
70-80ರ ದಶಕದಲ್ಲಿ ಆ ‘ಬೆಂಗಳೂರು ಡ್ರೈವ್ ಇನ್’ ನೋಡಿದ್ದೀರಿ, ಅಲ್ಲಿ ಕುಳಿತು ಏನೆಲ್ಲಾ ಅನುಭವಿಸಿದ್ದೀರಿ? ಯಾರೆಲ್ಲಾ ಆ ಮೂರು ಚಕ್ರದ ವಾಹನದಲ್ಲಿ ಪ್ರಯಾಣ ಮಾಡಿದ್ದೀರಿ, ಯಾರೆಲ್ಲಾ ಆಗಿನ ಡಬಲ್ ಡೆಕ್ಕರ್ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದೀರಿ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ..
ಬೆಂಗಳೂರಿನ ಡೇರಿ ಸರ್ಕಲ್ ಬಳಿ ಜಯನಗರಕ್ಕೆ ಹೋಗುವ ರಸ್ತೆಯಲ್ಲಿ 1970-80ರ ದಶಕದಲ್ಲಿ ಒಂದು ಥಿಯೇಟರ್ ಇತ್ತು!
‘ಸಿಲಿಕಾನ್ ಸಿಟಿ’ ಬೆಂಗಳೂರು ಈಗ ಬಹಳಷ್ಟು ಬದಲಾಗಿದೆ. ಕೆಲವೊಂದು ವಿಷಯಗಳನ್ನು ಹೇಳಿದರೂ ನಂಬೋದು ಕಷ್ಟ ಎಂಬಂತಾಗಿದೆ. ಹಳೆಯ ರಸ್ತೆಗಳು, ಹಳೆಯ ಮರಗಿಡಗಳು ಈಗ ಇಲ್ಲವೇ ಇಲ್ಲ ಬಿಡಿ. ಹಲವು ಕೆರೆಗಳು, ಬೋಟಿಂಗ್, ಹಲವು ದೇವಸ್ಥಾನಗಳು ಈಗ ಮಾಯವಾಗಿವೆ. ಅಷ್ಟೇ ಅಲ್ಲ, ಹಲವಾರು ನಾಟಕದ ಟೆಂಟ್‌ಗಳು, ಸಿನಿಮಾ ಥಿಯೇಟರ್‌ಗಳೂ ಕೂಡ ಈಗ ಇಲ್ಲವೇ ಇಲ್ಲ. ಅಂಥದ್ದೊಂದು ಸಿನಿಮಾ ಥಿಯೇಟರ್ ಬಗ್ಗೆ ಇಲ್ಲಿ ತಿಳಿದುಕೊಳ್ಳಿ..
ಹೌದು, ಬೆಂಗಳೂರಿನ ಡೇರಿ ಸರ್ಕಲ್ ಬಳಿ ಜಯನಗರಕ್ಕೆ ಹೋಗುವ ರಸ್ತೆಯಲ್ಲಿ 1970-80ರ ದಶಕದಲ್ಲಿ ಒಂದು ಥಿಯೇಟರ್ ಇತ್ತು. ಅದು ಎಲ್ಲಿ ಯಾವತ್ತಿನಿಂದ ಇತ್ತು ಎಂಬುವುದರ ಬಗ್ಗೆ ಸರಿಯಾದ ಮಾಹಿತಿ ಎಂದರೆ, ಅದು 1970 ರಿಂದ 1994ರವರೆಗೆ ಅದು ಚಾಲ್ತಿಯಲ್ಲಿ ಇತ್ತು. ಆದರೆ, 70-80ರ ದಶಕದಲ್ಲಿ ಅಲ್ಲಿ ಬಹಳಷ್ಟು ಸಿನಿಮಾಗಳ ಪ್ರದರ್ಶನ ನಡೆಯುತ್ತಿತ್ತು, ಅಲ್ಲಿ ಸಾಕಷ್ಟು ಸಿನಿಮಾಗಳ ಶೂಟಿಂಗ್ ಕೂಡ ನಡೆದಿತ್ತು. ಅದೇ ಸಿನಿಮಾ ಥಿಯೇಟರ್‌ಅನ್ನು ಹಲವಾರು ಸಿನಿಮಾಗಳಲ್ಲಿ ನೋಡಿದವರು ಈಗಲೂ ಇದ್ದಾರೆ. ಆ ಸಿನಿಮಾ ಮಂದಿರದ ಹೆಸರು ಬೆಂಗಳೂರು ಡ್ರೈವ್ ಇನ್ (BANGALORE DRIVE – IN).
ಹೌದು, ಈ ಬೆಂಗಳೂರು ಡ್ರೈವ್ ಇನ್ ಥಿಯೇಟರ್ ಅಂದಿನ ಕಾಲದಲ್ಲಿ ಭಾರೀ ಪ್ರಸಿದ್ಧಿ ಪಡೆದಿತ್ತು. ಏಕೆಂದರೆ, ಅದು ಬೇರೆ ಎಲ್ಲಾ ಸಿನಿಮಾ ಮಂದಿರಗಳಿಗೆ ಹೋಲಿಸಿದಾಗ ತುಂಬಾ ವಿಭಿನ್ನವಾಗಿತ್ತು. ಅಲ್ಲಿ ಬಹಳಷ್ಟು ಕಾರುಗಳನ್ನು ಪಾರ್ಕ ಮಾಡಬಹುದಿತ್ತು. ರುಚುಕಟ್ಟಾದ ಮಸಾಲೆ ದೋಸೆ ಸಿಗುತ್ತಿತ್ತು. ಯಾವಾಗಲೂ ಹೊರಗಡೆ ತುಂಬಾ ಲೈಟ್ ಇರುತ್ತಿತ್ತು. ಜೊತೆಗೆ, ಅಲ್ಲಿಗೆ ಬಸ್ ಸೌಲಭ್ಯ ಕೂಡ ಚೆನ್ನಾಗಿತ್ತು. ಜೊತೆಗೆ, ಸಿನಿಮಾ ಮಂದಿರದ ಕಂಪೌಂಡ್ ಹಾರಿ ಹೊರಗಡೆ ಕುಳಿತು ಕೂಡ ಸಿನಿಮಾ ನೋಡಬಹುದಿತ್ತು. ಯಾವುದೇ ಥಿಯೇಟರ್ ಇಲ್ಲದ ರೀತಿಯಲ್ಲಿ ಅದಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಇದೀಗ ಶೇರ್ ಆಗಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವು ಆ ಸಿನಿಮಾ ಮಂದಿರವನ್ನು ಕಾಣಬಹುದು. ಅದು ಅನಂತ್ ನಾಗ್ ಹಾಗೂ ಆರತಿ ನಟಿಸಿರುವ ‘ಪ್ರೇಮಾಯಣ’ ಹಾಗೂ ಡ್ರೈವರ್ ಹನುಮಂತು’ ಸಿನಿಮಾಗಳ ವಿಡಿಯೋ. ಅದರಲ್ಲಿ ಈ ಥಿಯೇಟರ್ ಮುಂದೆ ಶೂಟಿಂಗ್ ಮಾಡಲಾಗಿತ್ತು. ಆ ಸಿನಿಮಾದಲ್ಲಿ ಅಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ಡಬ್ಬಲ್ ಡೆಕ್ಕರ್ ಬಸ್ ಹಾಗೂ ತ್ರೀ ವ್ಹೀಲರ್ () ವಾಹನವನ್ನು ಕೂಡ ನೋಡಬಹುದು. ಅಂದಿನ ಜನರೇಶನ್ನಿನ ಅನೇಕ ಜನರು ಡಬಲ್ ಡೆಕ್ಕರ್ ಬಸ್ ಹಾಗು ಮೂರು ಚಕ್ರದ ವಾಹನದಲ್ಲಿ ಓಡಾಡಿದ ಅನುಭವ ಹೊಂದಿದ್ದಾರೆ.
ಈ ಥೀಯೇಟರ್ ನಮ್ಮ ಮನೆಯ ಪಕ್ಕದಲ್ಲೇ ಇದೆ!
ಸಿಲಿಕಾನ್ ಸಿಟಿ.ಬೆಂಗಳೂರು (siliconcity.bengaluru) ಎಂಬ ಸೋಷಿಯಲ್ ಮೀಡಿಯಾ ಖಾತೆಯಿಂದ ಈ ವಿಡಿಯೋ ಶೇರ್ ಆಗಿದೆ. ಆ ವಿಡಿಯೋ ನೋಡಿ ಬಹುಳಷ್ಟು ಜನರು ಕಾಮೆಂಟ್ ಮಾಡಿದ್ದಾರೆ. ‘ಈ ಥೀಯೇಟರ್ ನಮ್ಮ ಮನೆಯ ಪಕ್ಕದಲ್ಲೇ ಇದೆ, ಅದರಲ್ಲಿ ಬಹಳಷ್ಟು ಸಿನಿಮಾ ನೋಡಿದ್ದೇನೆ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಆ ಬಗ್ಗೆ ‘ಆನಂದ್’ ಸಿನಿಮಾದಲ್ಲಿ ಆ ಥಿಯೇಟರ್, ಮೂರು ಚಕ್ರದ ವಾಹನ ತೋರಿಸಲಾಗಿದೆ’ ಎಂದಿದ್ದಾರೆ.
ಶ್ರೀದೇವಿ-ಅನಿಲ್ ಕಪೂರ್ ನಟನೆಯ ‘ಲಮ್ಹೆ’ ಸಿನಿಮಾದಲ್ಲಿದೆ!
ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲ, ಹಿಂದಿಯ ಸಾಕಷ್ಟು ಸಿನಿಮಾಗಳಲ್ಲೂ ಈ ಬೆಂಗಳೂರು ಡ್ರೈವ್ ಇನ್ ಸಿನಿಮಾ ಮಂದಿರ ಹಾಗೂ ಮೂರು ಚಕ್ರದ ವಾಹನವನ್ನು ಶೂಟಿಂಗ್ ಮಾಡಲಾಗಿದೆ ಎಂದು ಹಲವರು ಬರೆದಿದ್ದಾರೆ. ಶ್ರೀದೇವಿ-ಅನಿಲ್ ಕಪೂರ್ ನಟನೆಯ ‘ಲಮ್ಹೆ’ ಹಾಗೂ ಅನಿಲ್ ಕಪೂರ್-ಮಾಧುರಿ ದೀಕ್ಷಿತ್ ನಟನೆಯ ‘ಸಾಜನ್’ ಸಿನಿಮಾದಲ್ಲಿ ಕೂಡ ಈ ಥಿಯೇಟರ್ ಹಾಗೂ ‘ತ್ರೀ ವೀಲರ್ ವೆಹಿಕಲ್’ ನೋಡಬಹುದು ಎಂದು ಹಲವರು ಹೇಳಿದ್ದಾರೆ. ಒಟ್ಟಿನಲ್ಲಿ ಈಗ ಅವೆಲ್ಲಾ ಮುಗಿದ ಅಧ್ಯಾಯವಾಗಿದ್ದು, ಕೇವಲ ಹಳೆಯ ವಿಡಿಯೋ ಮೂಲಕ ನೋಡಬಹುದಷ್ಟೇ.
ಅಂದಹಾಗೆ, 70-80ರ ದಶಕದಲ್ಲಿ ಆ ಬೆಂಗಳೂರು ಡ್ರೈವ್ ಇನ್’ ಸಿನಿಮಾಮಂದಿರದಲ್ಲಿ ಯಾರೆಲ್ಲಾ ಸಿನಿಮಾ ನೋಡಿದ್ದೀರಿ, ಯಾರೆಲ್ಲಾ ಆ ಮೂರು ಚಕ್ರದ ವಾಹನದಲ್ಲಿ ಪ್ರಯಾಣ ಮಾಡಿದ್ದೀರಿ, ಯಾರೆಲ್ಲಾ ಆಗಿನ ಡಬಲ್ ಡೆಕ್ಕರ್ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದೀರಿ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ..