
ಜನರ ಪರವಾಗಿ ಧನಿ ಎತ್ತುವ ರಾಘವ್ ಚಡ್ಡಾಗೆ ಶಾಕ್, ರಾಜ್ಯಸಭೆ ಡೆಪ್ಯೂಟಿ ನಾಯಕ ಸ್ಥಾನದಿಂದ ಕೊಕ್ ನೀಡಲಾಗಿದೆ. ಇಷ್ಟೇ ಅಲ್ಲ ರಾಘವ್ ಚಡ್ಡಾಗೆ ಮಾತನಾಡಲು ಅವಕಾಶ ನೀಡದಂತೆ ಸಭೆಗೆ ನಿರ್ದೇಶನ ನೀಡಲಾಗಿದೆ.
ನವದೆಹಲಿ (ಏ.02) ಆಪ್ ಸಂಸದ ರಾಘವ್ ಚಡ್ಡಾ ಪಕ್ಷಾತೀತವಾಗಿ ಜನರು ಇಷ್ಟಪಟ್ಟ ನಾಯಕ. ರಾಜ್ಯಸಭೆಯಲ್ಲಿ ಪ್ರತಿ ಬಾರಿ ಜನರ ಪರವಾಹಿ ಧ್ವನಿ ಎತ್ತಿದ ಸಂಸದನಾಗಿ ಗುರುತಿಸಿಕೊಂಡಿರುವ ರಾಘವ್ ಚಡ್ಡಾಗೆ ಆಮ್ ಆದ್ಮಿ ಪಾರ್ಟಿ ಶಾಕ್ ಕೊಟ್ಟಿದೆ. ರಾಜ್ಯಸಭೆಯ ಡೆಪ್ಯೂಟಿ ನಾಯಕ ಸ್ಥಾನದಿಂದ ರಾಘವ್ ಚಡ್ಡಾರನ್ನು ಕಿತ್ತು ಹಾಕಿದೆ. ಇಷ್ಟೇ ಅಲ್ಲ, ರಾಜ್ಯಸಭೆಯಲ್ಲಿ ರಾಘವ್ ಚಡ್ಡಾಗೆ ಮಾತನಾಡಲು ಸಮಯ ನೀಡಿದಂತೆ ಆಫ್ ಸಭೆಗೆ ಸೂಚಿಸಿದೆ.
ರಾಘವ್ ಚಡ್ಡಾ ನಡೆಗೆ ಆಪ್ ಗರಂ
ರಾಘವ್ ಚಡ್ಡಾ ಇತ್ತೀಚೆಗೆ ಆಪ್ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರಮುಖ ನಾಯಕರು ಜೈಲಿಗೆ ಹೋದಾಗ, ಜೈಲಿನಿಂದ ಬಿಡುಗಡೆಯಾದಾಗಲೂ ಕೇಂದ್ರದ ವಿರುದ್ದ ಬಿಜೆಪಿ ವಿರುದ್ಧ ಯಾವುದೇ ಮಾತು ಆಡಲಿಲ್ಲ. ಇಷ್ಟೇ ಅಲ್ಲ ಕೇಜ್ರಿವಾಲ್ ಸೇರಿದಂತೆ ಆಪ್ ನಾಯಕರ ಪರವಾಗಿ ಒಂದು ಮಾತು ಆಡಿಲ್ಲ ಎಂದು ಆಪ್ ಆಕ್ರೋಶಗೊಂಡಿತ್ತು. ಆಪ್ ನಾಯಕರಿಂದ ದೂರ ಉಳಿದುಕೊಂಡಿರುವ ರಾಘವ್ ಚಡ್ಡಾ ನಡೆಯಿಂದ ಆಪ್ ಕೆರಳಿ ಕೆಂಡಾಮಂಡಲವಾಗಿದೆ ಎಂಬ ಮಾತುಗಳ ಕೇಳಿಬಂದಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಆಪ್ ನಡೆ ಅಚ್ಚರಿ ಮೂಡಿಸಿದೆ. ರಾಜ್ಯಸಭೆಯ ಡೆಪ್ಯೂಟಿ ನಾಯಕ ಸ್ಥಾನದಿಂದ ರಾಘವ್ ಚಡ್ಡಾ ಕಿತ್ತು ಹಾಕಿದ ಆಮ್ ಆದ್ಮಿ ಪಾರ್ಟಿ, ಇದೀಗ ಈ ಸ್ಥಾನಕ್ಕೆ ಅಶೋಕ್ ಮಿತ್ತಲ್ ಹೆಸರನ್ನು ನಾಮನಿರ್ದೇಶಿಸಿದೆ.
ರಾಘವ್ ಚಡ್ಡಾಗೆ ಆಪ್ ಗೂಗ್ಲಿ
ಸಂಸತ್ ಕಾರ್ಯದರ್ಶಿ ಈ ಬದಲಾವಣೆಯನ್ನು ಆದಷ್ಟು ಬೇಗ ಅಂಗೀಕರಿಸಬೇಕು ಎಂದು ಆಪ್ ಮನವಿ ಮಾಡಿದೆ. ರಾಜ್ಯಸಭೆಯಲ್ಲಿ 10 ಸಂಸದರನ್ನು ಹೊಂದಿದೆ. 7 ಸಂಸದರು ಪಂಜಾಬ್‌ನಿಂದ ಹಾಗೂ ಮೂವರು ಸಂಸದರು ದೆಹಲಿಯಿಂದ ಇದ್ದಾರೆ. 2022ರಲ್ಲಿ ರಾಘವ್ ಚಡ್ಡಾ ರಾಜ್ಯಸಭೆಯ ಅತ್ಯಂತ ಕಿರಿಯ ಸಂಸದ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದರು.
ಜನರ ಧನಿಯಾದ ರಾಘವ್ ಚಡ್ಡಾ
ರಾಘವ್ ಚಡ್ಡಾ ರಾಜ್ಯಸಭೆಯಲ್ಲಿ ಜನರ ಪರವಾಗಿ ಮಾತನಾಡಿ ಸರ್ಕಾರದ ಗಮನ ಮಾತ್ರವಲ್ಲ, ಜನಸಾಮಾನ್ಯರ ಗಮನ ಸೆಳೆದಿದ್ದಾರೆ.ಇತ್ತೀಚೆಗೆ ರಾಜ್ಯಸಭೆಯಲ್ಲಿ ಟೆಲಿಕಾಂ ನಡೆಸುತ್ತಿರುವ ನಿಯಮ ಬಾಹಿರ ನೀತಿಗಳ ಕುರಿತು ಮಾತನಾಡಿದ್ದರು. ರೀಚಾರ್ಜ್ ಮಾಡದೇ ಇದ್ದರೆ ಇನ್‌ಕಮಿಂಗ್ ಕಾಲ್ ತಡೆಯುವುದೇಕೆ ಎಂದು ಪ್ರಶ್ನಿಸಿದ್ದರು. ಇಷ್ಟೇ ಅಲ್ಲ 28 ದಿನ ರೀಚಾರ್ಜ್ ಯಾಕೆ 30 ದಿನ ಇರಬೇಕು ಎಂದು ಜನರ ಪರವಾಗಿ ಮಾತನಾಡಿದ್ದರು. ರಾಘವ್ ಚಡ್ಡಾ ಮಾತಿನ ಬಳಿಕ ಕೇಂದ್ರ ಸರ್ಕಾರ ಈ ಕುರಿತು ಟೆಲಿಕಾಂ ಕಂಪನಿಗಳಿಗೆ ಸೂಚಿಸಿತ್ತು. ದೇಶಾದ್ಯಂತ ರಾಘವ್ ಚಡ್ಡಾ ಪರ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
2023ರಲ್ಲಿ ಸಂಜಯ್ ಸಿಂಗ್ ಮೇಲೆ ಗಂಭೀರ ಆರೋಪ, ಜೈಲು ಶಿಕ್ಷೆ ಬೆನ್ನಲ್ಲೇ ರಾಜ್ಯಸಭೆಯಿಂದ ಹೊರಗುಳಿಯಬೇಕಾಯಿತು. ಸಂಜಯ್ ಸಿಂಗ್ ಸ್ಥಾನವನ್ನು ರಾಘವ್ ಚಡ್ಡಾ ತುಂಬಿದ್ದಾರೆ. 2012ರಲ್ಲಿ ಲೋಕಪಾಲ ಬಿಲ್‌ಗಾಗಿ ಅರವಿಂದ್ ಕೇಜ್ರಿವಾಲ್ ನಡೆಸಿದ ಹೋರಾಟದಿಂದ ರಾಘವ್ ಚಡ್ಡಾ ಜೊತೆಗಿದ್ದಾರೆ. ಬಳಿಕ ಆಮ್ ಆದ್ಮಿ ಪಾರ್ಟಿ ಸ್ಥಾಪಿಸಿದಾಗ ರಾಘವ್ ಚಡ್ಡಾ ಆಪ್ ಪಕ್ಷದ ವಕ್ತಾರರಾಗಿ ಹೊರಹೊಮ್ಮಿದ್ದರು. 2015ರಲ್ಲಿ ಆಪ್ ದೆಹಲಿಯಲ್ಲಿ ಅಧಿಕಾರ ಗೆದ್ದುಕೊಂಡಿತು. ಈ ವೇಳೆ ಆಪ್ ಪಕ್ಷದ ಖಜಾಂಚಿಯಾಗಿ ಗಮನಸೆಳೆದಿದ್ದರು. ಇಷ್ಟೇ ಅಲ್ಲ ರಾಜಕೀಯ ಪಕ್ಷದ ಅತ್ಯಂತ ಕಿರಿಯ ಖಜಾಂಚಿ ಎಂಬ ದಾಖಲೆ ಬರೆದಿದ್ದರು.
2019ರಲ್ಲಿ ರಾಘವ್ ಚಡ್ಡಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ರಮೇಶ್ ಬಿದೂರಿ ವಿರುದ್ದ ಸೋಲು ಕಂಡ ರಾಘ್ ಚಡ್ಡಾ, 2020ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಗೆ ಇಳಿದು ಯಶಸ್ಸು ಸಾಧಿಸಿದರು. 2020ರಲ್ಲಿ ರಾಘವ್ ಚಡ್ಡಾ ವಿಧಾನಸಭೆಗೆ ಶಾಸಕನಾಗಿ ಆಯ್ಕೆಯಾಗಿದ್ದರು. ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.