
ಹಾವೇರಿಯ ಗುತ್ತಲದಲ್ಲಿ ಮಟ್ಕಾ ದಂಧೆ ವಿರುದ್ಧ ಸಾರ್ವಜನಿಕರು ದೂರಿದಾಗ, ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರೇ ಖುದ್ದು ದಾಳಿ ನಡೆಸಿ ಬುಕ್ಕಿಯನ್ನು ಹಿಡಿದರು. ಈ ಘಟನೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಐಜಿಪಿ ರವಿಕಾಂತೇಗೌಡ ಅವರು ಗುತ್ತಲ ಪಿಎಸ್ಐ ಅವರನ್ನು ಅಮಾನತುಗೊಳಿಸಿದ್ದಾರೆ.
ಹಾವೇರಿ (ಮಾ.05): ಪೊಲೀಸ್ ಇಲಾಖೆಯ ಕೆಲಸವನ್ನು ಸ್ವತಃ ಶಾಸಕರು ಹಾಗೂ ಡೆಪ್ಯೂಟಿ ಸ್ಪೀಕರ್ ಅವರೇ ಮಾಡಬೇಕಾದ ಅನಿವಾರ್ಯತೆ ಎದುರಾದ ಬೆನ್ನಲ್ಲೇ, ಕರ್ತವ್ಯ ಲೋಪದ ಆರೋಪದಡಿ ಹಾವೇರಿ ಜಿಲ್ಲೆಯ ಗುತ್ತಲ ಪೊಲೀಸ್ ಠಾಣೆಯ ಪಿಎಸ್ಐ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಈ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ಏನಿದು ಘಟನೆ?
ಕೆಲ ದಿನಗಳ ಹಿಂದೆ ವಿಧಾನಸಭೆಯ ಉಪಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯ ಗುತ್ತಲ ಪಟ್ಟಣಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು ಶಾಸಕರನ್ನು ಮುತ್ತುವರೆದು ಗುತ್ತಲ ಪಟ್ಟಣದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಮಟ್ಕಾ ದಂಧೆಯ ಬಗ್ಗೆ ದೂರು ನೀಡಿದ್ದರು. ‘ಪಟ್ಟಣದಲ್ಲಿ ಹಗಲು-ರಾತ್ರಿ ಮಟ್ಕಾ ದಂಧೆ ನಡೆಯುತ್ತಿದೆ, ಇದರಿಂದ ನೂರಾರು ಬಡ ಕುಟುಂಬಗಳು ಬೀದಿಗೆ ಬರುತ್ತಿವೆ. ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ’ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಖುದ್ದು ಕಾರ್ಯಾಚರಣೆಗಿಳಿದ ಡೆಪ್ಯೂಟಿ ಸ್ಪೀಕರ್:
ಜನರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ರುದ್ರಪ್ಪ ಲಮಾಣಿ ಅವರು, ಅಧಿಕಾರಿಗಳಿಗೆ ಸೂಚನೆ ನೀಡುವ ಬದಲು ತಾವೇ ಖುದ್ದಾಗಿ ಅಖಾಡಕ್ಕಿಳಿದರು. ಸಾರ್ವಜನಿಕರು ತೋರಿಸಿದ ಮಟ್ಕಾ ಅಡ್ಡೆಯ ಮೇಲೆ ದಿಢೀರ್ ಭೇಟಿ ನೀಡಿದ ಅವರು, ಅಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ಬುಕ್ಕಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ದೃಶ್ಯವನ್ನು ಕಂಡು ಅಲ್ಲಿದ್ದ ಜನರೇ ದಂಗಾಗಿದ್ದರು.
ಖಾಕಿ ಪಡೆಗೆ ಮುಜುಗರ, ಪಿಎಸ್ಐ ಅಮಾನತು:
ಮಟ್ಕಾ ದಂಧೆಕೋರರನ್ನು ಹಿಡಿಯಲು ಸ್ವತಃ ಡೆಪ್ಯೂಟಿ ಸ್ಪೀಕರ್ ಅವರೇ ಬರಬೇಕಾಯಿತು ಎಂಬುದು ಪೊಲೀಸ್ ಇಲಾಖೆಗೆ ಭಾರಿ ಮುಜುಗರ ತಂದೊಡ್ಡಿತ್ತು. ‘ಪೊಲೀಸರು ಏನು ಮಾಡುತ್ತಿದ್ದಾರೆ? ಅವರ ಮೂಗಿನ ನೇರಕ್ಕೇ ದಂಧೆ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದಿದ್ದರೆ ಹೇಗೆ?’ ಎಂಬ ಸಾರ್ವಜನಿಕ ಪ್ರಶ್ನೆಗಳು ಎದ್ದಿದ್ದವು. ಈ ಹಿನ್ನೆಲೆಯಲ್ಲಿ ಗುತ್ತಲ ಠಾಣೆಯ ಪಿಎಸ್ಐ ಬಸನಗೌಡ ಬಿರಾದಾರ್ ಅವರು ತಮ್ಮ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಮತ್ತು ಕರ್ತವ್ಯ ಲೋಪ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಐಜಿಪಿ ಖಡಕ್ ಆದೇಶ:
ಪ್ರಕರಣದ ಗಾಂಭೀರ್ಯ ಅರಿತ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಿಎಸ್ಐ ಬಸನಗೌಡ ಬಿರಾದಾರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇಲಾಖೆಯ ಗೌರವಕ್ಕೆ ಧಕ್ಕೆ ತರುವ ಮತ್ತು ಅಕ್ರಮ ದಂಧೆಗಳಿಗೆ ಸಾಥ್ ನೀಡುವ ಅಧಿಕಾರಿಗಳನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ರವಾನಿಸಲಾಗಿದೆ. ಸದ್ಯ ಗುತ್ತಲ ಪಟ್ಟಣದಲ್ಲಿ ಈ ಘಟನೆ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಶಾಸಕರ ಸಮಯಪ್ರಜ್ಞೆ ಮತ್ತು ಐಜಿಪಿಯವರ ತಕ್ಷಣದ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.