
ಫ್ಲೋರಿಡಾಗೆ ತೆರಳುತ್ತಿದ್ದ ಸೌತ್‌ವೆಸ್ಟ್ ವಿಮಾನದಲ್ಲಿ, ಮುಸ್ಲಿಂ ಪ್ರಯಾಣಿಕರೊಬ್ಬರ ಫೋನ್ ರಿಂಗ್ ಆಗಿದ್ದರಿಂದ ಆತಂಕ ಸೃಷ್ಟಿಯಾಯಿತು. ಈ ಘಟನೆಯಿಂದಾಗಿ ವಿಮಾನವನ್ನು ಅಟ್ಲಾಂಟಾದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಭದ್ರತಾ ತಪಾಸಣೆಯ ನಂತರ ಸತ್ಯಾಂಶ ಬಯಲಾಯಿತು.
ಮೊನ್ನೆ ಫ್ಲೋರಿಡಾಗೆ ತೆರಳುತ್ತಿದ್ದ ಸೌತ್‌ವೆಸ್ಟ್ ವಿಮಾನದಲ್ಲಿ ಪ್ರಯಾಣಿಕರು ಅತ್ಯಂತ ನೆಮ್ಮದಿಯಿಂದ ಪ್ರಯಾಣ ಮಾಡುತ್ತಿದ್ದರು. ಅವರವರ ಲೋಕದಲ್ಲಿ ಅವರು ಮುಳುಗಿದ್ದರು. ಆಗ ಪ್ರಯಾಣಿಕರಲ್ಲಿ ಒಬ್ಬರಾದ ಖಾನ್ ಸಾಹೇಬ್ರ ಫೋನ್ ರಿಂಗ್ ಆಗಿದ್ದೇ ತಡ ವಿಮಾನವೇ ಗಡಗಡ ಅಂದೋಯ್ತು. ಎಚ್ಚರಿಕೆಯ ಗಂಟೆ ಮೊಳಗಿತು. ಪ್ರಯಾಣಿಕರು ಜೀವ ಭಯದಲ್ಲಿ ತತ್ತರಿಸಿ ಹೋದರು. ಇನ್ನೇನು ತಮ್ಮ ಆಯಸ್ಸು ಕೆಲವೇ ನಿಮಿಷ ಎಂದುಕೊಂಡರು. ವಿಮಾನ ಸಿಬ್ಬಂದಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತರು. ಇನ್ನೇನು ಅನಾಹುತ ಆಗಬಹುದು ಎಂದುಕೊಂಡ ಪೈಲೆಟ್ ಸಂಬಂಧಿತ ಅಧಿಕಾರಿಗಳ ಸೂಚನೆಯ ಮೇರೆಗೆ ವಿಮಾನವನ್ನು ಅಟ್ಲಾಂಟಾಗೆ ತಿರುಗಿಸಲಾಯಿತು.
ತಮ್ಮವರನ್ನೆಲ್ಲಾ ಕೊನೆಯದಾಗಿ ನೆನೆದ ಪ್ರಯಾಣಿಕರು!
ಮಾರ್ಚ್ 6 ರಂದು ನ್ಯಾಶ್ವಿಲ್ಲೆಯಿಂದ ಹೊರಟು ಫ್ಲೋರಿಡಾದ ಫೋರ್ಟ್ ಲಾಡರ್‌ಡೇಲ್-ಹಾಲಿವುಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಸೌತ್‌ವೆಸ್ಟ್ ಏರ್‌ಲೈನ್ಸ್ ಫ್ಲೈಟ್ 2094 ನಲ್ಲಿ ಈ ಘಟನೆ ಸಂಭವಿಸಿದೆ. ಮುಸ್ಲಿಂ ವ್ಯಕ್ತಿಯೊಬ್ಬರ ಫೋನ್ ರಿಂಗ್ ಆಗುತ್ತಿದ್ದಂತೆಯೇ, ಇವೆಲ್ಲಾ ಘಟನೆಗಳು ಕ್ಷಣ ಮಾತ್ರದಲ್ಲಿ ನಡೆದು ಹೋಯಿತು. ಸಿಬ್ಬಂದಿ ತುರ್ತು ಸೂಚನೆಗಳನ್ನು ನೀಡುತ್ತಿದ್ದಂತೆ ವಿಮಾನ ತನ್ನ ದಿಕ್ಕನ್ನೇ ಬದಲಿಸಿ ಅಟ್ಲಾಂಟಾದಲ್ಲಿ ಲ್ಯಾಂಡ್ ಆಯಿತು. ಅಲ್ಲಿಗೆ ಹೋಗುವವರೆಗೆ ತಮ್ಮ ಪ್ರಾಣವೇ ಇರುವುದಿಲ್ಲ ಎಂದುಕೊಂಡು ತಾವು ನಂಬಿರುವ ದೇವರನ್ನೆಲ್ಲಾ ನೆನಪಿಸಿಕೊಳ್ಳುತ್ತಾ, ತಮ್ಮ ಮನೆಯವರನ್ನೆಲ್ಲಾ ಕೊನೆಯ ಬಾರಿ ನೆನಪಿಸಿಕೊಂಡು ಕಣ್ಣೀರಾಗುತ್ತಿದ್ದರು ಪ್ರಯಾಣಿಕರು.
ಅಟ್ಲಾಂಟಾದಲ್ಲಿ ವಿಮಾನ ಇಳಿಯುತ್ತಿದ್ದಂತೆಯೇ, ಎಲ್ಲರೂ ಓಡೋಡಿ ಜೀವವನ್ನು ಉಳಿಸಿದ ದೇವರಿಗೆ ಧನ್ಯವಾದ ಸಲ್ಲಿಸುತ್ತಿದ್ದರು. ರಿಂಗ್ ಆಗಿದ್ದ ವ್ಯಕ್ತಿಯ ಮಾತ್ರ ಬಹುಶಃ ಏನಾಯಿತು ಎಂದೇ ತಿಳಿದಿರಲಿಕ್ಕಿಲ್ಲ. ಕೊನೆಗೆ ಭದ್ರತಾ ಸಿಬ್ಬಂದಿ ಬಂದು ಪರಿಸ್ಥಿತಿ ಅವಲೋಕಿಸಿದಾಗ ಅಲ್ಲಿ ಆಗಿದ್ದೇ ಬೇರೆ!
ಅಷ್ಟಕ್ಕೂ ಆಗಿದ್ದೇನು?
ಮುಸ್ಲಿಂ ಪ್ರಯಾಣಿಕರೊಬ್ಬರು ಪ್ರಾರ್ಥನೆಗಾಗಿ ಫೋನ್ನಲ್ಲಿ ಅಲಾರಂ ಇಟ್ಟುಕೊಂಡಿದ್ದರು. ಅವರ ಪ್ರಾರ್ಥನಾ ಸಮಯದಲ್ಲಿ ಅಲಾರಾಂ ಗಂಟೆ ಅದರದ್ದೇ ಆದ ರೀತಿಯಲ್ಲಿ ಬಾರಿಸಿತ್ತು ಅಷ್ಟೇ. ಆದರೆ, ಆ ಆಲಾರಾಂನಲ್ಲಿ ಬಂದ ದನಿಯನ್ನು ಕೇಳಿ ಬಾಂಬ್ ಬ್ಲಾಸ್ಟ್ ಆಗುತ್ತದೆ ಎಂದೇ ಆ ಕ್ಷಣದಲ್ಲಿ ಎಲ್ಲರೂ ಅಂದುಕೊಂಡು ಬಿಟ್ಟರು. ಅವರನ್ನು ಭಯೋತ್ಪಾದಕರು ಎಂದು ಸಹ ಪ್ರಯಾಣಿಕರು ಅಂದುಕೊಂಡು ಕೂಗಾಟ, ಚೀರಾಟ ಎಲ್ಲವೂ ಶುರುವಾಗಿ, ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.
ಸತ್ಯ ಬಹಿರಂಗ- ಆಗಿದ್ದೇ ಬೇರೆ!
ವಿಮಾನ ಟೇಕ್ ಆಫ್ ಆದ ಸುಮಾರು 30 ನಿಮಿಷಗಳ ನಂತರ, ಈ ಘಟನೆ ನಡೆಯಿತು. ಕೊನೆಗೆ ವಿಮಾನವನ್ನು ತಿರುಗಿಸಿ ಅಲ್ಲಿ ಪ್ರಯಾಣಿಕರನ್ನು ಇಳಿಸಲಾಯಿತು. ಅಷ್ಟರಲ್ಲಿಯೇ ಬಂದ ಭದ್ರತಾ ಸಿಬ್ಬಂದಿ, ಪ್ರಯಾಣಿಕರು ತಮ್ಮ ತಲೆಗಳನ್ನು ತಗ್ಗಿಸಲು ಮತ್ತು ಕೈಗಳನ್ನು ಮೇಲಕ್ಕೆತ್ತಲು ಘೋಷಿಸಿದರು. ಆ ಬಾಂಬ್ ಇಟ್ಟುಕೊಂಡವರು ಯಾರು ಎನ್ನುವ ತಪಾಸಣೆ ಅಲ್ಲಿ ನಡೆಯಿತು. ಕೊನೆಗೆ ಇದು ಪ್ರಾರ್ಥನೆಯ ಅಲಾರಾಂ ಅಷ್ಟೇ ಎನ್ನುವುದು ತನಿಖೆಯಿಂದ ತಿಳಿದ ಬಳಿಕ, ಹೀಗೆ ತೊಂದರೆ ಸೃಷ್ಟಿಸಿದ್ದಕ್ಕೆ ಆ ವ್ಯಕ್ತಿಯನ್ನು ಕೆಳಕ್ಕೆ ಇಳಿಸಲಾಯಿತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಂತೂ ಪ್ರಯಾಣಿಕರು ಥ್ಯಾಂಕ್ ಗಾಡ್ ಎಂದು ಹೇಳಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು.