
ಸಹಕಾರ ನಗರದಲ್ಲಿ ಜಪ್ತಿ ಮಾಡಲಾಗಿದ್ದ ‘ಲ್ಯಾಂಬೋರ್ಗಿನಿ ಹುರಾಕನ್’ ಕಾರನ್ನು ಅದರ ಮಾಲೀಕರಿಗೆ ಹಿಂದಿರುಗಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ತೆರಿಗೆ ವಂಚನೆ ಮತ್ತು ನಕಲಿ ದಾಖಲೆ ಆರೋಪದ ಮೇಲೆ ಮಾಲೀಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಬೆಂಗಳೂರು (ಮಾ.25): ಸಹಕಾರ ನಗರದಲ್ಲಿ ವಶಪಡಿಸಿಕೊಳ್ಳಲಾಗಿದ್ದ ‘ಲ್ಯಾಂಬೋರ್ಗಿನಿ ಹುರಾಕನ್’ (Lamborghini Huracan) ಕಾರನ್ನು ಒಂದು ವಾರದೊಳಗೆ ಅದರ ಮಾಲೀಕರಿಗೆ ಹಸ್ತಾಂತರಿಸುವಂತೆ ಕರ್ನಾಟಕ ಹೈಕೋರ್ಟ್ ಬುಧವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಕಾರಿನ ಮಾಲೀಕತ್ವ ಹೊಂದಿರುವ ‘H1 ಕಾರ್ ಕೇರ್’ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಈ ಆದೇಶ ಹೊರಡಿಸಿದೆ. ಅಲ್ಲದೆ, ಯಲಹಂಕ ನ್ಯೂ ಟೌನ್ ಪೊಲೀಸರು ಕಾರಿನ ಮಾಲೀಕರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನೂ ನ್ಯಾಯಾಲಯವು ರದ್ದುಗೊಳಿಸಿದೆ.
ಅರ್ಜಿದಾರರ ವಾದವೇನು?
ಈ ಕಾರನ್ನು ಸೆಪ್ಟೆಂಬರ್ 1, 2025 ರಂದು ‘ಹೊಯ್ಸಳ ಆಟೋಮೋಟಿವ್ಸ್ ಪ್ರೈವೇಟ್ ಲಿಮಿಟೆಡ್’ನಿಂದ 3,00,68,729 ರೂಪಾಯಿ ನೀಡಿ ಖರೀದಿಸಲಾಗಿತ್ತು. 2021ರಲ್ಲಿ ತಯಾರಾದ ಈ ಕಾರನ್ನು ಮೊದಲು 2022ರಲ್ಲಿ ತಾತ್ಕಾಲಿಕ ನೋಂದಣಿಯೊಂದಿಗೆ ‘ಹರ್ಷ ಇನ್ಫ್ರಾ ಕಾನ್ಸ್’ ಸಂಸ್ಥೆಗೆ ಮಾರಾಟ ಮಾಡಲಾಗಿತ್ತು. ತೆಲಂಗಾಣದಲ್ಲಿ ಕಾಯಂ ನೋಂದಣಿಗೆ ಅನುಮತಿ ಕೋರಲಾಗಿತ್ತಾದರೂ, ಅದು ನೋಂದಣಿಯಾಗದೆ ವಾಪಸ್ ಬಂದಿತ್ತು. 2025ರಲ್ಲಿ ಅರ್ಜಿದಾರರು ಖರೀದಿಸುವವರೆಗೂ ಇದನ್ನು ‘ಡೆಮೊ ವಾಹನ’ವಾಗಿ ಬಳಸಲಾಗಿತ್ತು. ಇಂದಿರಾನಗರ ಆರ್ಟಿಒ (RTO) ವ್ಯಾಪ್ತಿಯಲ್ಲಿ ಎಲ್ಲಾ ತೆರಿಗೆ ಪಾವತಿಸಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು ಎಂದು ಅರ್ಜಿದಾರರು ತಿಳಿಸಿದ್ದರು.
ಪೊಲೀಸರ ಆರೋಪವೇನು?
ಪೊಲೀಸರ ಪ್ರಕಾರ, ವಾಹನದ ಮಾಲೀಕರು ದಾಖಲೆಗಳನ್ನು ನಕಲು (Forge) ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ತೆರಿಗೆ ನಷ್ಟ ಉಂಟುಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣ ದಾಖಲಿಸಲಾಗಿದ್ದು, ಈ ದಂಧೆಯಲ್ಲಿ ಶಾಮೀಲಾಗಿರುವ ಆರ್ಟಿಒ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ವಾದಿಸಿದ್ದರು.
ನ್ಯಾಯಾಲಯದ ತೀರ್ಪು
ಫೆಬ್ರವರಿ 7, 2026 ರಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ರಂಜಿತ್ ಎನ್. ಅವರು ಯಾವುದೇ ಮುನ್ಸೂಚನೆ ನೀಡದೆ ಅರ್ಜಿದಾರರ ಮನೆಯ ಗ್ಯಾರೇಜ್ಗೆ ನುಗ್ಗಿ ವಾಹನವನ್ನು ಜಪ್ತಿ ಮಾಡಿದ್ದರು. ನ್ಯಾಯಾಲಯವು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಈ ಪ್ರಕರಣದಲ್ಲಿ ದೂರುದಾರರೇ ಆಗಿರುವ ಮೋಟಾರು ವಾಹನ ನಿರೀಕ್ಷಕರು ತಾವೇ ಖುದ್ದಾಗಿ ವಾಹನ ಜಪ್ತಿ ಮಾಡಿರುವುದು ಸರಿಯಾದ ಕ್ರಮವಲ್ಲ” ಎಂದು ಹೇಳಿದೆ. ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್, ದಾಖಲೆಗಳನ್ನು ನಕಲು ಮಾಡಿದ ಅಥವಾ ನಾಶಪಡಿಸಿದ ಇತರ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಲು ಸರ್ಕಾರಕ್ಕೆ ಮುಕ್ತ ಅವಕಾಶ ನೀಡಿದೆ.