
ಬೆಂಗಳೂರಿನ ಬಸವನಗುಡಿಯ ಶಾಲೆಯೊಂದರಲ್ಲಿ, ಬಡ್ತಿ ನೀಡಿದ್ದಕ್ಕೆ ಅಸೂಯೆಗೊಂಡ ಉಪಪ್ರಾಂಶುಪಾಲೆಯೊಬ್ಬರು ರೌಡಿಗಳನ್ನು ಕರೆಸಿ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿ, ಅವರ ಪತಿ ಹಾಗೂ 16 ವರ್ಷದ ಮಗಳ ಮೇಲೆ ಈ ಗ್ಯಾಂಗ್ ಪೈಶಾಚಿಕವಾಗಿ ಹಲ್ಲೆ ನಡೆಸಲಾಗಿದೆ.
ಬೆಂಗಳೂರು (ಫೆ.17): ಶಿಕ್ಷಣ ನೀಡಬೇಕಾದ ವಿದ್ಯಾಸಂಸ್ಥೆಯ ಆವರಣವೊಂದು ರೌಡಿಗಳ ಅಡ್ಡೆಯಾಗಿ ಮಾರ್ಪಟ್ಟಿರುವ ಆಘಾತಕಾರಿ ಘಟನೆ ರಾಜಧಾನಿಯ ಬಸವನಗುಡಿಯಲ್ಲಿ ನಡೆದಿದೆ. ತನಗಿಂತ ಕೆಳಗಿನ ಹಂತದ ಶಿಕ್ಷಕಿಯೊಬ್ಬರಿಗೆ ಆಡಳಿತ ಮಂಡಳಿ ಬಡ್ತಿ ನೀಡಿತು ಎಂಬ ಅಸೂಯೆಯಿಂದ ಶಾಲೆಯ ಉಪಪ್ರಾಂಶುಪಾಲೆ (Vice Principal) ರೌಡಿ ಶೀಟರ್ಗಳನ್ನು ಕರೆಸಿ ಶಿಕ್ಷಕಿ, ಆಕೆಯ ಪತಿ ಮತ್ತು 16 ವರ್ಷದ ಮಗಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ:
ಬಸವನಗುಡಿಯ ಎನ್ಜಿಎಸ್ (NGS) ಶಾಲೆಯಲ್ಲಿ ರೇಷ್ಮಾ ಅಹಮದ್ ಎಂಬುವವರು ಕಳೆದ ಎರಡು ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಉತ್ತಮ ಕೆಲಸವನ್ನು ಗುರುತಿಸಿದ ಶಾಲಾ ಆಡಳಿತ ಮಂಡಳಿಯು ಇತ್ತೀಚೆಗೆ ಅವರಿಗೆ ಬಡ್ತಿ ನೀಡಿ ಪ್ರಶಂಸನಾ ಪತ್ರವನ್ನು ನೀಡಿತ್ತು. ಆದರೆ, ಈ ಬೆಳವಣಿಗೆಯು ಶಾಲೆಯ ಉಪಪ್ರಾಂಶುಪಾಲೆಯಾಗಿದ್ದ ಉಮ್ಮೇ ಕುಲ್ಸುಮ್ (A1) ಅವರಿಗೆ ಅಸಮಾಧಾನ ತಂದಿತ್ತು. ರೇಷ್ಮಾ ಅವರಿಗೆ ಕೆಲಸ ಬಿಡುವಂತೆ ಒತ್ತಾಯಿಸಿ ಕಳೆದ ಎರಡು ವರ್ಷಗಳಿಂದಲೂ ಉಮ್ಮೇ ಕುಲ್ಸುಮ್ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಶಾಲೆಗೆ ರೌಡಿಗಳನ್ನು ಕರೆಸಿದ ಪ್ರಾಂಶುಪಾಲೆ:
ಫೆಬ್ರವರಿ 13ರಂದು ಮಧ್ಯಾಹ್ನ ಸುಮಾರು 12:45ರ ವೇಳೆಗೆ ಘಟನೆ ನಡೆದಿದೆ. ಉಮ್ಮೇ ಕುಲ್ಸುಮ್ ಅವರು ರೌಡಿಗಳನ್ನು ಶಾಲೆಗೆ ಕರೆಸಿದ್ದಾರೆ. ಶಾಲೆಯೊಳಗೆ ಬಂದ ರೌಡಿಗಳು ರೇಷ್ಮಾ ಮತ್ತು ಅವರ 16 ವರ್ಷದ ಮಗಳಾದ ದಾನಿಯಾಳನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ. ಈ ವೇಳೆ ಮೊದಲೇ ಪ್ಲಾನ್ ಮಾಡಿದಂತೆ ಉಮ್ಮೇ ಕುಲ್ಸುಮ್ ಅವರ ಸಹೋದರ ಸೋಹೈಲ್ ಹಾಗೂ ರೆಹಮಾನುಲ್ಲಾ ಷರೀಫ್ ಸೇರಿದಂತೆ ಹಲವಾರು ರೌಡಿ ಶೀಟರ್ಗಳು ಶಾಲಾ ಆವರಣಕ್ಕೆ ನುಗ್ಗಿ, ದಾಂಧಲೆ ನಡೆಸಿದ್ದಾರೆ.
ಶಿಕ್ಷಕಿಯ ಬಟ್ಟೆ ಹರಿದು ಪೈಶಾಚಿಕ ಕೃತ್ಯ:
ವಿದ್ಯಾರ್ಥಿಗಳ ಮುಂದೆಯೇ ರೇಷ್ಮಾ ಅವರ ಮೇಲೆ ಹಲ್ಲೆ ನಡೆಸಿದ ಈ ಗ್ಯಾಂಗ್, ಪೈಶಾಚಿಕವಾಗಿ ವರ್ತಿಸಿದೆ. ರೇಷ್ಮಾ ಅವರ ಬಟ್ಟೆಗಳನ್ನು ಹರಿದು ಹಾಕಿ, ಅರೆನಗ್ನಗೊಳಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ, ‘ನಿನ್ನ ಮೇಲೆ ಅತ್ಯಾ*ಚಾರ ಮಾಡುತ್ತೇವೆ, ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ತಾಯಿಯನ್ನು ರಕ್ಷಿಸಲು ಬಂದ 16 ವರ್ಷದ ಮಗಳು ದಾನಿಯಾಳ ಮೇಲೂ ಈ ಕಿರಾತಕರು ದಾಳಿ ನಡೆಸಿದ್ದಾರೆ. ಬಾಲಕಿಯ ಕಾಲನ್ನು ಹಿಡಿದು ತಿರುಗಿಸಿದ ಪರಿಣಾಮ ಆಕೆಯ ಕಾಲಿಗೆ ತೀವ್ರ ಪೆಟ್ಟು ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ರೇಷ್ಮಾ ಅವರ ಪತಿ ಅಜಾಜ್ ಅಹಮದ್ ಅವರನ್ನೂ ರೌಡಿಗಳು ಹಿಗ್ಗಾಮುಗ್ಗಾ ಥಳಿಸಿ ಅವಮಾನಿಸಿದ್ದಾರೆ. ಈ ಘಟನೆ ಕುರಿತಂತೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕಿ ರೇಷ್ಮಾ ಅವರು ದೂರು ದಾಖಲಿಸಿದ್ದಾರೆ.