
ತುಮಕೂರಿನ ಕಾರದ ಮಠದ ಪೀಠಾಧ್ಯಕ್ಷ ವೀರಬಸವ ಸ್ವಾಮೀಜಿ ನಾಪತ್ತೆಯಾಗಿದ್ದಾರೆಂಬ ವದಂತಿಗೆ ಸ್ವತಃ ಸ್ಪಷ್ಟನೆ ನೀಡಿದ್ದಾರೆ. ತಾವು ಮೌನವ್ರತದಲ್ಲಿದ್ದು ಪಾದಯಾತ್ರೆ ಮೂಲಕ ಸಿದ್ದಗಂಗಾ ಮಠಕ್ಕೆ ಬಂದಿದ್ದಾಗಿ ತಿಳಿಸಿದ್ದು, ಮಾಹಿತಿ ನೀಡದ ಕಾರಣ ಗೊಂದಲ ಉಂಟಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ತುಮಕೂರು ತಾಲೂಕಿನ ಬೆಳ್ಳಾವಿಯಲ್ಲಿರುವ ಕಾರದ ಮಠದ ಪೀಠಾಧ್ಯಕ್ಷರಾದ ವೀರಬಸವ ಸ್ವಾಮೀಜಿ ಅವರ ನಾಪತ್ತೆ ಕುರಿತಾಗಿ ಹರಿದಾಡುತ್ತಿದ್ದ ವದಂತಿಗಳಿಗೆ ಇದೀಗ ಸ್ವತಃ ಸ್ವಾಮೀಜಿಯವರೇ ಸ್ಪಷ್ಟನೆ ನೀಡಿದ್ದಾರೆ. “ನಾನು ನಾಪತ್ತೆಯಾಗಿದ್ದೇನೆ ಎಂಬುದು ಸಂಪೂರ್ಣ ವದಂತಿ. ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ,” ಎಂದು ಅವರು ತಿಳಿಸಿದ್ದಾರೆ.
ಸ್ವಾಮೀಜಿಯವರು ಸಿದ್ದಗಂಗಾ ಮಠದಲ್ಲಿ ಆಶ್ರಯ ಪಡೆದಿರುವ ವೇಳೆ ಈ ಕುರಿತು ಪ್ರತಿಕ್ರಿಯೆ ನೀಡಿದರು. “ನಾನು ಸಿದ್ದಗಂಗಾ ಮಠದ ವಿದ್ಯಾರ್ಥಿ. ಈ ಮಠದೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ. ವಿದ್ಯಾರ್ಥಿ ದಶೆಯಲ್ಲಿ ಇಲ್ಲಿಂದಲೇ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನೂ ಪಡೆದಿದ್ದೇನೆ,” ಎಂದು ಅವರು ನೆನಪಿಸಿಕೊಂಡರು.
ಪಾದಯಾತ್ರೆಯ ಮೂಲಕ ಸಿದ್ದಗಂಗಾ ಮಠಕ್ಕೆ ಆಗಮನ
ಸ್ವಾಮೀಜಿಯವರು ತಿಳಿಸಿದಂತೆ, ಅವರು ಪಾದಯಾತ್ರೆಯ ಮೂಲಕ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದಾರೆ. “ಇಂದು ಬೆಳಿಗ್ಗೆ 4:30ರ ಸುಮಾರಿಗೆ ಪಾದಯಾತ್ರೆಯಿಂದ ಮಠಕ್ಕೆ ಬಂದು, ಪೂಜ್ಯ ಶಿವಕುಮಾರ ಸ್ವಾಮಿಗಳು ಅವರ ಗದ್ದಿಗೆ ದರ್ಶನ ಪಡೆದೆ. ನಂತರ ಮಠಾಧ್ಯಕ್ಷರಾದ ಸಿದ್ದಲಿಂಗ ಮಹಾಸ್ವಾಮಿಗಳು ಅವರೊಂದಿಗೆ ಶಿವಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಿದ್ದೇನೆ,” ಎಂದು ಹೇಳಿದರು.
ಮೌನವ್ರತ ಆಚರಣೆಯಲ್ಲಿ ನಿರತರಾಗಿದ್ದ ಕಾರಣ, ಕಾರದ ಮಠದ ಪರಿಚಾರಕರಿಗೆ ಅಥವಾ ಸಂಬಂಧಿತವರಿಗೆ ಮುಂಚಿತವಾಗಿ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು. “ನಾನು ತಿಳಿಸದೇ ಬಂದಿರುವುದು ನನ್ನ ಎಡವಟ್ಟು. ಅದರಿಂದಲೇ ನಾಪತ್ತೆ ಎಂಬ ವದಂತಿ ಹರಡಿದೆ. ಇದರಿಂದ ಉಂಟಾದ ಗೊಂದಲಕ್ಕೆ ವಿಷಾದಿಸುತ್ತೇನೆ,” ಎಂದು ಹೇಳಿದರು.
ಯಾವುದೇ ರೀತಿಯ ಆತಂಕಕ್ಕೊಳಗಾಗಬಾರದು ಎಂದು ಮನವಿ
ಇದೀಗ ತಾವು ಬೆಳ್ಳಾವಿಯ ಕಾರದ ಮಠಕ್ಕೆ ಮರಳುತ್ತಿರುವುದಾಗಿ ತಿಳಿಸಿದ ಸ್ವಾಮೀಜಿಯವರು, ಭಕ್ತರು ಮತ್ತು ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೊಳಗಾಗಬಾರದು ಎಂದು ಮನವಿ ಮಾಡಿದರು. ಈ ಮೂಲಕ ತುಮಕೂರು ಜಿಲ್ಲೆಯ ಬೆಳ್ಳಾವಿಯ ಕಾರದ ಮಠದ ಸ್ವಾಮೀಜಿ ನಾಪತ್ತೆ ಪ್ರಕರಣ ಕೇವಲ ವದಂತಿಯೇ ಹೊರತು, ವಾಸ್ತವದಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ.