Headlines

ದಾವಣಗೆರೆ, ಬಾಗಲಕೋಟೆ ಕ್ಷೇತ್ರದ ‘ಕೈ; ಟಿಕೆಟ್ ಕದನ: ಕುಟುಂಬದೊಳಗೆ ಪೈಪೋಟಿ, ಹೊರಗೆ ಸಮರ | Bagalkote Davanagere South By Election Congress Ticket Fight Between Family Mrq

ದಾವಣಗೆರೆ, ಬಾಗಲಕೋಟೆ ಕ್ಷೇತ್ರದ ‘ಕೈ; ಟಿಕೆಟ್ ಕದನ: ಕುಟುಂಬದೊಳಗೆ ಪೈಪೋಟಿ, ಹೊರಗೆ ಸಮರ | Bagalkote Davanagere South By Election Congress Ticket Fight Between Family Mrq



ದಾವಣಗೆರೆ, ಬಾಗಲಕೋಟೆ ಕ್ಷೇತ್ರದ ‘ಕೈ; ಟಿಕೆಟ್ ಕದನ: ಕುಟುಂಬದೊಳಗೆ ಪೈಪೋಟಿ, ಹೊರಗೆ ಸಮರ | Bagalkote Davanagere South By Election Congress Ticket Fight Between Family Mrq

ಮಾಜಿ ಸಚಿವರಾದ ಎಚ್‌.ವೈ. ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬದೊಳಗೆ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ.

ಬೆಂಗಳೂರು: ಬಜೆಟ್‌ ಸಿದ್ಧತೆ ಹಾಗೂ ರಾಜಕೀಯ ಮೇಲಾಟದ ನಡುವೆಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯದಲ್ಲೇ ನಡೆಯಲಿರುವ ಎರಡು ಕ್ಷೇತ್ರಗಳ (ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ) ಉಪ ಚುನಾವಣೆಗೆ ತೀವ್ರ ಲಾಬಿ ಆರಂಭಗೊಂಡಿದೆ. ಮಾಜಿ ಸಚಿವ ಎಚ್‌.ವೈ ಮೇಟಿ ಅವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರ, ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನನಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಇನ್ನೂ ಉಪ ಚುನಾವಣೆ ದಿನಾಂಕ ಘೋಷಣೆಯಾಗಿಲ್ಲ. ಆದಾಗ್ಯೂ, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಆರಂಭಗೊಂಡಿದೆ.

ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅಖೈರುಗೊಳಿಸುವ ವಿಚಾರ ಕಾಂಗ್ರೆಸ್ ನಾಯಕತ್ವಕ್ಕೆ ಕಗ್ಗಂಟಾಗಿದೆ. ಆದರೆ, ಬಾಗಲಕೋಟೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ ನಾಯಕತ್ವ ಬಹುತೇಕ ಒಮ್ಮತಕ್ಕೆ ಬಂದಂತಾಗಿದೆ ಎನ್ನುತ್ತವೆ ಮೂಲಗಳು.

ಮೇಟಿ ಮೊದಲ ಪುತ್ರನಿಗೆ ಬಹುತೇಕ ಟಿಕೆಟ್ ಖಚಿತ?

ಏಕೆಂದರೆ, ಬಾಗಲಕೋಟೆ ಶಾಸಕರಾಗಿದ್ದ ಎಚ್‌.ವೈ.ಮೇಟಿ ಅವರ ನಿಧನದಿಂದ ತೆರವಾಗಿರುವ ಸ್ಥಾನದಲ್ಲಿ ಅವರ ಕುಟುಂಬದಿಂದ ಮಾತ್ರ ಪೈಪೋಟಿ ಕಂಡು ಬಂದಿದೆ. ಮೇಟಿ ಅವರ ಮೊದಲ ಪುತ್ರ ಮಲ್ಲಿಕಾರ್ಜುನ ಮೇಟಿ, ಮತ್ತೊಬ್ಬ ಪುತ್ರ ಉಮೇಶ್ ಮೇಟಿ ಹಾಗೂ ಜಿಪಂ ಮಾಜಿ ಅಧ್ಯಕ್ಷೆಯೂ ಆದ ಪುತ್ರಿ ಬಾಯಕ್ಕ ಮೇಟಿ ಅವರೂ ಟಿಕೆಟ್‌ ಬಯಸಿದ್ದಾರೆ. ಈ ಪೈಕಿ ಮೊದಲ ಪುತ್ರ ಮಲ್ಲಿಕಾರ್ಜುನ ಮೇಟಿ ಅವರಿಗೆ ಟಿಕೆಟ್‌ ಬಹುತೇಕ ಖಚಿತ ಎನ್ನಲಾಗುತ್ತಿದೆ. ಕಾಂಗ್ರೆಸ್ ನಾಯಕತ್ವ ಹಾಗೂ ಹೈಕಮಾಂಡ್‌ ಈ ವಿಚಾರದಲ್ಲಿ ಒಮ್ಮತ ಮೂಡಿದ್ದು, ಕೆಲಸ ಆರಂಭಿಸುವಂತೆ ಪರೋಕ್ಷ ಸಂದೇಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಆದಾಗ್ಯೂ ಮತ್ತೊಬ್ಬ ಪುತ್ರ ಹಾಗೂ ಪುತ್ರಿ ಇನ್ನೂ ಲಾಬಿ ಬಿಟ್ಟುಕೊಟ್ಟಿಲ್ಲ. ವಿಶೇಷವಾಗಿ ಪುತ್ರಿ ಬಾಯಕ್ಕ ಮೇಟಿ ತೀವ್ರ ಲಾಬಿ ನಡೆಸಿದ್ದಾರೆ. ಈ ನಡುವೆ ದಿವಂಗತ ಮೇಟಿ ಮಕ್ಕಳ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕಿ ಮುಂದಿನ ಶಾಸಕರು ಯಾರಾಗಬೇಕೆಂದು ವೋಟಿಂಗ್‌ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.

ದಾವಣಗೆರೆ ಕಗ್ಗಂಟು!

ಆದರೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಲಾಬಿ ಇಷ್ಟು ಸರಳವಾಗಿಲ್ಲ. ಅಲ್ಪಸಂಖ್ಯಾತ, ಕುರುಬ ಹಾಗೂ ಲಿಂಗಾಯತ ಮತದಾರರು ಪ್ರಧಾನವಾಗಿರುವ ಈ ಕ್ಷೇತ್ರದಲ್ಲಿ ಈ ಮೂರೂ ಸಮುದಾಯಗಳಿಂದ ಪ್ರಬಲ ಆಕಾಂಕ್ಷಿಗಳು ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸಿದ್ದಾರೆ.

ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ತಮ್ಮ ವರ್ಚಸ್ಸಿನಿಂದ ಈ ಕ್ಷೇತ್ರದಲ್ಲಿ ಗೆದ್ದು ಬರುತ್ತಿದ್ದರು. ಶಾಮನೂರು ಅವರ ನಿಧನದಿಂದ ತೆರವಾಗಿರುವ ಸ್ಥಾನವಾದ್ದರಿಂದ ಅವರ ಕುಟುಂಬಕ್ಕೆ ಟಿಕೆಟ್ ಸಿಗಬೇಕು ಎಂಬುದು ಶಾಮನೂರು ಅವರ ಪುತ್ರರಾದ ಹಾಲಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ವಾದ. ಈ ವಾದವನ್ನು ಆಧಾರವಾಗಿಟ್ಟುಕೊಂಡೇ ತಮ್ಮ ಪುತ್ರ ಹಾಗೂ ಶಾಮನೂರು ಅವರ ಮೊಮ್ಮಗನಾದ ಸಮರ್ಥ್‌ಗೆ ಟಿಕೆಟ್ ನೀಡುವಂತೆ ತೀವ್ರ ಲಾಬಿ ನಡೆಸಿದ್ದಾರೆ.

ಆದರೆ, ಈ ಕ್ಷೇತ್ರ ಮುಸ್ಲಿಂ ಬಾಹುಳ್ಯವಿರುವ ಅಹಿಂದ ಮತದಾರರ ಕ್ಷೇತ್ರ. ಹೀಗಾಗಿ, ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ರಾಜ್ಯದ ಮುಸ್ಲಿಂ ನಾಯಕರು ಒಗ್ಗಟ್ಟಾಗಿ ನಾಯಕತ್ವದ ಮೇಲೆ ಒತ್ತಡ ನಿರ್ಮಾಣ ಮಾಡಿದ್ದಾರೆ.

ಕ್ಷೇತ್ರದಲ್ಲಿ 85 ಸಾವಿರಕ್ಕೂ ಹೆಚ್ಚು ನಿರ್ಣಾಯಕ ಮತಗಳನ್ನು ಮುಸ್ಲಿಂ ಸಮುದಾಯ ಹೊಂದಿದೆ. ಈ ಹಿನ್ನೆಲೆಯಲ್ಲಿ ಮುಖಂಡರು ಹಲವು ಸಭೆಗಳನ್ನು ನಡೆಸಿದ್ದಾರೆ. 1994ರಿಂದಲೂ ಸಮುದಾಯ ಶಾಮನೂರು ಕುಟುಂಬಕ್ಕೆ ಬೆಂಬಲ ನೀಡುತ್ತಾ ಬಂದಿದ್ದೇವೆ. ನನ್ನ ನಂತರ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಲಿ ಎಂದು ಬಹಿರಂಗವಾಗಿಯೇ ಶಾಮನೂರು ಶಿವಶಂಕರಪ್ಪ ಈ ಹಿಂದೆ ಹಲವು ಬಾರಿ ಹೇಳಿದ್ದರು. ಹಾಗಾಗಿ ಈ ಬಾರಿ ತಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಡ ನಿರ್ಮಾಣ ಮಾಡಿದ್ದಾರೆ.

ಮುಸ್ಲಿಂ ಸಮುದಾಯದ ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌, ಹಿರಿಯ ನಾಯಕ ಸೈಫುಲ್ಲಾ ಅವರ ಪುತ್ರರಾದ ಯುವ ನಾಯಕ ಖಾಲಿದ್ ಸೈಫುಲ್ಲಾ ಸೇರಿ ಹಲವು ಆಕಾಂಕ್ಷಿಗಳು ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಇನ್ನು ಕುರುಬ ಸಮುದಾಯದಿಂದ ಕಳೆದ ಬಾರಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ವಿನಯ್‌ ಅವರು ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್‌ ಗಾಗಿ ಪೈಪೋಟಿ ನಡೆಸಿದ್ದಾರೆ.

ಈ ಬಾರಿ ಮುಸ್ಲಿಂ ನಾಯಕರ ಲಾಬಿ ತೀವ್ರಗೊಂಡ ಹಿನ್ನೆಲೆಯಲ್ಲಿ ತಮ್ಮ ಕುಟುಂಬಕ್ಕೆ ಟಿಕೆಟ್‌ ನೀಡಬೇಕು ಎಂಬ ಆಗ್ರಹಕ್ಕೆ ಬಲ ಬರುವಂತೆ ಮಾಡಲು ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರು ರಾಜೀನಾಮೆಯ ಬೆದರಿಕೆ ಒಡ್ಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ಬಹಿರಂಗವಾಗಿ ಯಾರೂ ಖಚಿತಪಡಿಸುತ್ತಿಲ್ಲ.

ಆದರೆ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಸ್‌.ಎಸ್.ಮಲ್ಲಿಕಾರ್ಜುನ್ ಹಾಗೂ ದಾವಣಗೆರೆ ಸಂಸದರಾಗಿರುವ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರ ಒತ್ತಡವನ್ನು ಕಾಂಗ್ರೆಸ್‌ ನಾಯಕತ್ವ ನಿರ್ಲಕ್ಷಿಸಲು ಆಗುತ್ತಿಲ್ಲ. ಆದರೆ, ಮುಸ್ಲಿಂ ಹಾಗೂ ಕುರುಬ ಸಮುದಾಯದ ವಿರೋಧ ಕಟ್ಟಿಕೊಂಡು ಮತ್ತೆ ಲಿಂಗಾಯತರಿಗೆ ಟಿಕೆಟ್ ನೀಡಿದರೆ ಕ್ಷೇತ್ರ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬ ಸಮೀಕ್ಷೆ ವರದಿಗಳ ಹಿನ್ನೆಲೆಯಲ್ಲಿ ಈ ಮೂರು ಸಮುದಾಯಗಳ ಒಟ್ಟಿಗೆ ಒಯ್ಯುವ ಸಾಮರ್ಥ್ಯವಿರುವವರಿಗೆ ಟಿಕೆಟ್ ನೀಡಬೇಕು ಎಂಬ ನಿಲುವು ಕಾಂಗ್ರೆಸ್ ನಾಯಕತ್ವದ್ದು.

ಮುಸ್ಲಿಂ ಹಾಗೂ ಕುರುಬ ಸಮುದಾಯದ ಬೆಂಬಲ

ಏಕೆಂದರೆ, ಈ ಕ್ಷೇತ್ರದಲ್ಲಿ ಲಿಂಗಾಯತ ಅಭ್ಯರ್ಥಿ ಗೆಲ್ಲಬೇಕಾದರೆ ಆತ ಮುಸ್ಲಿಂ ಹಾಗೂ ಕುರುಬ ಸಮುದಾಯದ ಬೆಂಬಲ ಪಡೆಯಲೇಬೇಕು. ಅದೇ ರೀತಿ ಮುಸ್ಲಿಂ ಅಭ್ಯರ್ಥಿ ಗೆಲ್ಲಬೇಕಾದರೆ ಲಿಂಗಾಯತ ಸಮುದಾಯದ ಬೆಂಬಲ ಅತ್ಯಗತ್ಯ. ಹೀಗಾಗಿ ಕ್ಷೇತ್ರದ ಮೂರೂ ಸಮುದಾಯದ ನಾಯಕರು ಒಗ್ಗಟ್ಟಿನ ಹೆಸರು ಸೂಚಿಸಿ ಎಂದು ಸ್ಥಳೀಯ ನಾಯಕತ್ವಕ್ಕೆ ನಿರ್ದೇಶನ ನೀಡಲಾಗಿದೆ. ಆದರೆ, ಟಿಕೆಟ್‌ಗಾಗಿ ಸ್ಥಳೀಯ ನಾಯಕರೇ ತೀವ್ರ ಪೈಪೋಟಿ ನಡೆಸಿರುವುದರಿಂದ ಈ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗುವ ಸಾಧ್ಯತೆ ಕಂಡು ಬರುತ್ತಿದೆ.



Source link

Leave a Reply

Your email address will not be published. Required fields are marked *