
ಐಪಿಎಲ್‌ನಲ್ಲಿ ಸತತ ಮೂರು ಪಂದ್ಯಗಳನ್ನು ಸೋತು ಸಂಕಷ್ಟದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಶಾದಾಯಕ ಸುದ್ದಿಯೊಂದು ಸಿಕ್ಕಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಎಂ.ಎಸ್. ಧೋನಿ ಮತ್ತು ಡೆವಾಲ್ಡ್ ಬ್ರೆವಿಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.
ಚೆನ್ನೈ: ಐಪಿಎಲ್‌ನಲ್ಲಿ ಸತತ ಮೂರು ಮ್ಯಾಚ್ ಸೋತು ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್‌ಗೆ (CSK) ಒಂದು ಗುಡ್ ನ್ಯೂಸ್ ಸಿಕ್ಕಿದೆ. ಗಾಯದ ಸಮಸ್ಯೆಯಿಂದಾಗಿ ಮೊದಲ ಮೂರು ಪಂದ್ಯಗಳಲ್ಲಿ ಹೊರಗುಳಿದಿದ್ದ ಎಂ.ಎಸ್. ಧೋನಿ ಮತ್ತು ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಫಿಟ್ ಆಗುತ್ತಿದ್ದಾರೆ. ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಇವರಿಬ್ಬರೂ ಆಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.
ಮೊದಲ ಮೂರು ಪಂದ್ಯಗಳಿಂದ ಹೊರಗುಳಿದ ಧೋನಿ
ತೊಡೆಯ ಸ್ನಾಯು ಸೆಳೆತದ ಕಾರಣಕ್ಕೆ ಧೋನಿ ಈ ಸೀಸನ್‌ನ ಮೊದಲ ಮೂರು ಮ್ಯಾಚ್‌ಗಳನ್ನು ಮಿಸ್ ಮಾಡಿಕೊಂಡಿದ್ದರು. ಮುಂಬರುವ ದಿನಗಳಲ್ಲಿ ಧೋನಿ ಒಂದು ಪ್ರಮುಖ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಇದರಲ್ಲಿ ಪಾಸ್ ಆದರೆ, ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಧೋನಿ ತಂಡದಲ್ಲಿ ಇರುತ್ತಾರೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಇತ್ತೀಚೆಗೆ ಧೋನಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋಗಳು ಕೂಡ ವೈರಲ್ ಆಗಿದ್ದವು. ಆದರೆ, ಟೀಮ್ ಮ್ಯಾನೇಜ್‌ಮೆಂಟ್ ಅವರ ವಾಪಸಾತಿ ಬಗ್ಗೆ ಯಾವುದೇ ಅವಸರದ ನಿರ್ಧಾರ ತೆಗೆದುಕೊಂಡಿರಲಿಲ್ಲ.
ನಾಯಕ ಋತುರಾಜ್ ಗಾಯಕ್ವಾಡ್ ಕೂಡ ಧೋನಿ ವಾಪಸಾತಿ ಬಗ್ಗೆ ಸುಳಿವು ನೀಡಿದ್ದರು. ‘ಧೋನಿ ಬೇಗ ಚೇತರಿಸಿಕೊಳ್ಳುತ್ತಿದ್ದಾರೆ, ಇನ್ನು ಕೆಲವೇ ದಿನಗಳಲ್ಲಿ ಅವರು ತಂಡಕ್ಕೆ ವಾಪಸ್ ಬರುತ್ತಾರೆ ಎಂದು ಭಾವಿಸುತ್ತೇವೆ’ ಅಂತ ಆರ್‌ಸಿಬಿ ವಿರುದ್ಧದ ಟಾಸ್ ಬಳಿಕ ಋತುರಾಜ್ ಹೇಳಿದ್ದರು. ಧೋನಿ ಜೊತೆಗೆ, ದಕ್ಷಿಣ ಆಫ್ರಿಕಾದ ಆಟಗಾರ ಡೆವಾಲ್ಡ್ ಬ್ರೆವಿಸ್ ವಾಪಸಾತಿಯು ಚೆನ್ನೈ ಬ್ಯಾಟಿಂಗ್ ಲೈನ್-ಅಪ್‌ಗೆ ಮತ್ತಷ್ಟು ಬಲ ನೀಡಲಿದೆ. ಗಾಯದ ಕಾರಣ ಬ್ರೆವಿಸ್ ಈ ಸೀಸನ್‌ನಲ್ಲಿ ಇನ್ನೂ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ.
ಡೆವಾಲ್ಡ್ ಬ್ರೆವಿಸ್ ಕೂಡಾ ಕಮ್‌ಬ್ಯಾಕ್‌ಗೆ ರೆಡಿ
‘ಮುಂದಿನ ಪಂದ್ಯದ ವೇಳೆಗೆ ಬ್ರೆವಿಸ್ ಸಂಪೂರ್ಣ ಫಿಟ್ ಆಗುತ್ತಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ನಷ್ಟವಾಗಿತ್ತು’ ಎಂದು ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಸ್ಪಷ್ಟಪಡಿಸಿದ್ದಾರೆ. ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈಗೆ, ಧೋನಿ ವಾಪಸಾತಿಯು ದೊಡ್ಡ ಆತ್ಮವಿಶ್ವಾಸ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಏಪ್ರಿಲ್ 11ರಂದು ತವರಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ಸಾಕಷ್ಟು ಮಹತ್ವದೆನಿಸಿದ್ದು, ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದೆ.