
ಶುಭಮನ್ ಗಿಲ್ ಐಪಿಎಲ್ನಲ್ಲಿ 4000 ರನ್ ಪೂರೈಸಿದ ಅತಿ ಕಿರಿಯ ಆಟಗಾರನಾಗಿ, ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕನ ಆಟವಾಡಿದ ಅವರು, ಅರ್ಧಶತಕ ಸಿಡಿಸಿ ಗುಜರಾತ್ ಟೈಟನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಲಖನೌ: ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ನಲ್ಲಿ 4000 ರನ್ಗಳ ಗಡಿ ದಾಟಿದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ ಶುಭ್ಮನದ ಗಿಲ್ ಭಾಜನರಾಗಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ಸ್ಥಾಪಿಸಿದರು.
ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
ಶುಭ್ಮನ್ ಗಿಲ್ ತಮ್ಮ 26 ವರ್ಷ 216 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ, ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯವರ ದಾಖಲೆಯನ್ನು ಅವರು ಮುರಿದಿದ್ದಾರೆ. 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗ ಕೊಹ್ಲಿ ತಮ್ಮ 27 ವರ್ಷ 195 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಆ ದಾಖಲೆ ಇದೀಗ ಶುಭ್ಮನ್ ಗಿಲ್ ಪಾಲಾಗಿದೆ.
ಈ ಪಂದ್ಯದಲ್ಲಿ ಗಿಲ್ ಕೇವಲ ದಾಖಲೆ ಮಾಡಿದ್ದಲ್ಲದೆ, ತಂಡವನ್ನು ಗೆಲುವಿನ ದಡವನ್ನೂ ಸೇರಿಸಿದರು. ಲಖನೌ ನೀಡಿದ ಗುರಿ ಬೆನ್ನತ್ತಿದ ಗುಜರಾತ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ನಾಯಕನ ಆಟವಾಡಿದ ಗಿಲ್, 40 ಎಸೆತಗಳಲ್ಲಿ 56 ರನ್ ಗಳಿಸಿ ಮಿಂಚಿದರು. ಅವರ ಆಕರ್ಷಕ ಇನ್ನಿಂಗ್ಸ್ನಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿತ್ತು. ಕೇವಲ 36 ಎಸೆತಗಳಲ್ಲಿ ಅವರು ತಮ್ಮ ಅರ್ಧಶತಕ ಪೂರೈಸಿದರು. ಗಿಲ್ ಔಟಾದ ನಂತರ, ವಾಷಿಂಗ್ಟನ್ ಸುಂದರ್ ಮತ್ತು ರಾಹುಲ್ ತೆವಾಟಿಯಾ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಲಖನೌ ತಂಡದಲ್ಲಿ ಯಾವೊಬ್ಬ ಆಟಗಾರನಿಗೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಏಡನ್ ಮಾರ್ಕ್ರಮ್ 21 ಎಸೆತಗಳಲ್ಲಿ 30 ರನ್ ಗಳಿಸಿ ತಂಡದ ಟಾಪ್ ಸ್ಕೋರರ್ ಎನಿಸಿಕೊಂಡರು.
ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ ಗುಜರಾತ್ ಟೈಟಾನ್ಸ್:
ಲಖನೌ ಸೂಪರ್ ಜೈಂಟ್ಸ್ ಎದುರು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಗುಜರಾತ್ ಟೈಟಾನ್ಸ್ ತಂಡವು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಸದ್ಯ ಗುಜರಾತ್ ಟೈಟಾನ್ಸ್ ತಂಡವು ಆಡಿದ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಸೋಲುಗಳೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಇನ್ನು ಗುಜರಾತ್ ಎದುರು ಸೋಲು ಕಂಡ ಲಖನೌ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಜಾರಿದೆ. ಲಖನೌ ಕೂಡಾ ಆಡಿದ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಸೋಲುಗಳೊಂದಿಗೆ 4 ಅಂಕಗಳನ್ನು ಹೊಂದಿದೆಯಾದರೂ, ಗುಜರಾತ್ ನೆಟ್ ರನ್ರೇಟ್ ಉತ್ತಮವಾಗಿರುವುದರಿಂದ ಐದನೇ ಸ್ಥಾನದಲ್ಲಿದೆ.