
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರಧಾನಿ ಮೋದಿ ಜಿಎಸ್‌ಟಿ ಸರಳೀಕರಿಸಿ ತೆರಿಗೆ ಭಾರ ಕಡಿಮೆ ಮಾಡಿದ್ದನ್ನು ಶ್ಲಾಘಿಸಿದ್ದಾರೆ. ಆದರೆ, ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಪೆಟ್ರೋಲ್, ಸ್ಟ್ಯಾಂಪ್ ಡ್ಯೂಟಿ ಸೇರಿದಂತೆ ಹಲವು ವಸ್ತುಗಳ ಮೇಲೆ ಹೊಸ ತೆರಿಗೆ ಹಾಕಿ ಜನವಿರೋಧಿ ನೀತಿ ಅನುಸರಿಸುತ್ತಿದೆ.
ಬೆಂಗಳೂರು (ಸೆ.23): ‘ಜಿಎಸ್‌ಟಿ ಸರಳೀಕರಣಗೊಳಿಸಿ ಪ್ರಧಾನಿ ಮೋದಿ ಅವರು ಜನಸಾಮಾನ್ಯರ ತೆರಿಗೆ ಭಾರ ಕಡಿಮೆ ಮಾಡಿದ್ದಾರೆ. ಈಗ ರಾಜ್ಯ ಸರ್ಕಾರ ಹಾಕಿರುವ ತೆರಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಳಿಸುವರೇ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಕಳೆದ 2017ರಲ್ಲಿ ಆರಂಭವಾಗಿರುವ ಜಿಎಸ್‌ಟಿ ಒಂದು ದಿಟ್ಟ ನಿರ್ಧಾರ. ಕೋವಿಡ್ ಸಂದರ್ಭದಲ್ಲೂ ಯಾವ ರಾಜ್ಯಕ್ಕೂ ತೊಂದರೆ ಆಗದಂತೆ ನೋಡಿಕೊಂಡಿರುವ ಶ್ರೇಯಸ್ಸು ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಈಗ ಆರ್ಥಿಕ ಸುಭದ್ರತೆ ಹಿನ್ನೆಲೆಯಲ್ಲಿ ಬಹಳಷ್ಟು ವಸ್ತುಗಳಿಗೆ ತೆರಿಗೆ ವಿನಾಯತಿ ನೀಡಿದ್ದಾರೆ. ಇದು ನಿಜವಾಗಲೂ ಬಡವರ ಪರ ಸರ್ಕಾರ ಎನ್ನುವುದನ್ನು ತೋರಿಸಿದ್ದಾರೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರಗಳಿಗೆ ಜಿಎಸ್‌ಟಿ ಸಂಕಷ್ಟ : ಕೃಷ್ಣ ಬೈರೇಗೌಡ
ಆದರೆ, ಈ ಸಂದರ್ಭದಲ್ಲಿ ಕಳೆದ ಎರಡು ವರ್ಷದಲ್ಲಿ ಒಂದು ಲಕ್ಷ ಕೋಟಿ ರು. ಹೊಸ ತೆರಿಗೆಯನ್ನು ಜನರ ಮೇಲೆ ಹಾಕಿರುವ ಅಪಖ್ಯಾತಿ ಕರ್ನಾಟಕ ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರದ ಮೇಲಿದೆ. ಇವರು ಬಂದ ತಕ್ಷಣವೇ ಪೆಟ್ರೋಲ್, ಮೋಟಾರ್ ವೆಹಿಕಲ್ ತೆರಿಗೆ, ಸ್ಟ್ಯಾಂಪ್ ಡ್ಯೂಟಿ, ಅಬಕಾರಿಗೆ ಅತಿ ಹೆಚ್ಚು ತೆರಿಗೆ ಹಾಕಿದ್ದಾರೆ. ನೀರು, ಗಾಳಿ ಮೇಲೂ ತೆರಿಗೆ ಹಾಕಿದ್ದಾರೆ. ಅಷ್ಟೆ ಅಲ್ಲದೆ, ಬೆಂಗಳೂರಿನಲ್ಲಿ ಕಸದ ಮೇಲೂ ವಿಶೇಷ ತೆರಿಗೆ ಹಾಕಿದ್ದಾರೆ. ಇದೊಂದು ತೆರಿಗೆ ಭಾರ ಹಾಕಿರುವ ಜನ ವಿರೋಧಿ ಸರ್ಕಾರ ಎನ್ನುವುದು ಸ್ಪಷ್ಟ ಎಂದು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.