
ತಮಿಳುನಾಡಿನ ಸೇಲಂ-ಕೊಯಮತ್ತೂರು ಹೆದ್ದಾರಿಯಲ್ಲಿ ಸರ್ಕಾರಿ ಬಸ್‌ನ ಬ್ರೇಕ್ ಫೇಲ್ ಆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಗರ್ಭಿಣಿ ಮತ್ತು 11 ತಿಂಗಳ ಹಸುಗೂಸು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚೆನ್ನೈ (ಮಾ.20): ತಮಿಳುನಾಡಿನ ಸೇಲಂ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆ ಸಂಭವಿಸಿದ ಸರಣಿ ಅಪಘಾತದಲ್ಲಿ ಗರ್ಭಿಣಿ ಮತ್ತು 11 ತಿಂಗಳ ಹಸುಗೂಸು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ. ಸರ್ಕಾರಿ ಬಸ್‌ನ ಬ್ರೇಕ್ ಫೇಲ್ ಆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಶುಕ್ರವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಉತ್ತಮಚೋಳಪುರಂ ಬಳಿ ಈ ಘಟನೆ ನಡೆದಿದೆ. ಈರೋಡ್‌ನಿಂದ ಸೇಲಂಗೆ ತೆರಳುತ್ತಿದ್ದ ಸರ್ಕಾರಿ ಬಸ್‌ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅಯ್ಯಂದುರೈ ಎಂಬುವವರು ಚಲಾಯಿಸುತ್ತಿದ್ದ ಈ ಬಸ್‌ನ ಬ್ರೇಕ್ ಹಠಾತ್ ಕೈಕೊಟ್ಟಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದೆ. ವೇಗವಾಗಿ ಬಂದ ಬಸ್ ಡಿವೈಡರ್ ದಾಟಿ ವಿರುದ್ಧ ದಿಕ್ಕಿನ ರಸ್ತೆಗೆ ನುಗ್ಗಿ, ಅಲ್ಲಿ ಬರುತ್ತಿದ್ದ ಒಂದು ದ್ವಿಚಕ್ರ ವಾಹನ ಮತ್ತು ಪಿಕಪ್ ವ್ಯಾನ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಹಬ್ಬಕ್ಕೆ ತೆರಳುತ್ತಿದ್ದವರ ಬಾಳಲ್ಲಿ ಕತ್ತಲು
ಪಿಕಪ್ ವ್ಯಾನ್‌ನಲ್ಲಿ ನೈಕಾರಪಟ್ಟಿಯಿಂದ ಕಲ್ಪಾರಪಟ್ಟಿಗೆ ದೇವಾಲಯದ ಹಬ್ಬವೊಂದರಲ್ಲಿ ಪಾಲ್ಗೊಳ್ಳಲು 11 ಜನರು ತೆರಳುತ್ತಿದ್ದರು. ಬಸ್ ಡಿಕ್ಕಿಯಾದ ರಭಸಕ್ಕೆ ವ್ಯಾನ್ ನುಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ವ್ಯಾನ್‌ನಲ್ಲಿದ್ದವರ ಪೈಕಿ ಮೂರು ತಿಂಗಳ ಗರ್ಭಿಣಿ ಸತ್ಯ (25), 11 ತಿಂಗಳ ಹೆಣ್ಣು ಮಗು ಮತ್ತು 5 ವರ್ಷದ ಬಾಲಕಿ ನಿತಿಷ್ಕಾ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಇನ್ನು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಮೂವರು ಕೂಡ ಈ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ.
ಚಾಲಕನ ಬಂಧನ
ಅಪಘಾತದ ನಂತರ ಸ್ಥಳೀಯರು ಮತ್ತು ದಾರಿಹೋಕರು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು, ಗಾಯಾಳುಗಳನ್ನು ಸಮೀಪದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಎಂಟು ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದ ಬಸ್ ಚಾಲಕ ಅಯ್ಯಂದುರೈ ಅವರನ್ನು ಪೊಲೀಸರು ನಂತರ ಬಂಧಿಸಿದ್ದಾರೆ.
Scroll to load tweet…