
ಟಿ20 ವಿಶ್ವಕಪ್ ಬಳಿಕ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಭಾರತದಲ್ಲೇ ಉಳಿದಿದ್ದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ಇಂಡೀಸ್ ಆಟಗಾರರು ತವರಿಗೆ ಮರಳಿದ್ದಾರೆ. ತಡವಾಗಿ ತವರಿಗೆ ಮರಳಿರುವುದರಿಂದ, ಅವರು ಮುಂಬರುವ ಐಪಿಎಲ್ಗೆ ಮತ್ತೆ ಭಾರತಕ್ಕೆ ಆಗಮಿಸುವುದು ವಿಳಂಬವಾಗುವ ಸಾಧ್ಯತೆಯಿದೆ.
ನವದೆಹಲಿ: ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಆಗಮಿಸಿದ್ದ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ಇಂಡೀಸ್ ಆಟಗಾರರು ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಭಾರತದಲ್ಲೇ ಉಳಿದುಕೊಂಡಿದ್ದರು. ವಿಮಾನ ಸೇವೆ ವ್ಯತ್ಯಯಗೊಂಡ ಕಾರಣ ಅವರು ತವರಿಗೆ ಮರಳುವುದು ಭಾರೀ ವಿಳಂಬವಾಗಿತ್ತು. ಇದು ಮುಂಬರುವ ಐಪಿಎಲ್ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ತಡವಾಗಿ ತವರಿಗೆ ಮರಳಿರುವ ಕಾರಣ ಐಪಿಎಲ್ಗಾಗಿ ಅವರು ಮತ್ತೆ ಭಾರತಕ್ಕೆ ಆಗಮಿಸುವುದು ಕೂಡಾ ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ.
ಅರಬ್ ರಾಷ್ಟ್ರಗಳಲ್ಲಿ ವಿಮಾನ ಸಮಸ್ಯೆ ಹಿನ್ನೆಲೆ ಟಿ20 ವಿಶ್ವಕಪ್ ಮುಗಿದ ಬಳಿಕ ಭಾರತದಲ್ಲಿ ಬಾಕಿಯಾಗಿದ್ದ ದಕ್ಷಿಣ ಆಫ್ರಿಕಾ, ವೆಸ್ಟ್ಇಂಡೀಸ್ ಆಟಗಾರರ ಕೊನೆಯ ತಂಡ ತವರಿಗೆ ಪ್ರಯಾಣ ಬೆಳೆಸಿದೆ. ವಿಂಡೀಸ್ ಮಾ.1, ದ.ಆಫ್ರಿಕಾ ಮಾ.4ಕ್ಕೆ ಭಾರತದಲ್ಲಿ ತಮ್ಮ ಕೊನೆಯ ಪಂದ್ಯಗಳನ್ನಾಡಿತ್ತು. ಆದರೆ ಯುದ್ಧ ಪರಿಣಾಮ ತವರಿಗೆ ಮರಳುವುದಕ್ಕೆ ಸಾಧ್ಯವಾಗದೆ ಭಾರತದಲ್ಲಿ ಉಳಿದಿದ್ದರು. ಇದೀಗ ಶುಕ್ರವಾರ ದಕ್ಷಿಣ ಆಫ್ರಿಕಾದ 29 ಸದ್ಯಸರು ಮತ್ತು ವೆಸ್ಟ್ ಇಂಡೀಸ್ನ 16 ಮಂದಿ ತಾಯ್ನಾಡಿಗೆ ಮರಳಿದ್ದಾರೆ ಎಂದು ಐಸಿಸಿ ಖಚಿತಪಡಿಸಿದೆ. ವಿಮಾನ ರದ್ದುಗೊಂಡಿದ್ದ ಹಿನ್ನೆಲೆ ಐಸಿಸಿ ಆಟಗಾರರಿಗೆ ಚಾರ್ಟರ್ಗಳ ವ್ಯವಸ್ಥೆ ಕಲ್ಪಿಸಿತ್ತು.
ಯುದ್ದರಿಂದ ಐಪಿಎಲ್ ಮೇಲೂ ಪರಿಣಾಮ?
ಐಪಿಎಲ್ ಆರಂಭಕ್ಕೆ ಇನ್ನು 2 ವಾರ ಬಾಕಿಯಿದೆ. ವಿಂಡೀಸ್, ದ.ಆಫ್ರಿಕಾ ಆಟಗಾರರು ಈಗಷ್ಟೇ ತವರಿಗೆ ಮರಳಿರುವ ಕಾರಣ, ಅವರು ಮತ್ತೆ ಯಾವಾಗ ಭಾರತಕ್ಕೆ ಆಗಮಿಸಲಿದ್ದಾರೆ ಎಂಬುದು ಖಚಿತವಾಗಿಲ್ಲ. ತಂಡಗಳ ಅಭ್ಯಾಸ ಶಿಬಿರಗಳು ವಾರಗಳ ಮೊದಲೇ ಆರಂಭಗೊಳ್ಳುವ ಕಾರಣ, ಫ್ರಾಂಚೈಸಿಗಳಿಗೆ ಈಗ ವಿದೇಶಿ ಆಟಗಾರರ ಉಪಸ್ಥಿತಿ ಅನಿವಾರ್ಯ.ಮಾ.16ಕ್ಕೆ ಶಿಬಿರ ಶುರು:
ಐಪಿಎಲ್ನ ಎಲ್ಲಾ ತಂಡಗಳು ಈಗಾಗಲೇ ಅಭ್ಯಾಸ ಆರಂಭಿಸಿವೆ. ಆದರೆ ಪೂರ್ಣ ಪ್ರಮಾಣದ ತಂಡದ ಜೊತೆಗಿನ ಶಿಬಿರವನ್ನು ಮಾ.16ಕ್ಕೆ ಆರಂಭಿಸುವ ನಿರೀಕ್ಷೆಯಿದೆ. ಈ ಬಗ್ಗೆ ಈಗಾಗಲೇ ಆಟಗಾರರಿಗೆ ಮಾಹಿತಿ ನೀಡಲಾಗಿದ್ದು, 16ರ ಮೊದಲು ತಂಡವನ್ನು ಕೂಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಯಾವ ತಂಡಗಳಿಗೆ ಕಾಡಲಿದೆ ಸಮಸ್ಯೆ?
ವಿಂಡೀಸ್, ದ.ಆಫ್ರಿಕಾದ ಹಲವು ಆಟಗಾರರು ಐಪಿಎಲ್ನ ವಿವಿಧ ತಂಡಗಳಲ್ಲಿದ್ದಾರೆ. ಆರ್ಸಿಬಿಯಲ್ಲಿ ರೊಮಾರಿಯೊ ಶೆಫರ್ಡ್, ಚೆನ್ನೈನಲ್ಲಿ ಅಕೇಲ್ ಹೊಸೈನ್, ಡೆವಾಲ್ಡ್ ಬ್ರೆವಿಸ್, ರಾಜಸ್ಥಾನದಲ್ಲಿ ಹೆಟ್ಮೇಯರ್, ಲಖನೌ ತಂಡದಲ್ಲಿ ಮಾರ್ಕ್ರಮ್, ಮುಂಬೈನಲ್ಲಿ ರಿಕೆಲ್ಟನ್, ಡಿ ಕಾಕ್ ಸೇರಿ ಪ್ರಮುಖ ಆಟಗಾರರಿದ್ದಾರೆ. ಈ ಆಟಗಾರರು ಭಾರತಕ್ಕೆ ತಡವಾಗಿ ಆಗಮಿಸಿದರೆ ತಂಡಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು.
ಆರ್ಸಿಬಿ ವೇಗಿ ಜೋಶ್ ಹೇಜಲ್ವುಡ್ ಆಡುವ ಬಗ್ಗೆ ಇನ್ನೂ ಅನಿಶ್ಚಿತತೆ!
ಆರ್ಸಿಬಿಯ ಪ್ರಮುಖ ವೇಗಿ, ಆಸ್ಟ್ರೇಲಿಯಾದ ಜೋಶ್ ಹೇಜಲ್ವುಡ್ ಈ ಬಾರಿ ಐಪಿಎಲ್ನಲ್ಲಿ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಗಾಯದಿಂದಾಗಿ ಹಲವು ಸಮಯದಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ಹೇಜಲ್ವುಡ್, ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರು ಈಗಲೂ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಇನ್ನೂ ಅವರಿಗೆ ಫಿಟ್ನೆಸ್ ಪ್ರಮಾಣಪತ್ರ ಸಿಗದ ಕಾರಣ, ಐಪಿಎಲ್ನಲ್ಲಿ ಆಡುವ ಬಗ್ಗೆ ಅನುಮಾನವಿದೆ.