
Gurgaon Thar accident news: ಗುರ್ಗಾಂವ್‌ನ ಪಟೌಡಿಯಲ್ಲಿ ಅತೀಯಾದ ವೇಗದಿಂದ ಬಂದ ಮಹೀಂದ್ರಾ ಥಾರ್ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಡೆದು ಹೋಗುತ್ತಿದ್ದ 70 ವರ್ಷದ ಅಜ್ಜ ಹಾಗೂ ಅವರ ಇಬ್ಬರು ಮೊಮ್ಮಕ್ಕಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಥಾರ್ ಚಾಲಕನ ಅವಾಂತರಕ್ಕೆ ಮತ್ತೆ ಮೂರು ಬಲಿ
ಅತೀಯಾದ ವೇಗದಿಂದ ಬಂದ ಥಾರ್ ಗಾಡಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಅಜ್ಜ ಹಾಗೂ ಇಬ್ಬರು ಮೊಮ್ಮಕ್ಕಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಟ್ಟು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುರ್ಗಾಂವ್‌ನ ಪಟೌಡಿಯ ಖೋರ್ ಗ್ರಾಮದ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಮಹೀಂದ್ರಾ ಥಾರ್ ಗಾಡಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ದುರಂತವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು 70 ವರ್ಷದ ಸುಭಾಷ್ ಮತ್ತು ಅವರ ಇಬ್ಬರು ಮೊಮ್ಮಕ್ಕಳಾದ 8 ವರ್ಷದ ಇಶಾಂತ್ ಮತ್ತು 10 ವರ್ಷದ ಜೈದ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸುಭಾಷ್ ಅವರು ತಮ್ಮ ಮಗಳ ಇಬ್ಬರು ಪುತ್ರರೊಂದಿಗೆ ರಾತ್ರಿ 11:30 ರ ಸುಮಾರಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರಿಗೆ ಹಿಂದಿನಿಂದ ಥಾರ್ ಕಾರು ಡಿಕ್ಕಿ ಹೊಡೆದಿದೆ.
ಘಟನೆಯ ಬಳಿಕ ಆರೋಪಿ ಪರಾರಿ
ಇದರಿಂದ ಮೂವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಮೊದಲಿಗೆ ಪಟೌಡಿಯ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಗುರ್ಗಾಂವ್‌ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಘಟನೆಯ ಬಳಿಕ ಆರೋಪಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಬೇಸಿಗೆ ರಜೆ ಕಳೆಯಲು ಅಜ್ಜನ ಮನೆಗೆ ಬಂದ ಮಕ್ಕಳು ಅಪಘಾತಕ್ಕೆ ಬಲಿ
ಮಕ್ಕಳು ರಾಜಸ್ತಾನದ ಅಲ್ವಾರ್‌ನವರಾಗಿದ್ದು, ಈಗ ಶಾಲೆಗೆ ರಜಾದಿನವಾಗಿದ್ದು, ತಮ್ಮ ಅಜ್ಜನ ಜೊತೆಗೆ ಕಾಲ ಕಳೆಯಲು ಗುರ್ಗಾಂವ್‌ಗೆ ಬಂದಿದ್ದರು. ರಾತ್ರಿಯ ಊಟದ ನಂತರ ಮೂವರು ರಸ್ತೆ ಬದಿ ಸಣ್ಣ ವಾಕ್ ಮಾಡಿ ಬರೋಣ ಎಂದು ಹೋದವರು ಥಾರ್ ಗಾಡಿಯ ಚಾಲಕನ ಅವಾಂತರದಿಂದಾಗಿ ಮರಳಿ ಬಾರದ ಊರಿಗೆ ಪಯಣ ಬೆಳೆಸಿದ್ದಾರೆ. ಘಟನೆ ಬಳಿಕ ಚಾಲಕ ಪರಾರಿಯಾಗಿದ್ದಾನೆ ಆದರೆ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋದರನ ಭೇಟಿ ಮಾಡಿ ವಾಪಸ್ ಹೋಗುತ್ತಿದ್ದಾಗ ದುರಂತ
ಕೆಲ ವರದಿಗಳ ಪ್ರಕಾರ ಶುಭಾಷ್ ಅವರು ತಮ್ಮ ಇಬ್ಬರು ಮೊಮ್ಮಕ್ಕಳ ಜೊತೆ ತಮ್ಮ ಸೋದರನನ್ನು ಭೇಟಿ ಮಾಡಲು ಬಂದಿದ್ದರು. ರಾತ್ರಿ ಅಲ್ಲಿಂದ ವಾಪಸ್ ಹೋಗುವ ವೇಳೆ ಅವರಿಗೆ ಥಾರ್ ಗಾಡಿ ಹಿಂದಿನಿಂದ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಕೆಲ ಮೀಟರ್ ದೂರ ಹಾರಿ ಹೋಗಿದ್ದಾರೆ. ಘಟನೆಯ ಮರುದಿನ ಆರೋಪಿ 25 ವರ್ಷದ ದೀಪಾಂಶು ಎಂಬಾತನನ್ನು ಬಂಧಿಸಲಾಗಿದೆ. ಆತ ಗುರ್ಗಾಂವ್‌ನ ಗೋರಿಯಾಸ್ ನಿವಾಸಿ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬ್ಯಾಂಕ್ ಖಾತೆಗೆ ಅಚಾನಕ್ ಆಗಿ ಬಂದು ಬಿತ್ತು 10 ಕೋಟಿ: ಮಹಿಳೆ ಮಾಡಿದ್ದೇನು?
ಮಹೀಂದ್ರ ಥಾರ್ ಗಾಡಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹಲವು ಜನರ ಜೀವ ಬಲಿಯಾಗಿವೆ. ಬಹುತೇಕ ಪ್ರಕರಣಗಳಲ್ಲಿ ಅತೀವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಲೇ ದುರಂತಗಳು ಸಂಭವಿಸಿದ್ದು, ಇದು ಥಾರ್ ಮಹೀಂದ್ರ ವಾಹನದ ಚಾಲಕರ ನಿರ್ಲಕ್ಷ್ಯ ಹಾಗೂ ಉದ್ಧಟತವೇ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ರಕ್ಷಕನೇ ಭಕ್ಷಕನಾದಾಗ: ತನಗೆ ಪ್ರತಿವರ್ಷ ರಾಖಿ ಕಟ್ಟುತ್ತಿದ್ದ ವಿಧವೆಯನ್ನೇ ಕೊಂದ ಪಾಪಿ