, ಶಿಕ್ಷಕರು ಹಾಗೂ ಶಾಲಾ ಆಡಳಿತದ ಸಹಕಾರ ಅತ್ಯಗತ್ಯವಾಗಿದೆ ಎಂದು ಡಾ. ಭಂಡಾರಿ ಹೇಳಿದರು.

ಈಗಾಗಲೇ ಕೆಲವು ಪ್ರತಿಷ್ಠಿತ ಶಾಲೆಗಳು ವಿದ್ಯಾರ್ಥಿಗಳು ಮೊಬೈಲ್ ಫೋನ್ ತೆಗೆದುಕೊಂಡು ಶಾಲಾ ಆವರಣಕ್ಕೆ ಪ್ರವೇಶಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿವೆ ಎಂದು ಅವರು ಹೇಳಿದರು. ಸರ್ಕಾರಿ ಶಾಲೆಗಳಲ್ಲಿಯೂ ಸಹ ಶಾಲೆಯೊಳಗೆ ಮೊಬೈಲ್ ಬಳಕೆಯನ್ನು ನಿರ್ಬಂಧಿಸುವ ಕ್ರಮಗಳು ಕಂಡು ಬರುತ್ತಿವೆ. ಆದರೆ ಶಾಲೆಯ ಹೊರಗಿನ ಪರಿಸ್ಥಿತಿಯಲ್ಲಿ ಮಕ್ಕಳ ಮೊಬೈಲ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕುವುದು ಅಷ್ಟು ಸುಲಭವಲ್ಲ ಎಂದು ಅವರು ಅಭಿಪ್ರಾಯಪಟ್ಟರು. 

ಈಗಿನಿಂದಲೇ ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನ ಮಾಡಬೇಕು

ಈ ನಿಯಮವನ್ನು ಕಾನೂನಿನ ರೂಪದಲ್ಲಿ ತರಲಾಗಿದರೆ, ಕನಿಷ್ಠ ಮುಂದಿನ ಪೀಳಿಗೆಯಾದರೂ ನಿಯಂತ್ರಣಕ್ಕೆ ಬರಲು ಸಾಧ್ಯ. ಈಗಿನ ಟೀನೇಜರ್‌ಗಳ ಮೇಲೆ ತಕ್ಷಣವೇ ಪರಿಣಾಮ ಬೀರುವುದು ಕಷ್ಟವಾಗಬಹುದು. ಆದರೆ 10 ರಿಂದ 12 ವರ್ಷದ ಮಕ್ಕಳನ್ನು ಈಗಿನಿಂದಲೇ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು ಎಂದು ಡಾ. ಭಂಡಾರಿ ಹೇಳಿದರು.

ಅವಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸುವ ಕಾನೂನು ಬಂದರೆ, ಕನಿಷ್ಠ ಕೆಲವು ಮಕ್ಕಳು ಮತ್ತು ಯುವಕರು ಭಯದಿಂದಾದರೂ ಅದರಿಂದ ದೂರ ಉಳಿಯುವ ಸಾಧ್ಯತೆ ಇದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಯುವಕರು ಆತಂಕ (Anxiety), ಖಿನ್ನತೆ (Depression) ಮುಂತಾದ ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿರುವುದನ್ನು ಗಮನಿಸಬಹುದು ಎಂದು ಅವರು ತಿಳಿಸಿದರು. ಅತಿಯಾದ ಮೊಬೈಲ್ ಬಳಕೆಯಿಂದ ಕೆಲವರು ಅದನ್ನು ಬಿಡಲಾಗದ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ಇದರಿಂದಾಗಿ ಕೆಲವು ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜು ಶಿಕ್ಷಣವನ್ನು ಸಹ ಮಧ್ಯದಲ್ಲೇ ತೊರೆಯುವ ಘಟನೆಗಳು ನಡೆಯುತ್ತಿವೆ ಎಂದು ಅವರು ಎಚ್ಚರಿಸಿದರು.

ಒಟ್ಟಾರೆ, ಮಕ್ಕಳ ಮಾನಸಿಕ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಜನಪರವಾಗಿದ್ದು, ಸಮಾಜದ ಹಿತದೃಷ್ಟಿಯಿಂದ ಇದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಮನೋವೈದ್ಯ ಡಾ. ಪಿ.ವಿ. ಭಂಡಾರಿ ಅಭಿಪ್ರಾಯಪಟ್ಟರು.



Source link

Leave a Reply

Your email address will not be published. Required fields are marked *