
ರಾಜ್ಯ ಸರ್ಕಾರವು ಜನಗಣತಿ ಕಾರ್ಯ ಮತ್ತು ಸಿಬ್ಬಂದಿ ಕೊರತೆಯ ಕಾರಣ ನೀಡಿ, ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸೆಪ್ಟೆಂಬರ್ 30, 2026 ರವರೆಗೆ ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ಪತ್ರ ಬರೆದಿದೆ. ಇದಕ್ಕೆ 4 ಕಾರಣಗಳನ್ನೂ ಕೊಟ್ಟಿದೆ.
ಬೆಂಗಳೂರು (ಏ.17): ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಹಲವು ವರ್ಷಗಳಿಂದ ನಿರೀಕ್ಷಿಸುತ್ತಿದ್ದ ನಗರ ಸ್ಥಳೀಯ ಸಂಸ್ಥೆಗಳ (ಗ್ರೇಟರ್ ಬೆಂಗಳೂರು ಪ್ರದೇಶ) ಚುನಾವಣೆಯು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಜನಗಣತಿ ಕಾರ್ಯ ಹಾಗೂ ಸಿಬ್ಬಂದಿಗಳ ಕೊರತೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವು ಚುನಾವಣೆಯನ್ನು ಸೆಪ್ಟೆಂಬರ್ 30, 2026 ರವರೆಗೆ ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ಪತ್ರ ಬರೆದಿದೆ.
ಸರ್ಕಾರದ ಪತ್ರದಲ್ಲೇನಿದೆ?
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಕಾರ್ಯದರ್ಶಿ ಡಾ. ಕೆ.ಜಿ. ಜಗದೀಶ್ ಅವರು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ, ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ಧತೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕಾಲಾವಕಾಶದ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಈ ಪತ್ರದ ಪ್ರಕಾರ, 1948ರ ಜನಗಣತಿ ಕಾಯ್ದೆಯಡಿ ನಡೆಯುತ್ತಿರುವ ಜನಗಣತಿ ಕಾರ್ಯಗಳಲ್ಲಿ ಇಡೀ ಆಡಳಿತ ಯಂತ್ರವು ಪ್ರಸ್ತುತ ತೊಡಗಿಸಿಕೊಂಡಿದೆ. ಜನಗಣತಿಯು ಒಂದು ಶಾಸನಬದ್ಧ ಮತ್ತು ನಿಗದಿತ ಸಮಯದೊಳಗೆ ಮುಗಿಸಬೇಕಾದ ಕಾರ್ಯವಾಗಿದ್ದು, ಎಣಿಕೆ, ಮೇಲ್ವಿಚಾರಣೆ, ತರಬೇತಿ ಮತ್ತು ಲಾಜಿಸ್ಟಿಕ್ಸ್ಗಾಗಿ ವ್ಯಾಪಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಚುನಾವಣೆ ಮುಂದೂಡಿಕೆಗೆ ಪ್ರಮುಖ ಕಾರಣಗಳು:
1. ಜನಗಣತಿ ಕಾರ್ಯದ ಒತ್ತಡ: ಇಡೀ ಜಿಲ್ಲಾ ಮತ್ತು ಕ್ಷೇತ್ರ ಮಟ್ಟದ ಆಡಳಿತ ಯಂತ್ರವು ಜನಗಣತಿಯಲ್ಲಿ ಬ್ಯುಸಿಯಾಗಿರುವುದರಿಂದ, ಚುನಾವಣಾ ಪೂರ್ವಸಿದ್ಧತಾ ಕಾರ್ಯಗಳಿಗೆ ಸಿಬ್ಬಂದಿಗಳ ಲಭ್ಯತೆ ತೀರಾ ಕಡಿಮೆ ಇದೆ ಎಂದು ಸರ್ಕಾರ ಹೇಳಿದೆ.
2. ಮತದಾರರ ಪಟ್ಟಿಯ ಪರಿಷ್ಕರಣೆ (SIR): ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯವು ಏಕಕಾಲದಲ್ಲಿ ನಡೆಯಬೇಕಿದೆ. ಈ ಕೆಲಸಕ್ಕೂ ಅದೇ ಕ್ಷೇತ್ರ ಮಟ್ಟದ ಕಾರ್ಯನಿರ್ವಾಹಕರನ್ನು ಬಳಸಿಕೊಳ್ಳಬೇಕಾಗಿರುವುದರಿಂದ ಮಾನವಶಕ್ತಿಯ ಕೊರತೆ ಎದುರಾಗಿದೆ.
3. ಶೈಕ್ಷಣಿಕ ಪರೀಕ್ಷೆಗಳ ಕರ್ತವ್ಯ: ಮೇ ಮತ್ತು ಜೂನ್ ತಿಂಗಳಲ್ಲಿ 10ನೇ ಮತ್ತು 12ನೇ ತರಗತಿಯ ಪೂರಕ ಪರೀಕ್ಷೆಗಳು ನಡೆಯಲಿವೆ. ಈ ಶೈಕ್ಷಣಿಕ ಪರೀಕ್ಷಾ ಕರ್ತವ್ಯಗಳಿಗೆ ಶಿಕ್ಷಕರು ಮತ್ತು ಸರ್ಕಾರಿ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕಾಗಿರುವುದರಿಂದ ಚುನಾವಣಾ ಕಾರ್ಯಕ್ಕೆ ಹಿನ್ನಡೆಯಾಗಲಿದೆ.
4. ನಗರೀಕರಣದ ಸವಾಲುಗಳು: ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ಮಹಾನಗರವಾಗಿದ್ದು, ಇಲ್ಲಿನ ಮತದಾರರ ಪಟ್ಟಿಯ ನಿಖರತೆ ಮತ್ತು ವಾರ್ಡ್‌ಗಳ ವಿಂಗಡಣೆಯ ಕಾರ್ಯಕ್ಕೆ ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.
ಸಮರ್ಪಕ ಸಿದ್ಧತೆಗಾಗಿ ವಿಸ್ತರಣೆ:
ಈ ಎಲ್ಲಾ ಕಾರಣಗಳಿಂದಾಗಿ, ಚುನಾವಣೆಗಳನ್ನು ಮುಕ್ತ, ನ್ಯಾಯಸಮ್ಮತ ಮತ್ತು ವ್ಯವಸ್ಥಿತವಾಗಿ ನಡೆಸಲು ಈಗಿರುವ ಕಾಲಮಿತಿಯನ್ನು ಸೆಪ್ಟೆಂಬರ್ 30, 2026 ರವರೆಗೆ ವಿಸ್ತರಿಸುವಂತೆ ಮುಖ್ಯ ಆಯುಕ್ತರು ಕೋರಿದ್ದಾರೆ. ಈ ಪ್ರಸ್ತಾವನೆಗೆ ಮುಖ್ಯ ಕಾರ್ಯದರ್ಶಿಯವರಿಂದಲೂ ಅನುಮೋದನೆ ಸಿಕ್ಕಿದ್ದು, ಈಗ ಚೆಂಡು ರಾಜ್ಯ ಚುನಾವಣಾ ಆಯೋಗದ ಅಂಗಳದಲ್ಲಿದೆ.
ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಯದೆ ಈಗಾಗಲೇ ವರ್ಷಗಳೇ ಕಳೆದಿವೆ. ಈಗ ‘ಗ್ರೇಟರ್ ಬೆಂಗಳೂರು’ ಪರಿಕಲ್ಪನೆಯಡಿ ಚುನಾವಣೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದ್ದರೂ, ಸರ್ಕಾರದ ಈ ಹೊಸ ಮನವಿಯು ಚುನಾವಣೆಗಾಗಿ ಕಾಯುತ್ತಿರು